ರಥೀಂದ್ರ ಬೋಸ್ ಮತ್ತು ಅನನ್ಯಾ ಬಿರ್ಲಾ 
ದೇಶ

60-70ರ ದಶಕದಲ್ಲಿ ಅಜ್ಜನಿಗೆ ಕಹಿ ಘಟನೆ; ಅಸ್ಸಾಂ ಪ್ರವಾಹದಲ್ಲಿ ಸಹಾಯ ಮಾಡಿದ ಅನನ್ಯಾ ಬಿರ್ಲಾಗೆ ಬಂಗಾಳ ಸ್ಪೀಕರಿಂದ ಕ್ಷಮೆಯಾಚನೆ! | Bengal Speaker

ಕೋಲ್ಕತ್ತಾ: ಭಾರತದ ಪ್ರಮುಖ ಕೈಗಾರಿಕೋದ್ಯಮಿ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರಿ ಅನನ್ಯಾ ಬಿರ್ಲಾ ಅವರಿಗೆ ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭೆಯ ಸ್ಪೀಕರ್(Bengal Speaker) ರಥೀಂದ್ರ ಬೋಸ್ ಪತ್ರವೊಂದನ್ನು ಬರೆದಿದ್ದು, 60-70ರ ದಶಕದಲ್ಲಿ ಕೋಲ್ಕತ್ತಾದಲ್ಲಿ ಅವರ ಅಜ್ಜ ಆದಿತ್ಯ ವಿಕ್ರಮ್ ಬಿರ್ಲಾ ಎದುರಿಸಿದ ಅವಮಾನಕ್ಕಾಗಿ ಕ್ಷಮೆಯಾಚಿಸಿದ್ದಾರೆ.
ಭಾರತ್ ಚೇಂಬರ್ ಆಫ್ ಕಾಮರ್ಸ್​​​ನಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರಥೀಂದ್ರ ಬೋಸ್, ಅಸ್ಸಾಂನ ಪ್ರವಾಹ ಪೀಡಿತ ಜೋರಾಟ್‌ನಲ್ಲಿ ಅನನ್ಯಾ ಬಿರ್ಲಾ ಅವರು ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿರುವ ವೀಡಿಯೊವನ್ನು ನೋಡಿ ತಮಗೆ ತೀವ್ರ ಭಾವುಕತೆಯುಂಟಾಯಿತು ಎಂದು ಹೇಳಿದ್ದಾರೆ.
ಅನನ್ಯಾ ಬಿರ್ಲಾ ಅವರ ಸಹಾಯಸ್ತದ ದೃಶ್ಯದಿಂದ ಪ್ರಭಾವಿತನಾಗಿ ನಾನು ಕೋಲ್ಕತ್ತಾದಲ್ಲಿ ಅನನ್ಯಾ ಬಿರ್ಲಾ ಅವರ ಅಜ್ಜ ಅವಮಾನಕ್ಕೊಳಗಾಗಿದ್ದ ಘಟನೆಗಾಗಿ ಅವರಿಗೆ ಕ್ಷಮಾಪಣಾ ಪತ್ರವನ್ನು ಬರೆದಿದ್ದೇನೆ ಎಂದು ತಿಳಿಸಿದ್ದಾರೆ.
ಕೋಲ್ಕತ್ತಾದ ಜಿಪಿಒ ಎದುರು ಕಾರ್ಮಿಕ ಸಂಘಟನೆಯ ಕಾರ್ಯಕರ್ತರು ಆದಿತ್ಯ ವಿಕ್ರಮ್ ಬಿರ್ಲಾ ಅವರೊಂದಿಗೆ ಅಮಾನವೀಯವಾಗಿ ವರ್ತಿಸಿದರು. ಈ ಘಟನೆಯ ನಂತರ ಅವರು ಎಂದಿಗೂ ಕೋಲ್ಕತ್ತಾಗೆ ಮರಳಲಿಲ್ಲ. ಆ ಕಹಿ ನೆನಪಿನ ಗುರುತು ಇನ್ನೂ ಹಾಗೆಯೇ ಉಳಿದಿದೆ ಎಂದು ಹಳೆ ಘಟನೆಯನ್ನು ನೆನೆಪಿಸಿಕೊಂಡಿದ್ದಾರೆ.
ಈ ಹಿಂದೆ ಬಿಜೆಪಿ ರಾಜ್ಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಸಮಿಕ್ ಭಟ್ಟಾಚಾರ್ಯ ಕೂಡ ಈ ಹಿಂದೆ ಹಲವು ಬಾರಿ ಈ ಘಟನೆಯನ್ನು ಖಂಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಆಡಳಿತ ಮತ್ತು ಕಾರ್ಮಿಕ ಸಂಘಟನೆಗಳು ಭಾರಿ ಪ್ರಭಾವಿತವಾಗಿದ್ದ 60-70 ದಶಕದಲ್ಲಿ ಆದಿತ್ಯ ವಿಕ್ರಂ ಬಿರ್ಲಾ ಅವರಿಗೆ ಅವಮಾನಿಸಿ, ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಈ ಘಟನೆಯಿಂದ ತೀವ್ರವಾಗಿ ನೊಂದಿದ್ದ ಆದಿತ್ಯ ವಿಕ್ರಂ ಬಿರ್ಲಾ ಅವರು, ಕೋಲ್ಕತ್ತಾವನ್ನು ತೊರೆದರು. ಮತ್ತು ಕುಟುಂಬದ ವ್ಯವಹಾರದ ಕೇಂದ್ರವನ್ನು ಮುಂಬೈಗೆ ಸ್ಥಳಾಂತರಿಸಿದರು. ಬಳಿಕ ಬಂಗಾಳದಲ್ಲಿ ಕೈಗಾರಿಕೋದ್ಯಮಕ್ಕೆ ಈ ಘಟನೆ ಬಲವಾದ ಪೆಟ್ಟು ನೀಡಿತು ಎನ್ನಲಾಗಿದೆ (ಏಜೆನ್ಸೀಸ್).