Idli Amma 
ದೇಶ

ಬೆಲೆ ಏರಿಕೆ ನಡುವೆಯೂ ಬದಲಾಗದ ಸೇವೆ; ತಮಿಳುನಾಡಿನಲ್ಲಿ ಇಂದಿಗೂ 1 ರೂ. ಇಡ್ಲಿ ಮಾರುತ್ತಿರುವ 80 ವರ್ಷದ 'ಇಡ್ಲಿ ಅಮ್ಮ'!..Idli

Idli Amma: ಅನ್ನದಾತೋ ಸುಖೀಭವ. ಅನ್ನದಾನ ಮಹಾದಾನ ಎನ್ನುವ ಭಾರತದಂತಹ ಮಹಾನ್ ರಾಷ್ಟ್ರದದಲ್ಲಿ ಜನಿಸಿದ ನಾವೇ ಧನ್ಯರು. ಇದಕ್ಕೆ ಪೂರಕವಾಗಿ ತಮಿಳುನಾಡಿನಲ್ಲಿ ಅಜ್ಜಿಯೊಬ್ಬರು ಅಗತ್ಯ ವಸ್ತುಗಳ ಏರಿಕೆ ಮಧ್ಯೆಯೂ ಒಂದೇ ಒಂದು ರೂಪಾಯಿಗೆ ಇಡ್ಲಿ ಮಾರಾಟ ಮಾಡಿ ಹಲವರ ಮೆಚ್ಚುಗೆ, ಅಚ್ಚರಿಗೆ ಪಾತ್ರರಾಗಿದ್ದಾರೆ. ಸಿಲಿಂಡರ್​ ವ್ಯತ್ಯಯ ಉಂಟಾಗಿರೋ ಈ ಕಾಲದಲ್ಲಿ ಹೋಟೆಲ್​, ರೆಸ್ಟೋರೆಂಟ್​ಗಳಲ್ಲಿ ಆಹಾರದ ಬೆಲೆ ಏರಿಕೆ ಮಾಡಿರುವ ಮಾಲೀಕರು ಬೆರಗಾಗುವಂತೆ ಮಾಡಿದ್ದಾರೆ.

ಇಡ್ಲಿ ಕಡಾಯಿ ಸಿನಿಮಾ ಏನದು ಕತೆ?

ಇತ್ತೀಚೆಗೆ ತಮಿಳಿನಲ್ಲಿ ಧನುಷ್ ಮುಖ್ಯಭೂಮಿಕೆಯಲ್ಲಿ ಇಡ್ಲಿ ಕಡಾಯಿ ಸಿನಿಮಾವೊಂದು ರಿಲೀಸ್​ ಆಗಿತ್ತು. ಅವರದ್ದೇ ನಿರ್ದೇಶನ, ನಿರ್ಮಾಣ. ಎಷ್ಟೇ ದೊಡ್ಡ ದೊಡ್ಡ ಮಿಷನ್​ ಬಂದರೂ ಸಹ ಕೈಯಲ್ಲೇ ಹಿಟ್ಟು ರುಬ್ಬಿ, ಊರಿಗೆ ರುಚಿಯಾದ ಇಡ್ಲಿ ಸಾಂಬಾರು ಮಾಡುವುದೇ ಮುರುಗನ್​​ ತಂದೆಯ ಧ್ಯೇಯ ಅದರಂತೆಯೇ ತಮಿಳುನಾಡಿನಲ್ಲಿರುವ ಈ ಅಜ್ಜಿ ಕತೆ.

ಯಾರಿದು ಅಜ್ಜಿ?

ತಮಿಳುನಾಡಿನ ಕೊಯಮತ್ತೂರಿನ ಸಣ್ಣ ಬೀದಿಯಲ್ಲಿ ಸದಾ ಉರಿಯುವ ಕಟ್ಟಿಗೆ ಒಲೆ, ಅದರ ಮೇಲಿಟ್ಟಿರುವ ಇಡ್ಲಿ ಪಾತ್ರೆ, ಬೇಯುತ್ತಿರುವ ಅಕ್ಕಿಯ ಘಮಲು, ಚಟ್ನಿ ಸಾಂಬಾರು ಮಾಡಿಕೊಳ್ಳಲು ತಡಕಾಡುತ್ತಿರುವ ಹಣ್ಣು ಹಣ್ಣು ಮುದುಕಿ. ಬಿಳಿ ಸೀರೆ, ಬಾಗಿದ ಬೆನ್ನು, ಸುಕ್ಕುಗಟ್ಟಿದ ಚರ್ಮ, ಅಲ್ಲಲ್ಲಿ ಬಿದ್ದ ಹಲ್ಲಿನ ಮಧ್ಯೆಯೂ ಸಂಪೂರ್ಣ ನಗು ತೋರುವ ನಾರಿ ಇವರೇ 80 ವರ್ಷದ ವೃದ್ಧೆ ಕಮಲಾತ್ತಳ್.
ಕಳೆದ ಮೂರು ದಶಕಕಕ್ಕೂ ಹೆಚ್ಚು ವರ್ಷದಿಂದ ಕೇವಲ 1 ರೂಪಾಯಿಗೆ ಬಿಸಿಬಿಸಿ ಇಡ್ಲಿಯನ್ನು ಬಡಿಸಿ, ದಣಿದ ಜೀವಿಗಳು, ಹಣವಿಲ್ಲದವರ ಹೊಟ್ಟೆಯನ್ನು ಮೃಷ್ಟಾನ್ನದಿಂದ ಅಲ್ಲದೇ ಇದ್ದರು, ಕಡಿಮೆ ಹಣದಲ್ಲಿ ತುಂಬಿಸುತ್ತಿದ್ದಾರೆ. ಸಾವಿರಾರು ಹಣ ಪೀಕುವ ದುಬಾರಿ ಹೋಟೆಲ್​ಗಳಿಗಿಂತ
ಈಕೆಯ ಹೋಟೆಲ್​ ಅದೆಷ್ಟೋ ಬೆಸ್ಟು.
ವಡಿವೇಳಂಪಾಳಯಂ ಗ್ರಾಮದಲ್ಲಿ ವಾಸಿಸುತ್ತಿರುವ ಕಮಲಾತ್ತಾಳ್​ರ ಕೆಲಸ ಮುಂಜಾನೆ ಸೂರ್ಯ ಹುಟ್ಟುವ ಮೊದಲೇ ಆರಂಭವಾಗುತ್ತದೆ. ತಾವೇ ಸ್ವತಃ ಇಡ್ಲಿ ಹಿಟ್ಟನ್ನು ತಯಾರಿಸಿ, ಸಾಂಬಾರ್ ಮತ್ತು ಚಟ್ನಿಯನ್ನು ಸಿದ್ಧಪಡಿಸುತ್ತಾರೆ.

ಬೆಲೆ ಏರಿಕೆಯ ಮಾತೇ ಇಲ್ಲ

ದಿನದಿಂದ ದಿನಕ್ಕೆ ಎಣ್ಣೆ, ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದ್ಯಾವುದರ ಚಿಂತೆಯಿಲ್ಲದ ಕಮಲಾತ್ತಳ್​ಗೆ ಹಸಿದವರ ಹೊಟ್ಟೆ ತುಂಬಿಸುವುದಷ್ಟೇ ಧ್ಯೇಯ. ಹೀಗಾಗಿ, ಏನೇ ಬೆಲೆ ಏರಿಕೆಯಾದರೂ ಸಹ ತಮ್ಮ ಇಡ್ಲಿ ಬೆಲೆ ಮಾತ್ರ 1ರೂಪಾಯಿಗಿಂತ ಮೇಲಕ್ಕೆ ಏರಿಸಿಲ್ಲ.

ಕಡಿಮೆ ಬೆಲೆಗೆ ನೀಡಲು ಕಾರಣವೇನು?

ಕಮಲಾತಲ್ ಅವರು ಲಾಭಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಕೂಲಿ ಕಾರ್ಮಿಕರು, ಬಡವರು ಮತ್ತು ಹಸಿದವರು ಹೊಟ್ಟೆತುಂಬಾ ಊಟ ಮಾಡಬೇಕು ಎಂಬುದು ಅವರ ಏಕೈಕ ಆಶಯ. ನನ್ನ ಬಳಿ ಬರುವ ಕಾರ್ಮಿಕರು ದಿನವಿಡೀ ಕಷ್ಟಪಟ್ಟು ದುಡಿಯುತ್ತಾರೆ. ಹಣ ಕಡಿಮೆ ಇದೆ ಎಂದು ಅವರು ಹಸಿವಿನಿಂದ ಇರಬಾರದು. ದುಡಿಯುವ ಜೀವ ಎಂದಿಗೂ ಗಟ್ಟಿಮುಟ್ಟಾಗಿರಬೇಕು ಎಂಬ ಕಾರಣಕ್ಕೆ ನಾನು ಇಡ್ಲಿ ಬೆಲೆ ಏರಿಕೆ ಮಾಡಿಲ್ಲ ಎಂದು ಹೇಳುತ್ತಾರೆ ಕಮಲಾತ್ತಳ್.

ಆನಂದ್ ಮಹೀಂದ್ರಾರಿಂದ ಮೆಚ್ಚುಗೆ

ಅವರ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು 2019ರಲ್ಲಿ ಇವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅವರಿಗೆ ಹೊಸ ಮನೆ ಮತ್ತು ಸುಸಜ್ಜಿತ ಅಡುಗೆಮನೆಯನ್ನು ನಿರ್ಮಿಸಿಕೊಡಲಾಗಿದೆ. ಆದರೂ ಸಹ ಕಮಲಾತ್ತಲ್ ಅವರು ತಮ್ಮ ಹಳೆಯ ಪದ್ಧತಿಯಂತೆ ಅತಿ ಕಡಿಮೆ ದರಕ್ಕೆ ಹಸಿದವರಿಗೆ ಅನ್ನ ನೀಡುವ ಕಾಯಕವನ್ನು ಮುಂದುವರಿಸಿದ್ದಾರೆ, (ಏಜೆನ್ಸೀಸ್​)