ಸಾಂದರ್ಭಿಕ ಚಿತ್ರ  
ದೇಶ

ಈ ಊರಿನಲ್ಲಿ ಪತ್ತೆಯಾಯ್ತು 900 ವರ್ಷ ಹಳೆಯ ಶಿವ ದೇಗುಲ! ಆಲದ ಮರದಲ್ಲಿ ಅಡಗಿತ್ತು ಚೋಳರ ಕಾಲದ ಇತಿಹಾಸ | Chola Era

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನಲ್ಲಿ 900 ವರ್ಷಗಳಷ್ಟು ಹಳೆಯದಾದ ಶಿವನ ದೇಗುಲ ಪತ್ತೆ
  • ಬೃಹತ್​ ಆಲದ ಮರದ ಹಿಂದೆ ಮುಚ್ಚಿಹೋಗಿತ್ತು ಶಿವನ ಮೂರ್ತಿ
  • ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಪುರಾತತ್ವ ಇಲಾಖೆ ಸಜ್ಜು
ಚೆನ್ನೈ: ಪ್ರಸ್ತುತ, ಕರ್ನಾಟಕದ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಮನೆ ಕಟ್ಟಿಸಲೆಂದು ಹೋದ ಬಡ ಕುಟುಂಬಕ್ಕೆ ಪಾಯ ತೆಗೆಯುವಾಗ ಸಿಕ್ಕ ನಿಧಿ ರಹಸ್ಯ ಇದೀಗ ರಾಜ್ಯ ಮಾತ್ರವಲ್ಲದೇ ದೇಶವ್ಯಾಪಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಸದ್ಯವಿದು ಲಕ್ಕುಂಡಿಯ ಗ್ರಾಮಸ್ಥರಲ್ಲಿ ತೀರ ಆತಂಕ ಸೃಷ್ಟಿಸಿದ್ದು, ಮುಂದೆ ಏನೆಲ್ಲ ಸಮಸ್ಯೆಗಳು ಕಾಡಬಹುದು ಎಂಬ ಚಿಂತೆಗೆ ದೂಡಿದೆ. ಇದೇ ರೀತಿ ಈಗ ತಮಿಳುನಾಡಿನಲ್ಲಿ 900 ವರ್ಷಗಳಷ್ಟು ಹಳೆಯದಾದ ಶಿವನ ದೇಗುಲವೊಂದು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.  

ಚೋಳರ ಕಾಲದ್ದು... 

ತಮಿಳುನಾಡಿನಲ್ಲಿ ಪತ್ತೆಯಾಗಿರುವ ಈ ದೇಗುಲವು ಚೋಳರ ಕಾಲದ್ದು ಎನ್ನಲಾಗಿದೆ. 900 ವರ್ಷಗಳಷ್ಟು ಹಳೆಯದಾದ ಶಿವ ದೇಗುಲವು, ಬೃಹತ್​ ಆಲದ ಮರದಿಂದ ಮುಚ್ಚಿಹೋಗಿತ್ತು ಎಂದು ವರದಿಯಾಗಿದೆ. ಕೃಷ್ಣಗಿರಿ ಜಿಲ್ಲೆಯ ಹೊಸೂರು ಬಳಿಯ ಬೇಗಿಲಿ ಗ್ರಾಮದಲ್ಲಿ ಶಿವನ ಮೂರ್ತಿ ಕಣ್ಣಿಗೆ ಬಿದ್ದಿದೆ. ಸ್ಥಳೀಯ ಶಿಕ್ಷಕಿ ಮತ್ತು ಪುರಾತತ್ತ್ವ ಶಾಸ್ತ್ರದ ಸಂಶೋಧಕಿಯಾದ ಜಯಲಕ್ಷ್ಮಿ ಅವರು ಈ ಸಂಶೋಧನೆಯ ನೇತೃತ್ವ ವಹಿಸಿಕೊಂಡಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಮುಂದಾಗಿದ್ದಾರೆ. 

ಬೆಟ್ಟದ ತಪ್ಪಲು

ಕೃಷ್ಣಗಿರಿ ವಸ್ತುಸಂಗ್ರಹಾಲಯ ಮತ್ತು ಇತಿಹಾಸ ದಾಖಲಾತಿ ತಂಡಗಳಿಂದ ಸಹಾಯ ಪಡೆದಿರುವ ಜಯಲಕ್ಷ್ಮಿ ಅವರು, ಈ ದೇವಾಲಯವು ಗುಡ್ಡದ ತಪ್ಪಲಿನಲ್ಲಿದೆ. ಕುತೂಹಲಕಾರಿ ಎಂದರೆ, ಬೇಗಿಲಿ ಎಂಬ ಗ್ರಾಮದ ಹೆಸರು "ಆದಿಕ್ ಕರಡು" ಅಥವಾ "ಬೆಟ್ಟದ ತಪ್ಪಲು" ಎಂಬ ಅರ್ಥವನ್ನು ಸೂಚಿಸುತ್ತದೆ. ಅಸಲಿಗೆ, ಈ ಆರದ ಮರವು ಸುಮಾರು 200 ವರ್ಷಗಳಷ್ಟು ಹಳೆಯದ್ದಾಗಿದೆ. ಇದು ದೇವಾಲಯವನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವ ಹಿನ್ನೆಲೆ ಶಿವನ ದೇಗುಲ ಜನರ ಕಣ್ಣಿನಿಂದ ದೂರವಾಗಿತ್ತು ಎಂದಿದ್ದಾರೆ. ಇತ್ತೀಚಿನ ತೆರವುಗೊಳಿಸುವ ಪ್ರಕ್ರಿಯೆಯ ಸಂದರ್ಭದಲ್ಲಿ ದೇಗುಲ ಪತ್ತೆಯಾಗಿದ್ದು ಬಿಟ್ಟರೆ, ಇಲ್ಲಿಯವರೆಗೆ ಗ್ರಾಮದ ಯಾರೊಬ್ಬರೂ ಕೂಡ ಈ ಸ್ಥಳದತ್ತ ಕಾಲಿಟ್ಟಿರಲಿಲ್ಲ ಎಂಬುದು ಮತ್ತೊಂದು ಅಚ್ಚರಿಯ ಸಂಗತಿ.  

ಚೋಳರ ಕಾಲದ್ದೇನಾ?

'ವಯೋನ್​' ವರದಿಯ ಪ್ರಕಾರ, 11ನೇ ಶತಮಾನದಷ್ಟು ಹಳೆಯದ್ದು ಎನ್ನಲಾದ ಈ ದೇವಾಲಯವು ಕುಲೋತ್ತುಂಗ ಚೋಳ I (1070–1122 CE) ಆಳ್ವಿಕೆಗೆ ಸಾಕ್ಷಿಯಾಗಿದೆ. ನಿರ್ದಿಷ್ಟ ವಾಸ್ತುಶಿಲ್ಪದ ಗುರುತುಗಳು ಪುರಾತತ್ವ ಇಲಾಖೆಗೆ ಇದು ಚೋಳರ ಆಳ್ವಿಕೆ ಮತ್ತು 900 ವರ್ಷಗಳಷ್ಟು ಹಳೆಯದ್ದು ಎಂದು ಹೇಳಲು ಸಹಾಯ ಮಾಡಿತು.  

ಸ್ಥಳೀಯರು ಹೇಳುವುದೇನು?

ಸ್ಥಳೀಯ ನಿವಾಸಿಗಳು ಮತ್ತು ಸಂಶೋಧಕರು ಈಗ ತಮಿಳುನಾಡು ಸರ್ಕಾರ ಮತ್ತು ಪುರಾತತ್ವ ಇಲಾಖೆಗೆ ದೇಗುಲ ಮತ್ತು ಅದರ ಹಿಂದಿನ ವೈಭವವನ್ನು ಮರು ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದಾರೆ. ಈ ಪ್ರದೇಶದಲ್ಲಿ ಚೋಳರ ಯುಗದ ಇತಿಹಾಸ ಏನು? ಮತ್ತು ಇಲ್ಲಿ ಇನ್ನೂ ಏನೆಲ್ಲ ಸಿಗಬಹುದು? ಎಂಬ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ,(ಏಜೆನ್ಸೀಸ್).