ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 8ನೇ ವೇತನ ಆಯೋಗದ ಕುರಿತು ಭರ್ಜರಿ ಸಿಹಿಸುದ್ದಿಯೊಂದು ಹೊರಬಿದ್ದಿದೆ. 8ನೇ ವೇತನ ಆಯೋಗದ ಶಿಫಾರಸುಗಳ ಜಾರಿ ವಿಳಂಬವಾದರೂ, 2026ರ ಜನವರಿ 1ರಿಂದಲೇ ವೇತನ ಬಾಕಿ ಹಣ (Arrears) ಪಾವತಿಯಾಗುವುದು 100% ಖಚಿತ ಎಂದು ರಾಷ್ಟ್ರೀಯ ಮಂಡಳಿ-ಜಂಟಿ ಸಮಾಲೋಚನಾ ಯಂತ್ರದ (NC-JCM) ಸಿಬ್ಬಂದಿ ವಿಭಾಗದ ಮುಖ್ಯಸ್ಥ ಶಿವ ಗೋಪಾಲ್ ಮಿಶ್ರಾ ಭರವಸೆ ನೀಡಿದ್ದಾರೆ.
ಅರಿಯರ್ಸ್ ಪಾವತಿ ವಿಚಾರದಲ್ಲಿ ಯಾವುದೇ ಅನುಮಾನ ಬೇಡ 2026ರ ಜನವರಿ 1ರಿಂದಲೇ ಬಾಕಿ ಹಣ ನೀಡಲಾಗುತ್ತದೆ ಎಂಬ ವಿಶ್ವಾಸವಿದೆ. ಈ ಕುರಿತು ಬೇರೆ ರೀತಿಯ ಹೇಳಿಕೆಗಳನ್ನು ನಂಬಬಾರದು ಎಂದು ಮಿಶ್ರಾ ತಿಳಿಸಿದ್ದಾರೆ. ಅವರ ಈ ಹೇಳಿಕೆ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
2025ರ ಅಕ್ಟೋಬರ್ನಲ್ಲಿ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚಿಸುವ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಆದರೆ, ವೇತನ ಆಯೋಗದ ಶಿಫಾರಸುಗಳು ಜನವರಿ 1, 2026ರಿಂದಲೇ ಜಾರಿಯಾಗುತ್ತವೆ ಎಂದು ಅದರಲ್ಲಿ ಸ್ಪಷ್ಟವಾಗಿ ದೃಢಪಡಿಸಿರಲಿಲ್ಲ. ಹೀಗಾಗಿ ನೌಕರರಿಗೆ ಹಿಂಬಾಕಿ ಹಣ ಸಿಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿತ್ತು. ಸಾಮಾನ್ಯವಾಗಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ಸಂಪ್ರದಾಯವಿದೆ. ಈ ಹಿಂದಿನ ಪದ್ಧತಿಯ ಪ್ರಕಾರ 8ನೇ ವೇತನ ಆಯೋಗದ ಶಿಫಾರಸುಗಳ ಪರಿಣಾಮ 2026ರ ಜನವರಿ 1ರಿಂದ ಅನ್ವಯವಾಗುವ ನಿರೀಕ್ಷೆಯಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಹಿಂದಿನ 7ನೇ ವೇತನ ಆಯೋಗದ ಅನುಭವವನ್ನು ಗಮನಿಸಿದರೆ, ನೌಕರರಿಗೆ ಅರಿಯರ್ಸ್ ಸಿಗುವ ಸಾಧ್ಯತೆಯನ್ನು ಅರ್ಥಮಾಡಿಕೊಳ್ಳಬಹುದು. 7ನೇ ವೇತನ ಆಯೋಗವು 2015ರ ನವೆಂಬರ್ನಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಬಳಿಕ 2016ರ ಜುಲೈನಲ್ಲಿ ಪರಿಷ್ಕೃತ ವೇತನ ಜಾರಿಗೊಂಡಿತ್ತು. ಆದರೆ, ಅದರ ಅನ್ವಯ ದಿನಾಂಕವನ್ನು 2016ರ ಜನವರಿ 1 ಎಂದು ಪರಿಗಣಿಸಿದ್ದರಿಂದ ನೌಕರರಿಗೆ ಆರು ತಿಂಗಳ ಬಾಕಿ ಹಣ ಪಾವತಿಸಲಾಗಿತ್ತು.
ಈ ಬಾರಿ 8ನೇ ವೇತನ ಆಯೋಗದ ವರದಿ ಸಲ್ಲಿಕೆಯಲ್ಲಿ ವಿಳಂಬವಾದರೆ, ಸರ್ಕಾರದ ಮೇಲೆ ದೊಡ್ಡ ಮೊತ್ತದ ಅರಿಯರ್ಸ್ ಪಾವತಿಯ ಹೊರೆ ಬೀಳುವ ಸಾಧ್ಯತೆಯಿದೆ. ಆಯೋಗವು 2027ರ ಮೇ ವೇಳೆಗೆ ತನ್ನ ವರದಿ ಸಲ್ಲಿಸುವ ಗಡುವು ಹೊಂದಿದೆ. ವರದಿ ಸಲ್ಲಿಕೆಯಾದ ನಂತರವೂ ಸರ್ಕಾರ ಅದನ್ನು ಪರಿಶೀಲಿಸಿ ಅಂತಿಮ ಅನುಮೋದನೆ ನೀಡಲು ಕೆಲವು ತಿಂಗಳು ತೆಗೆದುಕೊಳ್ಳಬಹುದು.
8ನೇ ವೇತನ ಆಯೋಗದ ಮುಂದೆ ನೌಕರರ ಸಂಘಟನೆಗಳು ಹಲವು ಪ್ರಮುಖ ಬೇಡಿಕೆಗಳನ್ನು ಇಟ್ಟಿವೆ. NC-JCM ಸಿಬ್ಬಂದಿ ವಿಭಾಗವು 3.833 ಫಿಟ್ಮೆಂಟ್ ಫ್ಯಾಕ್ಟರ್ ನಿಗದಿಪಡಿಸುವಂತೆ ಮನವಿ ಮಾಡಿದೆ. ಈ ಬೇಡಿಕೆ ಅಂಗೀಕಾರವಾದರೆ ಕನಿಷ್ಠ ಮೂಲ ವೇತನವು ಈಗಿನ 18,000 ರೂ.ಗಳಿಂದ 69,000 ರೂ.ಗೆ ಏರಿಕೆಯಾಗಬಹುದು ಎಂಬ ನಿರೀಕ್ಷೆಯಿದೆ. ಇದರ ಜೊತೆಗೆ ಪ್ರಸ್ತುತ ಶೇ.3ರಷ್ಟಿರುವ ವಾರ್ಷಿಕ ವೇತನ ಹೆಚ್ಚಳವನ್ನು ಶೇ.6ಕ್ಕೆ ಏರಿಸಬೇಕೆಂಬ ಬೇಡಿಕೆಯನ್ನೂ ಮುಂದಿಡಲಾಗಿದೆ. ಅಖಿಲ ಭಾರತ ರೈಲ್ವೆ ನೌಕರರ ಒಕ್ಕೂಟದ ಮುಖ್ಯಸ್ಥರೂ ಆಗಿರುವ ಶಿವ ಗೋಪಾಲ್ ಮಿಶ್ರಾ ಈ ಬೇಡಿಕೆಗಳ ಪರವಾಗಿ ಧ್ವನಿ ಎತ್ತುತ್ತಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವದ 8ನೇ ವೇತನ ಆಯೋಗವು ವಿವಿಧ ರಾಜ್ಯಗಳ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ವಲಯಗಳೊಂದಿಗೆ ಚರ್ಚೆ ನಡೆಸುತ್ತಿದೆ. ನೌಕರರ ಬೇಡಿಕೆಗಳಲ್ಲಿ ಎಷ್ಟನ್ನು ಅಂತಿಮ ಶಿಫಾರಸುಗಳಲ್ಲಿ ಸೇರಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ( ಏಜೇನ್ಸಿಸ್)