ಫಿರೋಜಾಬಾದ್: ಉತ್ತರ ಪ್ರದೇಶದ ಬ್ಯಾಂಕ್‌ನ ಭರೌಲ್ ಶಾಖೆಯ ಲಾಕರ್‌ನಲ್ಲಿದ್ದ 96 ಚಿನ್ನದ ಪ್ಯಾಕೆಟ್‌ಗಳು ಮಿಸ್ ಆಗಿದ್ದು, ಅಡವಿಟ್ಟ ಗೋಲ್ಡ್ ಕಣ್ಮರೆ ಬೆನ್ನಲ್ಲೇ ಗ್ರಾಹಕರು ಕಂಗಾಲಾಗಿದ್ದಾರೆ. ಪ್ರಕರಣ ಬೆನ್ನತ್ತಿದ ಖಾಕಿ ಪಡೆ, ಮ್ಯಾಜಿ ಮ್ಯಾನೇಜರ್ ಸೇರಿ ಒಟ್ಟು ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಒಟ್ಟು 96 ಚಿನ್ನದ ಪ್ಯಾಕೆಟ್‌ಗಳು ನಿಗೂಢವಾಗಿ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದೇ ತಡ ಗೋಲ್ಮಾಲ್ ಹಿಂದಿರುವ ಕಾಣದ ಕೈಗಳು ಯಾರದ್ದು ಎಂಬ ತನಿಖೆ ಚುರುಕಾಗಿದೆ. ಚಿನ್ನದ ನಿಖರ ತೂಕ ಅಥವಾ ಮೌಲ್ಯವನ್ನು ಅಧಿಕಾರಿಗಳು ಇಲ್ಲಿಯವರೆಗೆ ಅಧಿಕೃತವಾಗಿ ಘೋಷಿಸದಿದ್ದರೂ, ಇದರ ಮೌಲ್ಯ ಕೋಟ್ಯಂತರ ರೂಪಾಯಿ ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಆಗ್ರಾ ಪ್ರಾದೇಶಿಕ ಕಚೇರಿಯ ಮುಖ್ಯ ವ್ಯವಸ್ಥಾಪಕ (ಚೀಫ್ ಮ್ಯಾನೇಜರ್) ಆದಿತ್ಯ ಪ್ರತಾಪ್ ಸಿಂಗ್ ಅವರು ಬುಧವಾರ ರಾತ್ರಿ ಅರಾವೊನ್ ಪೊಲೀಸ್ ಠಾಣೆಯಲ್ಲಿ ಅಂದಿನ ಶಾಖಾ ವ್ಯವಸ್ಥಾಪಕರು ಸೇರಿ ಮೂವರು ಉದ್ಯೋಗಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಲಾಕರ್ ಕೀ ಹೊಂದಿದ್ದ ಉದ್ಯೋಗಿಯೇ ಮಿಸ್ಸಿಂಗ್
ಪೊಲೀಸ್ ವರಿಷ್ಠಾಧಿಕಾರಿ (SP) ಆದಿತ್ಯ ಲಾಂಗೇ ಅವರು ನೀಡಿರುವ ಮಾಹಿತಿ ಪ್ರಕಾರ, ಬ್ಯಾಂಕ್‌ನ ಸಿಬ್ಬಂದಿ ಹಾಗೂ ಲಾಕರ್‌ಗಳ ಕೀ ಹೊಂದಿದ್ದ ಉದ್ಯೋಗಿ ದಿಲೀಪ್ ಕುಮಾರ್, ಕಳೆದ ಮೇ.27ರಂದು ದಿಢೀರ್ ನಾಪತ್ತೆಯಾದರು. ಯಾವುದೇ ಮಾಹಿತಿ ನೀಡದೆ ರಜೆಗಳನ್ನು ಹಾಕಿದ್ದನ್ನು ಗಮನಿಸಿದ ಬ್ಯಾಂಕ್ ಮ್ಯಾನೇಜರ್, ಲಾಕರ್ಗೆ ಸಂಬಂಧಿಸಿದ ಎಲ್ಲ ಕೆಲಸಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದರು. ಆದರೆ, ಅಷ್ಟರೊಳಗೆ ಚಿನ್ನದ ಪ್ಯಾಕೆಟ್‌ಗಳು ಕಳವು ಆಗಿತ್ತು ಎಂಬುದೇ ಶಾಕಿಂಗ್.
ವಿಡಿಯೋ ರೆಕಾರ್ಡಿಂಗ್‌ನಲ್ಲಿ ಬಯಲಾಯ್ತು ವಂಚನೆ!
ಡುಪ್ಲಿಕೆಟ್ ಕೀ ಬಳಸಿಕೊಂಡು ಲಾಕರ್ಗಳನ್ನು ಓಪನ್ ಮಾಡಿದಾಗ, ಅಲ್ಲಿ ಯಾವುದೇ ಚಿನ್ನದ ಪ್ಯಾಕೆಟ್‌ಗಳು ಇರಲಿಲ್ಲ. ಇಡೀ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡಿಂಗ್ ಮಾಡಿಕೊಳ್ಳುತ್ತಲೇ, ಲಾಕರ್ಗಳನ್ನು ತೆರೆದ ಅಧಿಕಾರಿಗಳು, 96 ಚಿನ್ನದ ಪ್ಯಾಕೆಟ್‌ಗಳು ಮಿಸ್ ಆಗಲು ಹೇಗೆ ಸಾಧ್ಯ? ಇದರ ಹಿಂದೆ ದಿಲೀಪ್ ಕೈವಾಡವಿರಬಹುದು ಎಂದು ಶಂಕಿಸಿ, ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.
ಪ್ರಕರಣ ದಾಖಲು
ಮಾಜಿ ಶಾಖಾ ವ್ಯವಸ್ಥಾಪಕ ಸಂದೀಪ್ ಯಾದವ್, ಸಿಬ್ಬಂದಿ ಅಧಿಕಾರಿ ದಿಲೀಪ್ ಕುಮಾರ್ ಮತ್ತು ಕ್ರೆಡಿಟ್ ಅಧಿಕಾರಿ ನರೇಶ್ ಕುಮಾರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 316(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).