ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಅಖಾಡ ಸಜ್ಜಾಗುತ್ತಿದ್ದು, ಕೇಂದ್ರ ಚುನಾವಣಾ ಆಯೋಗವು ನಡೆಸಿದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಒಟ್ಟು 90.66 ಲಕ್ಷ (ಸುಮಾರು 91 ಲಕ್ಷ) ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಈ ಬೆಳವಣಿಗೆಯು ಮುಂಬರುವ ಚುನಾವಣೆಯ ಫಲಿತಾಂಶವನ್ನು ಬುಡಮೇಲು ಮಾಡಬಲ್ಲ ಶಕ್ತಿ ಹೊಂದಿರುವುದರಿಂದ ರಾಜಕೀಯ ವಿಶ್ಲೇಷಕರಲ್ಲಿ ತೀವ್ರ ಕುತೂಹಲ ಮನೆ ಮಾಡಿದೆ.
ಕುಗ್ಗುತ್ತಿರುವ ಮತಗಳ ಅಂತರ: ಆಡಳಿತ ಪಕ್ಷಕ್ಕೆ ಭೀತಿ?
ರಾಜ್ಯದ ಎರಡು ಪ್ರಮುಖ ಶಕ್ತಿಗಳಾದ ತೃಣಮೂಲ ಕಾಂಗ್ರೆಸ್ (TMC) ಮತ್ತು ಬಿಜೆಪಿ ನಡುವಿನ ಮತಗಳ ಅಂತರವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದು ಈ ಬಾರಿ ವಿಶೇಷ ಗಮನ ಸೆಳೆದಿದೆ.
2021ರ ಚುನಾವಣೆ: ಟಿಎಂಸಿ ಮತ್ತು ಬಿಜೆಪಿ ನಡುವಿನ ಅಂತರ 60 ಲಕ್ಷ ಮತಗಳಿಗಿಂತ ಹೆಚ್ಚಿತ್ತು.
2024ರ ಲೋಕಸಭೆ ಚುನಾವಣೆ: ಈ ಅಂತರವು ಸುಮಾರು 42 ಲಕ್ಷಕ್ಕೆ ಇಳಿಕೆಯಾಗಿದೆ.
ಈಗ ಸುಮಾರು 91 ಲಕ್ಷ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಈ ಅಂತರವನ್ನು ಮತ್ತಷ್ಟು ಕುಗ್ಗಿಸಬಹುದು ಅಥವಾ ಸಂಪೂರ್ಣವಾಗಿ ಬದಲಿಸಬಹುದು ಎಂದು ಅಂದಾಜಿಸಲಾಗಿದೆ.
ಸಮೀಕ್ಷೆ ಮತ್ತು ಸಾರ್ವಜನಿಕರ ಅಭಿಪ್ರಾಯ
ಸಾಮಾಜಿಕ ಜಾಲತಾಣಗಳಲ್ಲಿ ನಡೆಸಲಾದ ಇತ್ತೀಚಿನ ಸಮೀಕ್ಷೆಯು ಆಸಕ್ತಿದಾಯಕ ಅಂಶವೊಂದನ್ನು ಬಿಚ್ಚಿಟ್ಟಿದ್ದು, ಸುಮಾರು 90% ರಷ್ಟು ಜನರು ಈ ಬದಲಾವಣೆಯಿಂದ ಆಡಳಿತಾರೂಢ ಟಿಎಂಸಿಗೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇವಲ 7% ಜನರು ಮಾತ್ರ ಬಿಜೆಪಿಯ ಮೇಲೆ ಪರಿಣಾಮ ಬೀರಬಹುದು ಎಂದು ಭಾವಿಸಿದ್ದರೆ, 3% ಜನರು ಅನಿಶ್ಚಿತತೆ ವ್ಯಕ್ತಪಡಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದ ಜಿಲ್ಲೆಗಳ ಮೇಲೆ ಹೆಚ್ಚಿನ ಪರಿಣಾಮ
ಮುರ್ಷಿದಾಬಾದ್, ಉತ್ತರ 24 ಪರಗಣ ಮತ್ತು ಮಾಲ್ಡಾದಂತಹ ಅಲ್ಪಸಂಖ್ಯಾತರು ಹೆಚ್ಚಿರುವ ಜಿಲ್ಲೆಗಳಲ್ಲಿ ಅತಿ ಹೆಚ್ಚು ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಮುರ್ಷಿದಾಬಾದ್ ಒಂದರಲ್ಲೇ ಸುಮಾರು 4.5 ಲಕ್ಷ ಹೆಸರುಗಳು ಅಳಿಸಿಹೋಗಿವೆ. ಇದು ಟಿಎಂಸಿಯ ಸಾಂಪ್ರದಾಯಿಕ ಮತಬ್ಯಾಂಕ್ ಮೇಲೆ ನೇರ ಪರಿಣಾಮ ಬೀರಲಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಜೋರಾಗಿವೆ.
ತಜ್ಞರ ವಿಶ್ಲೇಷಣೆ: ಫಲಿತಾಂಶದ ಮೇಲಿನ ಪ್ರಭಾವ ಏನು..?
ಪ್ರಾಧ್ಯಾಪಕ ರವೀಂದ್ರನಾಥ ಭಟ್ಟಾಚಾರ್ಯ ಪ್ರಕಾರ, ಪ್ರಮುಖ ಪಕ್ಷಗಳ ನಡುವಿನ ಗೆಲುವಿನ ಅಂತರ ತೀರಾ ಕಡಿಮೆ ಇರುವಾಗ, 91 ಲಕ್ಷ ಮತದಾರರ ಅಳಿಸುವಿಕೆ ಸಾಮಾನ್ಯ ವಿಷಯವಲ್ಲ. ಇದು ಇಡೀ ಚುನಾವಣಾ ಫಲಿತಾಂಶವನ್ನೇ ಬದಲಿಸಬಲ್ಲದು. ಮತ್ತೊಬ್ಬ ಪ್ರೊಫೆಸರ್ ಪ್ರತಿಪ್ ಚಟ್ಟೋಪಾಧ್ಯಾಯ, ಆಡಳಿತ ವಿರೋಧಿ ಭಾವನೆ ಮತ್ತು ಬದಲಾದ ಮತದಾರರ ಸಂಖ್ಯೆಯು ವಿರೋಧ ಪಕ್ಷವಾದ ಬಿಜೆಪಿಗೆ ಪೂರಕವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ನಿಕಟ ಪೈಪೋಟಿಯ ಸ್ಥಾನಗಳೇ ನಿರ್ಣಾಯಕ
2021ರ ಫಲಿತಾಂಶಗಳನ್ನು ಗಮನಿಸಿದರೆ, ಮತದಾರರ ಪಟ್ಟಿಯ ಈ ಪರಿಷ್ಕರಣೆ ಎಷ್ಟು ಅಪಾಯಕಾರಿ ಎಂಬುದು ತಿಳಿಯುತ್ತದೆ. 7 ಸ್ಥಾನಗಳಲ್ಲಿ ಗೆಲುವಿನ ಅಂತರ 1,000 ಮತಗಳಿಗಿಂತ ಕಡಿಮೆ ಇತ್ತು. 36 ಸ್ಥಾನಗಳಲ್ಲಿ ಗೆಲುವಿನ ಅಂತರ 5,000 ಮತಗಳಿಗಿಂತ ಕಡಿಮೆ ಇತ್ತು. ಇಂತಹ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಆಗಿರುವ ದೊಡ್ಡ ಬದಲಾವಣೆಯು ಅಭ್ಯರ್ಥಿಗಳ ಸೋಲು-ಗೆಲುವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬರಲಿದೆ. ಅಲ್ಲಿಯವರೆಗೆ ಈ ವಿಶೇಷ ತೀವ್ರ ಪರಿಷ್ಕರಣೆ (SIR) ಯಾರಿಗೆ ಅದೃಷ್ಟ ತರಲಿದೆ ಎಂಬುದು ನಿಗೂಢವಾಗಿದೆ(ಏಜೆನ್ಸೀಸ್).