ಪತ್ನಿ ಮತ್ತು ಆಕೆಯ ಪ್ರೇಮಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ 
ದೇಶ

15 ವರ್ಷದ ಸಂಸಾರ, ಇಬ್ಬರು ಮಕ್ಕಳು: ಆದರೂ ಪ್ರೇಮಿಗಾಗಿ ಪತಿಯನ್ನೇ ಕೊಂದ ಕಿರಾತಕಿ! ಅಸಲಿಗೆ ಆಗಿದ್ದೇನು? | Illegal Affair

ಫರಿದಾಬಾದ್: ತನ್ನ ಅಕ್ರಮ ಸಂಬಂಧಕ್ಕೆ( Illegal Affair) ಅಡ್ಡಿಯಾಗಿದ್ದ ಪತಿಯನ್ನು ಅತ್ಯಂತ ಕ್ರೂರವಾಗಿ ಕೊಂದು, ಮುಖವನ್ನು ಗುರುತು ಸಿಗದಂತೆ ಜಜ್ಜಿ, ರೈಲು ಹಳಿಯ ಮೇಲೆ ಹಾಕಿ 'ಅಪಘಾತ'ವೆಂದು ನಾಟಕವಾಡಿದ್ದ ಪತ್ನಿ ಮತ್ತು ಆಕೆಯ ಪ್ರೇಮಿ ಈಗ ಪೊಲೀಸರ ಅತಿಥಿಗಳಾಗಿದ್ದಾರೆ.
ಹೌದು, ಸಿನೆಮಾ ಶೈಲಿಯ ಸಂಚು, ಪರಪುರುಷನ ವ್ಯಾಮೋಹ ಮತ್ತು ಕ್ರೌರ್ಯದ ಪರಾಕಾಷ್ಠೆ - ಇವೆಲ್ಲವೂ ಸೇರಿದ ಒಂದು ಭೀಕರ ಕೊಲೆ ಪ್ರಕರಣವನ್ನು ಫರಿದಾಬಾದ್ ಪೊಲೀಸರು ಎರಡು ತಿಂಗಳ ನಂತರ ಭೇದಿಸಿದ್ದಾರೆ.
ಈ ಘಟನೆಯು ನವೆಂಬರ್ 30, 2025 ರಂದು ನಡೆದಿದೆ. ಡಿಸೆಂಬರ್ 1 ರಂದು ಫರಿದಾಬಾದ್‌ನ ಮೇವಾಲಾ ಮಹಾರಾಜ್‌ಪುರ ರೈಲ್ವೆ ಹಳಿಗಳ ಮೇಲೆ ಪುರುಷನೊಬ್ಬನ ಮೃತದೇಹ ಪತ್ತೆಯಾಗಿತ್ತು. ಶವದ ಮುಖ ಸಂಪೂರ್ಣವಾಗಿ ಜಜ್ಜಲ್ಪಟ್ಟಿದ್ದರಿಂದ ಆತನನ್ನು ಗುರುತಿಸುವುದು ಅಸಾಧ್ಯವಾಗಿತ್ತು. ಆರಂಭದಲ್ಲಿ ಪೊಲೀಸರು ಇದು ರೈಲು ಡಿಕ್ಕಿಯಾಗಿ ಸಂಭವಿಸಿದ ಅಪಘಾತವಿರಬಹುದು ಎಂದು ಭಾವಿಸಿದ್ದರು. ಮೃತದೇಹದ ಬಳಿ ಯಾವುದೇ ಗುರುತಿನ ಚೀಟಿಗಳು ಇಲ್ಲದ ಕಾರಣ, ಅನಾಮಧೇಯ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಶವವನ್ನು ಶವಾಗಾರದಲ್ಲಿ ಇರಿಸಲಾಗಿತ್ತು.

ಸಹೋದರನ ದೂರು ನೀಡಿದ ಬಿಗ್ ಬ್ರೇಕ್ ಥ್ರೂ

ಜನವರಿ 18 ರಂದು ಮೃತ ಸುಮನ ಸಹೋದರ ಸನ್ನಿ, ಸೂರಜ್‌ಕುಂಡ್ ಪೊಲೀಸ್ ಠಾಣೆಗೆ ಬಂದು ತನ್ನ ಸಹೋದರ ಕಾಣೆಯಾಗಿರುವ ಬಗ್ಗೆ ದೂರು ನೀಡಿದರು. ಪೊಲೀಸರು ಕಾಣೆಯಾದ ವ್ಯಕ್ತಿಯ ವಿವರಗಳನ್ನು ಶವಾಗಾರದಲ್ಲಿದ್ದ ಗುರುತು ಸಿಗದ ಶವಗಳೊಂದಿಗೆ ಹೋಲಿಸಿದಾಗ, ಬಟ್ಟೆ ಮತ್ತು ದೈಹಿಕ ಲಕ್ಷಣಗಳ ಆಧಾರದ ಮೇಲೆ ಅದು ಜಾರ್ಖಂಡ್ ಮೂಲದ ಆಟೋ ಚಾಲಕ ಸುಮನ್ ಎಂದು ದೃಢಪಟ್ಟಿತು. ಸುಮನ ಸಹೋದರ ಸನ್ನಿ ತನ್ನ ಅತ್ತಿಗೆ ಅಂಜನಿ (ಕವಿತಾ) ನಡವಳಿಕೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ತನಿಖೆಗೆ ಹೊಸ ದಿಕ್ಕು ನೀಡಿತು.

ಅಕ್ರಮ ಸಂಬಂಧದ ಅಡ್ಡದಾರಿಯಲ್ಲಿ ಕೊಲೆಯ ಸಂಚು

ಪೊಲೀಸರ ತನಿಖೆಯ ವೇಳೆ ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ. 29 ವರ್ಷದ ಅಂಜನಿ ಮತ್ತು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ರಿಯಾಜುಲ್ (30) ಎಂಬುವವನ ನಡುವೆ ಅಕ್ರಮ ಸಂಬಂಧವಿತ್ತು. ಸುಮನ್ ತನ್ನ ಪತ್ನಿಯ ಈ ವ್ಯವಹಾರವನ್ನು ಪತ್ತೆಹಚ್ಚಿದ್ದರಿಂದ ದಂಪತಿಗಳ ನಡುವೆ ಜಗಳವಾಗುತ್ತಿತ್ತು. ತನ್ನ ಪ್ರೇಮಿಯೊಂದಿಗೆ ಜೀವನ ನಡೆಸಲು ಅಂಜನಿ ತನ್ನ ಪತಿಯನ್ನೇ ದಾರಿಯಿಂದ ಸರಿಸಲು ನಿರ್ಧರಿಸಿ, ಪ್ರೇಮಿಯೊಂದಿಗೆ ಸೇರಿ ಈ ಸ್ಕೆಚ್ ಹಾಕಿದ್ದಳು.

ಕ್ರೌರ್ಯದ ಕರಾಳ ಅಧ್ಯಾಯ

ಪೊಲೀಸರ ಪ್ರಕಾರ, ಕೊಲೆಯ ದಿನದಂದು ಆರೋಪಿಗಳು ಅತ್ಯಂತ ಚಾಣಾಕ್ಷತನದಿಂದ ವರ್ತಿಸಿದ್ದಾರೆ.ನವೆಂಬರ್ 30 ರಂದು ಆರೋಪಿಗಳು ಸುಮನ್‌ನನ್ನು ಮೇವಾಲಾ ಮಹಾರಾಜ್‌ಪುರ ಪ್ರದೇಶಕ್ಕೆ ಕರೆದೊಯ್ದು ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ಸುಮನ್ ಅಮಲಿನಲ್ಲಿದ್ದಾಗ ಕಲ್ಲಿನಿಂದ ಆತನ ತಲೆಯ ಮೇಲೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ. ಸುಮನ್ ಸತ್ತ ನಂತರ ಆತನ ಗುರುತು ಸಿಗಬಾರದು ಎಂಬ ಉದ್ದೇಶದಿಂದ ಆತನ ಮುಖವನ್ನು ರೈಲು ಹಳಿಯ ಮೇಲೆ ಇರಿಸಲಾಗಿತ್ತು. ಆ ಮೂಲಕ ರೈಲು ಹೋದಾಗ ಮುಖ ಜಜ್ಜಿಹೋಗಿ, ಅದು ಕೇವಲ ರೈಲು ಅಪಘಾತವೆಂದು ಪೊಲೀಸರು ನಂಬುವಂತೆ ಮಾಡುವುದು ಇವರ ಉದ್ದೇಶವಾಗಿತ್ತು.

ಜಾರ್ಖಂಡ್‌ಗೆ ಪಲಾಯನ ಮಾಡಿದ್ದ ಕಿರಾತಕಿ

ಕೊಲೆ ಮಾಡಿದ ನಂತರ ಸುಮನ್ ಪತ್ನಿ ಅಂಜನಿ ಯಾರಿಗೂ ಸಂಶಯ ಬಾರದಂತೆ ತವರಿಗೆ (ಜಾರ್ಖಂಡ್) ತೆರಳಿದ್ದಳು. ಕೆಲವು ದಿನಗಳ ನಂತರ ಮರಳಿ ಫರಿದಾಬಾದ್‌ಗೆ ಬಂದಿದ್ದಳು. ಕ್ರೈಂ ಬ್ರಾಂಚ್ ತಂಡವು ತಾಂತ್ರಿಕ ತನಿಖೆ ಮತ್ತು ಮೊಬೈಲ್ ಲೊಕೇಶನ್ ಆಧಾರದ ಮೇಲೆ ಇಬ್ಬರನ್ನೂ ಬಂಧಿಸಿದೆ. ವಿಚಾರಣೆಯ ವೇಳೆ ಇಬ್ಬರೂ ತಮ್ಮ ಪಾಪದ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ಸುಮನ್ ಮತ್ತು ಅಂಜನಿಗೆ ಮದುವೆಯಾಗಿ 15 ವರ್ಷಗಳಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಕೇವಲ ಕ್ಷಣಿಕ ಸುಖಕ್ಕಾಗಿ ತಂದೆಯನ್ನೇ ಕೊಂದು ತಾಯಿ ಜೈಲು ಪಾಲಾಗಿರುವುದು ಆ ಮಕ್ಕಳ ಬದುಕನ್ನು ಅಂಧಕಾರಕ್ಕೆ ದೂಡಿದೆ. ಆರೋಪಿಗಳನ್ನು ಸದ್ಯ 4 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ,(ಏಜೆನ್ಸೀಸ್​).