Shreeram Statue In Goa | 77 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ
ಪಣಜಿ: ದಕ್ಷಿಣ ಗೋವಾದ ಕ್ಯಾನಕೋನಾದಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಲಿ ಜೀವೋತ್ತಮ ಮಠದಲ್ಲಿ 77 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ನವೆಂಬರ್ 28) ಅನಾವರಣಗೊಳಿಸಿದರು.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಲಿ ಜೀವೋತ್ತಮ ಮಠದ 550 ನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಶತಮಾನಗಳಿಂದ ಸಮಾಜದ ಪ್ರತಿಯೊಂದು ವರ್ಗವನ್ನು ಬೆಂಬಲಿಸಿರುವ ಸೇವಾ ಮನೋಭಾವ ಮಠದ ವಿಶಿಷ್ಟ ಗುಣಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಅಯೋಧ್ಯೆಯ ರಾಮಮಂದಿರದ ಮೇಲೆ ಪವಿತ್ರ ಧ್ವಜಾರೋಹಣ ಮಾಡಿದ ಕೆಲವೇ ದಿನಗಳಲ್ಲಿ, ವಿಶ್ವದ ಅತಿ ಎತ್ತರದ ಶ್ರೀ ರಾಮನ ಪ್ರತಿಮೆಯನ್ನು ಅನಾವರಣಗೊಳಿಸುವ ಅವಕಾಶ ಸಿಕ್ಕಿದ್ದು ಸಂತಸದ ವಿಷಯವಾಗಿದ್ದು, ಶತಮಾನಗಳ ಹಿಂದೆ ಮಠದ ಈ ಪ್ರದೇಶವು ಚಂಡಮಾರುತ ಮತ್ತು ಇತರೆ ಸವಾಲುಗಳನ್ನು ಎದುರಿಸಿದಾಗ ಜನರು ತಮ್ಮ ಮನೆಗಳು ಮತ್ತು ಕುಟುಂಬಗಳನ್ನು ತೊರೆದು ಹೊಸ ಜಾಗದಲ್ಲಿ ಆಶ್ರಯ ಪಡೆಯಬೇಕಾಯಿತು, ಆ ನಂತರ ಮಠವು ಸಮುದಾಯವನ್ನು ಬೆಂಬಲಿಸಿ, ಹೊಸ ಸ್ಥಳಗಳಲ್ಲಿ ದೇವಾಲಯಗಳು ಮತ್ತು ಆಶ್ರಯಗಳನ್ನು ಸ್ಥಾಪಿಸಿದೆ ಎಂದು ಹೇಳಿದರು.
ಈ ಕಾರ್ಯದ ಮೂಲಕ ಧರ್ಮವನ್ನಷ್ಟೆ ಅಲ್ಲದೇ, ಮಾನವೀಯತೆ ಮತ್ತು ಸಂಸ್ಕೃತಿಯನ್ನು ಸಹ ರಕ್ಷಿಸಿತು. ಕಾಲಾನಂತರದಲ್ಲಿ ಮಠದ ಸೇವೆ ವಿಸ್ತರಿಸಿದೆ. ಇಂದು ಶಿಕ್ಷಣದಿಂದ ಹಾಸ್ಟೆಲ್‌ಗಳವರೆಗೆ, ವೃದ್ಧರ ಆರೈಕೆಯಿಂದ ನಿರ್ಗತಿಕ ಕುಟುಂಬಗಳಿಗೆ ನೆರವಿನ ಹಸ್ತ ಚಾಚುವವರೆಗೆ ಮಠವು ತನ್ನ ಸಂಪನ್ಮೂಲಗಳನ್ನು ಸಾರ್ವಜನಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿದೆ ಎಂದರು. ಸಾಧು, ಸಂತರು ಸಹವಾಸ ಯಾವಾಗಲೂ ತಮಗೆ ಆಧ್ಯಾತ್ಮಿಕ ಅನುಭವ ನೀಡುತ್ತದೆ ಎಂದಿರುವ ಪ್ರಧಾನಿ, ಈ ಕಾರ್ಯಕ್ರಮವು ಜನರಿಗೆ ತಮ್ಮ ಸಂಸ್ಕೃತಿಯೊಂದಿಗೆ ಸಂಪರ್ಕದಲ್ಲಿರಲು ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಕಚೇರಿ (PMO) ಪ್ರಕಾರ, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಲಿ ಜೀವೋತ್ತಮ ಮಠವು ದಕ್ಷಿಣ ಗೋವಾದ ಪರ್ತಗಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮೊದಲ ಗೌಡ್ ಸಾರಸ್ವತ ಬ್ರಾಹ್ಮಣ ವೈಷ್ಣವ ಮಠವಾಗಿದೆ. "ಇದು 13 ನೇ ಶತಮಾನದಲ್ಲಿ ಜಗದ್ಗುರು ಮಧ್ವಾಚಾರ್ಯರು ಸ್ಥಾಪಿಸಿದ ದ್ವೈತ ಕ್ರಮವನ್ನು ಅನುಸರಿಸುತ್ತದೆ" ಎಂದು PMO ತಿಳಿಸಿದೆ.
ಶ್ರೀರಾಮನ 77 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಗುಜರಾತ್‌ನ ಏಕತಾ ಪ್ರತಿಮೆಯ ಹಿಂದಿನ ಹಿರಿಯ ಶಿಲ್ಪಿ ರಾಮ್ ಸುತಾರ್ ನಿರ್ಮಿಸಿದ್ದಾರೆ ಎಂದು ಗೋವಾದ ಲೋಕೋಪಯೋಗಿ ಸಚಿವ ದಿಗಂಬರ್ ಕಾಮತ್ ತಿಳಿಸಿದ್ದಾರೆ.
550 ವರ್ಷಗಳ ಸಂಪ್ರದಾಯ
ಮಠದ ಸಂಪ್ರದಾಯದ 550 ವರ್ಷಗಳನ್ನು ಆಚರಿಸುವ ನಿಟ್ಟಿನಲ್ಲಿ ನವೆಂಬರ್ 27 ರಿಂದ ಡಿಸೆಂಬರ್ 7 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಗೋವಾದಲ್ಲಿರುವ ಮಠದ ಆವರಣವನ್ನು 370 ವರ್ಷಗಳ ಹಿಂದೆ ಕೆನಕೋನಾ (ದಕ್ಷಿಣ ಗೋವಾ ಜಿಲ್ಲೆ) ದ ಪಾರ್ಟಗಲ್ ಗ್ರಾಮದಲ್ಲಿ ನಿರ್ಮಿಸಲಾಗಿದೆ ಎಂದು ಕೇಂದ್ರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಡೆಂಪೊ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆಸಲಾಗಿದ್ದು, ಪ್ರತಿದಿನ 7,000 ರಿಂದ 10,000 ಜನರು ಮಠಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದರು.
ಯುಗಯುಗಗಳಿಂದ ಆಧ್ಯಾತ್ಮಿಕ ಕೇಂದ್ರವಾಗಿ ಸೇವೆ ಸಲ್ಲಿಸಿರುವ ಮಠದ ಆವರಣವನ್ನು ಈಗ ಸಂಪೂರ್ಣವಾಗಿ ನವೀಕರಿಸಲಾಗಿದೆ ಎಂದು ಸಚಿವ ಕಾಮತ್ ಮಾಹಿತಿ ನೀಡಿದ್ದಾರೆ(ಏಜೆನ್ಸೀಸ್).