ಅಸ್ಸಾಂನಲ್ಲಿ ಶೇ.85.91 ರಷ್ಟು ಮತದಾನ: ಎನ್‌ಡಿಎಗೆ ಸಿಗುತ್ತಾ 100 ಸೀಟು! ಹಿಮಂತ ಬಿಸ್ವಾ ಶರ್ಮಾ ಭವಿಷ್ಯ ನಿಜವಾಗುತ್ತಾ..? 
ದೇಶ

ಅಸ್ಸಾಂನಲ್ಲಿ ಶೇ.85.91 ರಷ್ಟು ಮತದಾನ: ಎನ್‌ಡಿಎಗೆ ಸಿಗುತ್ತಾ 100 ಸೀಟು! ಹಿಮಂತ ಬಿಸ್ವಾ ಶರ್ಮಾ ಭವಿಷ್ಯ ನಿಜವಾಗುತ್ತಾ..? Himanta Biswa Sarma

ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲಿಯೇ ಎಂದೂ ಕಾಣದಂತಹ ಅಭೂತಪೂರ್ವ ಮತದಾನ ದಾಖಲಾಗಿದೆ. ಬರೋಬ್ಬರಿ ಶೇ.85.91ರಷ್ಟು ಮತದಾನವಾಗುವ ಮೂಲಕ ರಾಜ್ಯದ ಜನತೆ ಪ್ರಜಾಪ್ರಭುತ್ವದ ಹಬ್ಬದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ಭಾರಿ ಸಂಚಲನದ ಬೆನ್ನಲ್ಲೇ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Himanta Biswa Sarma) ಅವರು ಸ್ಫೋಟಕ ಭವಿಷ್ಯ ನುಡಿದಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಈ ಬಾರಿ ಮೂರು ಅಂಕಿಯ ಸ್ಥಾನಗಳನ್ನು ತಲುಪಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ ಅವರ ರಾಜಕೀಯ ಲೆಕ್ಕಾಚಾರ

ಮತದಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಹಿಮಂತ ಬಿಸ್ವಾ ಶರ್ಮಾ, ಈ ಚುನಾವಣೆ ಕೇವಲ ರಾಜಕೀಯ ಹೋರಾಟವಾಗಿರಲಿಲ್ಲ, ಇದು ಅಸ್ಸಾಂನ ನಾಗರಿಕ ಮೌಲ್ಯಗಳು ಮತ್ತು ಭೂಮಿಯನ್ನು ರಕ್ಷಿಸುವ ಚಳವಳಿಯಾಗಿತ್ತು ಎಂದು ಬಣ್ಣಿಸಿದ್ದಾರೆ.
ಸಾಮಾನ್ಯವಾಗಿ ಬಾಂಗ್ಲಾದೇಶಿ ಮೂಲದ ಮುಸ್ಲಿಂ ಸಮುದಾಯದ ಮತದಾನವು ಶೇ.95-96 ರಷ್ಟು ಇರುತ್ತಿತ್ತು, ಆದರೆ ಅಸ್ಸಾಮಿ ಸಮಾಜದ ಮತದಾನ ಶೇ. 75-76 ರಷ್ಟಿರುತ್ತಿತ್ತು. ಆದರೆ ಈ ಬಾರಿ ಅಸ್ಸಾಮಿ ಸಮಾಜವೂ ಪೈಪೋಟಿಗೆ ಬಿದ್ದಂತೆ ಮತ ಚಲಾಯಿಸಿದೆ. ಕೆಲವು ಬೂತ್‌ಗಳಲ್ಲಿ ನಮ್ಮ ಜನರ ಮತದಾನ ಶೇ. 95 ದಾಟಿದೆ. ಇದು ಎನ್‌ಡಿಎ ಅಭೂತಪೂರ್ವ ಜಯ ಸಾಧಿಸಲಿದೆ ಎಂಬುದಕ್ಕೆ ಸ್ಪಷ್ಟ ಮುನ್ಸೂಚನೆ ಎಂದು ಆಸ್ಸಾಂ ಸಿಎಂ ಹೇಳಿದ್ದಾರೆ.

ಐತಿಹಾಸಿಕ ಅಂಕಿ-ಅಂಶಗಳು: ಮಹಿಳೆಯರೇ ಮುಂದು!

ಅಸ್ಸಾಂ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಈ ಬಾರಿ ರಾಜ್ಯದಲ್ಲಿ ಒಟ್ಟು ಶೇ. 85.91ರಷ್ಟು ಮತದಾನವಾಗಿದೆ. ವಿಶೇಷವೆಂದರೆ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದ್ದಾರೆ.
ಮಹಿಳಾ ಮತದಾನ: 85.96%
ಪುರುಷ ಮತದಾನ: 84.80%
ತೃತೀಯ ಲಿಂಗಿಗಳು: 36.84%
ಇಷ್ಟು ದೊಡ್ಡ ಮಟ್ಟದ ಮತದಾನವು ಆಡಳಿತ ವಿರೋಧಿ ಅಲೆಯೋ ಅಥವಾ ಅಭಿವೃದ್ಧಿಯ ಪರವಾದ ಒಲವೋ ಎಂಬ ಚರ್ಚೆ ಈಗ ಗಲ್ಲಿ ಗಲ್ಲಿಗಳಲ್ಲಿ ಶುರುವಾಗಿದೆ.

ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳಲ್ಲೂ ಬಿಜೆಪಿ ಪೈಪೋಟಿ!

ಶರ್ಮಾ ಅವರು ತಮ್ಮ ಮೈತ್ರಿಕೂಟದ ಸಾಧನೆಯ ಬಗ್ಗೆ ಮಾತನಾಡುತ್ತಾ, ನಮ್ಮ ಮೈತ್ರಿ ಪಕ್ಷವಾದ ಅಸೋಂ ಗಣ ಪರಿಷತ್ (AGP) ಈಗಾಗಲೇ ಎರಡು ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳಲ್ಲಿ ಗೆಲುವಿನ ಸಮೀಪದಲ್ಲಿದೆ. ಅಷ್ಟೇ ಅಲ್ಲದೆ, ಬಿಜೆಪಿ ಕೂಡ ಅಂತಹ ಒಂದು ಕ್ಷೇತ್ರದಲ್ಲಿ ಕಠಿಣ ಪೈಪೋಟಿ ನೀಡಿದೆ. ಮಹಿಳೆಯರು ಮತ್ತು ಯುವಕರು ನುಸುಳುಕೋರರ ವಿರುದ್ಧ ಮತ್ತು ಅಸ್ಸಾಂನ ಅಸ್ಮಿತೆಯ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಪ್ರತಿಪಾದಿಸಿದ್ಧಾರೆ.

ಜೀವನ್ಮರಣದ ಹೋರಾಟವಾಗಿ ಮಾರ್ಪಟ್ಟ ಮತದಾನ

ಈ ದಾಖಲೆ ಪ್ರಮಾಣದ ಮತದಾನವನ್ನು ಶರ್ಮಾ ಅವರು ಉಳಿವಿಗಾಗಿ ನಡೆದ ಯುದ್ಧ ಎಂದು ಕರೆದಿದ್ದಾರೆ. ಅಸ್ಸಾಂನ ಜನರು ಪ್ರಜಾಪ್ರಭುತ್ವದ ಅತ್ಯಂತ ಪ್ರಬಲ ಅಸ್ತ್ರವಾದ ಮತವನ್ನು ತಮ್ಮ ಉಳಿವಿಗಾಗಿ ಬಳಸುವುದನ್ನು ಕಲಿತಿದ್ದಾರೆ. ಇದಕ್ಕಾಗಿ ನಾನು ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಶರ್ಮಾ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ.

ಮೇ 4ರಂದು ಅಂತಿಮ ಫಲಿತಾಂಶ

ಅಸ್ಸಾಂ ವಿಧಾನಸಭೆಯ ಭವಿಷ್ಯ ಈಗ ಮತಯಂತ್ರದಲ್ಲಿ (EVM) ಭದ್ರವಾಗಿದೆ. ಮೇ 4ರಂದು ಮತ ಎಣಿಕೆ ನಡೆಯಲಿದ್ದು, ಹಿಮಂತ ಬಿಸ್ವಾ ಶರ್ಮಾ ಅವರ ಮೂರು ಅಂಕಿಯ ಲೆಕ್ಕಾಚಾರ ನಿಜವಾಗುತ್ತದೆಯೇ ಅಥವಾ ವಿರೋಧ ಪಕ್ಷಗಳು ಅಚ್ಚರಿ ಮೂಡಿಸುತ್ತವೆಯೇ ಎಂಬುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ,(ಏಜೆನ್ಸೀಸ್).