ನವದೆಹಲಿ: ವಿದ್ಯಾರ್ಥಿ ಸಮೂಹದಲ್ಲಿನ ಆತ್ಮಹತ್ಯೆ ಪ್ರವೃತ್ತಿ ಕುರಿತು ಸಮೀಕ್ಷೆ ನಡೆಸಿರುವ ಸುಪ್ರೀಂಕೋರ್ಟ್ ನೇಮಿತ ಕಾರ್ಯಪಡೆಯೊಂದು ತನ್ನ ವರದಿಯಲ್ಲಿ ಆತಂಕಕಾರಿ ಅಂಶಗಳನ್ನು ಬಹಿರಂಗಪಡಿಸಿದೆ. ಶೇ.9ರಷ್ಟು ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಮನೋಭಾವ ಮೂಡಿತ್ತು ಹಾಗೂ ಪ್ರತಿಶತ 34 ವಿದ್ಯಾರ್ಥಿಗಳಲ್ಲಿ ತಾವು ಕ್ಯಾಂಪಸ್ನಿಂದ ಹೊರಗಿನವರೆಂಬ ಭಾವನೆ ಮನೆ ಮಾಡಿತ್ತು ಎಂಬ ಅಂಶಗಳು ರಾಷ್ಟ್ರೀಯ ಕಾರ್ಯ ಪಡೆ (ಎನ್ಟಿಎಫ್) ಸಲ್ಲಿಸಲಿರುವ ಅಂತಿಮ ವರದಿಯಲ್ಲಿ ದಾಖಲಾಗಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕುರಿತ ಕಾಳಜಿಯನ್ನು ನಿಭಾಯಿಸಲು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಎಚ್ಇಐ) ಆತ್ಮಹತ್ಯೆಗಳನ್ನು ತಡೆಯಲು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ರಚಿಸಲಾಗಿದ್ದ ಕಾರ್ಯ ಪಡೆ ಅಕ್ಟೋಬರ್ 31ರೊಳಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ. ಇತ್ತೀಚೆಗೆ ದೆಹಲಿ ಮತ್ತು ಬಾಂಬೆ ಐಐಟಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರವೃತ್ತಿ ಕುರಿತು ಹೊಸದಾಗಿ ಚರ್ಚೆ ಆರಂಭವಾಗಿದೆ.
ಎನ್ಟಿಎಫ್ ನಡೆಸಿದ ಸಮೀಕ್ಷೆಯಲ್ಲಿ 2.43 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದು, ಅವರಲ್ಲಿ ಶೇ. 67ರಷ್ಟು ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿದವರು.
ಎಚ್ಇಐಗಳ ಶೇ.15 ವಿದ್ಯಾರ್ಥಿಗಳು ಹಿಂದಿನ 6 ತಿಂಗಳ ಒಂದಲ್ಲ ಒಂದು ಅವಧಿಯಲ್ಲಿ ತೀವ್ರ ಒತ್ತಡ ಮತ್ತು ಖಿನ್ನತೆಗೆ ಒಳಗಾಗಿದ್ದರು. ಶೇ. 9 ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಆಲೋಚನೆ ಬಂದಿತ್ತು.
ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಾಮಾಜಿಕ ತಾರತಮ್ಯ ಆಳವಾಗಿ ಬೇರೂರಿರುವುದು ಹಾಗೂ ಲೈಂಗಿಕ ಕಿರುಕುಳ ವ್ಯಾಪಕವಾಗಿರುವುದನ್ನು ಈ ವರ್ಷದ ಆರಂಭದಲ್ಲಿ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ಸಮಿತಿ ದಾಖಲಿಸಿತ್ತು.
ವೈದ್ಯಕೀಯ, ಕಾನೂನು ಮತ್ತು ರಾಜ್ಯ ವಿವಿಗಳಲ್ಲಿ ಬೋಧಕರಿಂದ ಅಕಾಡೆಮಿಕ್ ಬೆಂಬಲದ ವಿಚಾರದಲ್ಲಿ ತಾರತಮ್ಯ ನಡೆಯುತ್ತಿವೆ.
ನೀಟ್ಯುಜಿ ಮತ್ತು ಜೆಇಇ ರ್ಯಾಂಕ್ ಆಧಾರದಲ್ಲಿ ಜಾತಿ ಗುರುತಿಸುವಿಕೆ, ಅವಮಾನ ವ್ಯಾಪಕ.
ವಿದ್ಯಾರ್ಥಿಗಳು ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡು ಪ್ರಾಣ ಕಳೆದುಕೊಳ್ಳುತ್ತಾರೋ ಅಥವಾ ಬೇರೆ ಯಾವುದೇ ವಿಧಾನವನ್ನು ಬಳಸುತ್ತಾರೋ ಎನ್ನುವುದು ಪ್ರಶ್ನೆಯಲ್ಲ. ವಿದ್ಯಾರ್ಥಿಗಳಲ್ಲಿ ಒತ್ತಡವನ್ನು ನಿಭಾಯಿಸುವ ನಿಟ್ಟಿನಲ್ಲಿ ಆಪ್ತ ಸಮಾಲೋಚನೆ ನಡೆಸುವುದು ಅಗತ್ಯ. ಐಐಟಿ ಬಾಂಬೆ ಮತ್ತು ಬಿಐಟಿ ಮೆಸ್ರಾದಲ್ಲಿ ಇಬ್ಬರ ಆತ್ಮಹತ್ಯೆ ನಂತರ ಹಾಸ್ಟೆಲ್ಗಳಲ್ಲಿನ ಸೀಲಿಂಗ್ ಫ್ಯಾನ್ಗಳನ್ನು ತೆಗೆಯಲು ಕ್ರಮಕೈಗೊಳ್ಳಲಾಗಿತ್ತು. ಇದಕ್ಕೂ ಮೂರು ವರ್ಷಗಳ ಹಿಂದೆ, ರಾಜಸ್ಥಾನದ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗುತ್ತಿದ್ದ 25 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡ ಹಿನ್ನೆಲೆಯಲ್ಲಿ ಕೋಚಿಂಗ್ ಕೇಂದ್ರಗಳು ಹೆಚ್ಚಾಗಿರುವ ಊರುಗಳ ಹಾಸ್ಟೆಲ್ಗಳಲ್ಲಿ ‘ಆತ್ಮಹತ್ಯೆ ನಿರೋಧಕ ಸ್ಪಿŠಂಗ್ಲೋಡೆಡ್ ಸೀಲಿಂಗ್ ಫ್ಯಾನ್ಗಳು’ ಮತ್ತು ಬಾಲ್ಕನಿ ಹಾಗೂ ಲಾಬಿಗಳಲ್ಲಿ ‘ಆತ್ಮಹತ್ಯೆ ನಿರೋಧಕ ಜಾಲರಿ’ ಅಳವಡಿಸುವುದನ್ನು ಅಧಿಕಾರಿಗಳು ಕಡ್ಡಾಯಗೊಳಿಸಿದ್ದರು.