ಶೋಲೆ ಚಿತ್ರದಲ್ಲಿ ಓಡಿಸಿದ ಬೈಕ್
- 'ಶೋಲೆ' ಚಿತ್ರವು ಇಂದಿಗೂ ಸಿನಿಪ್ರಿಯರ ಅತ್ಯಂತ ಮೆಚ್ಚುಗೆಯ ಸಿನಿಮಾ
- 83 ವರ್ಷಗಳ ಬಳಿಕ ಮತ್ತೆ ನೋಡಲು ಸಿಕ್ಕಿದೆ
- 1942 BSA WM20 ಸಂಖ್ಯೆಯ ಮೋಟಾರ್‌ಸೈಕಲ್
ಮುಂಬೈ: ಭಾರತೀಯ ಸಿನಿಮಾ ಇತಿಹಾಸದಲ್ಲಿ ಅದ್ಭುತ ಮೈಲಿಗಲ್ಲು ತಲುಪಿದ ಬಾಲಿವುಡ್ನ 'ಶೋಲೆ' ಚಿತ್ರವು ಇಂದಿಗೂ ಸಿನಿಪ್ರಿಯರ ಅತ್ಯಂತ ಮೆಚ್ಚುಗೆಯ ಸಿನಿಮಾ ಎಂದರೆ ಖಂಡಿತ ತಪ್ಪಾಗಲಾರದು. 1975ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ದಿಗ್ಗಜ ನಟ ಅಮಿತಾಭ್ ಬಚ್ಚನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಿನ ಕಾಲಕ್ಕೆ ಬ್ಲಾಕ್ಬಸ್ಟರ್ ಸಾಲಿಗೆ ಸೇರಿದ ಶೋಲೆಯಲ್ಲಿ ಒಂದು ಬೈಕ್ ಮಾತ್ರ ಚಿತ್ರರಸಿಕರ ಕಣ್ಣಿನಲ್ಲಿ ಇಂದಿಗೂ ಕಟ್ಟಿದಂತಿದೆ. ಆ ಬೈಕ್ ಇದೀಗ 83 ವರ್ಷಗಳ ಬಳಿಕ ಮತ್ತೆ ನೋಡಲು ಸಿಕ್ಕಿರುವುದು ಸದ್ಯ ಅನೇಕರ ಕುತೂಹಲ ಕೆರಳಿಸಿದೆ.
1942 BSA WM20 ಸಂಖ್ಯೆಯ ಮೋಟಾರ್‌ಸೈಕಲ್
ಪ್ರತಿಯೊಂದು ಪಾತ್ರ ಮತ್ತು ದೃಶ್ಯವು ಪ್ರೇಕ್ಷಕರ ಹೃದಯದಲ್ಲಿ ಅಳಿಸಲಾಗದ ಗುರುತು ಬಿಟ್ಟಿರುತ್ತದೆ. ವಿಶೇಷವಾಗಿ, 'ಯೇ ದೋಸ್ತಿ ಹಮ್ ನಹಿ ತೋಡೆಂಗೆ' ಹಾಡು ವಿಶೇಷ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಈ ಹಾಡಿನಲ್ಲಿ ಅಮಿತಾಬ್ ಬಚ್ಚನ್ (ಜೈ) ಮತ್ತು ಧರ್ಮೇಂದ್ರ (ವೀರ್) ಒಟ್ಟಿಗೆ ಸವಾರಿ ಮಾಡಿದ ವಿಂಟೇಜ್ ಬೈಕ್ ಈಗ ಮತ್ತೊಮ್ಮೆ ಜನರ ಎದುರಿಗೆ ಹಾಜರಾಗಿದೆ. ಪ್ರಸ್ತುತ, ಗೋವಾದಲ್ಲಿ ನಡೆಯುತ್ತಿರುವ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI), ಚಿತ್ರದ ಹಾಡಿನಲ್ಲಿ ಬಳಸಲಾದ 1942 BSA WM20 ಸಂಖ್ಯೆಯ ಮೋಟಾರ್‌ಸೈಕಲ್ ವಿಶೇಷ ಆಕರ್ಷಣೆಯಾಗಿದೆ.
ಈ ಬೈಕ್ ವಿಶೇಷತೆ ಏನು?
ಉತ್ಸವಕ್ಕೆ ಬಂದಿರುವ ಚಲನಚಿತ್ರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ MYB 3047 ನೋಂದಣಿ ಸಂಖ್ಯೆಯ ಈ ಬೈಕ್ ಅನ್ನು ಕಣ್ತುಂಬಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಈ ಬೈಕ್‌ನ ವಿಶೇಷತೆಯೆಂದರೆ, ಇದು 83 ವರ್ಷ ಹಳೆಯದಾದ BSA WM20 ಮಾದರಿಯಾಗಿದ್ದು, ಮೂಲತಃ ಬ್ರಿಟಿಷ್ ಮಿಲಿಟರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೋಟಾರ್‌ಸೈಕಲ್ ಎನ್ನಲಾಗಿದೆ. ಅತಿ ಮುಖ್ಯವಾಗಿ, ಈ ಹಾಡಿನ ಶೂಟಿಂಗ್ ಆಗಿರುವುದು ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿ ಎಂಬುದು ಗಮನಾರ್ಹ ಸಂಗತಿ.
ಎರಡನೇ ಮಹಾಯುದ್ಧದ ಸಮಯದಲ್ಲಿ ಸಾವಿರಾರು ಜನರು ಬಳಸುತ್ತಿದ್ದ ಇತಿಹಾಸ ಹೊಂದಿರುವ ಮಾಡೆಲ್ ಬೈಕ್ ಇದಾಗಿದೆ. ಅತ್ಯುತ್ತಮ ಬಲವಾದ ನಿರ್ಮಾಣ ಮತ್ತು ಸ್ಥಿರವಾದ ಚಾಲನೆಯಲ್ಲಿರುವ ಗುಣಮಟ್ಟವನ್ನು ಹೊಂದಿದೆ ಮತ್ತು ಇನ್ನೂ ಉತ್ತಮ ಸ್ಥಿತಿಯಲ್ಲಿದೆ. ಶೋಲೆ ಚಿತ್ರಕ್ಕಾಗಿ ಈ ಬೈಕ್ ಉಪಯೋಗಿಸಿಕೊಂಡು ಮಾಡಿದ ದೃಶ್ಯಗಳನ್ನು ಚಿತ್ರೀಕರಿಸಲು ಒಟ್ಟು 21 ದಿನಗಳು ಬೇಕಾಯಿತು. ಐಎಫ್‌ಎಫ್‌ಐನಲ್ಲಿ ಈ ಬೈಕ್ ಅನ್ನು ನೋಡಿದವರು ತಮ್ಮ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಬೈಕ್‌ನ ಫೋಟೋ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ,(ಏಜೆನ್ಸೀಸ್).