ನಾಲಿಗೆ ಹರಿಬಿಟ್ಟ ಬಿಹಾರ್ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್
- ಶೇ. 80ರಷ್ಟು ರಾಜಕಾರಣಿಗಳು ಪೋರ್ನ್ ನೋಡುತ್ತಾರೆ
- ಪುರುಷರ ಕೋಣೆ ಪ್ರವೇಶಿಸದೆ ಮಹಿಳೆಯರ ರಾಜಕೀಯ ಜೀವನ ಸಾಗುವುದಿಲ್ಲ
- ನಾಲಿಗೆ ಹರಿಬಿಟ್ಟ ಬಿಹಾರ್ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್
ಪೂರ್ಣಿಯಾ: ಬಿಹಾರದ ಪೂರ್ಣಿಯಾ ಕ್ಷೇತ್ರದ ಸ್ವತಂತ್ರ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ (Pappu Yadav) ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಕಿಚ್ಚು ಹಚ್ಚಿದ್ದಾರೆ. ಮಹಿಳಾ ರಾಜಕಾರಣಿಗಳ ಬಗ್ಗೆ ಅವರು ನೀಡಿದ್ದ ಹೇಳಿಕೆಯ ಬಿಸಿ ಕಡಿಮೆಯಾಗುವ ಮುನ್ನವೆ ಈಗ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಶೇ. 70-80 ರಾಜಕಾರಣಿಗಳು ಪೊರ್ನ್ ನೋಡುತ್ತಾರೆ
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರು ವಿಂಗಡಣೆಗೆ ಸಂಬಂಧಿಸಿದ (131ನೇ ತಿದ್ದುಪಡಿ) ಮಸೂದೆಯು ಅಗತ್ಯ ಬಹುಮತ ಸಿಗದೆ ಸೋಲನುಭವಿಸಿದ ಬೆನ್ನಲ್ಲೇ ಪಪ್ಪು ಯಾದವ್ ಅವರ ಈ ಮಾತುಗಳು ಹೊರಬಿದ್ದಿವೆ.
ತಮ್ಮ ಹೇಳಿಕೆಗಳಿಗಾಗಿ ನೋಟಿಸ್ ಪಡೆದಿರುವ ಯಾದವ್, ಮಾಲ್ಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಕ್ರೋಶ ಹೊರಹಾಕಿದ್ದಾರೆ. ನಾನು ಈ ಮಾತನ್ನು ಸದನದ ಒಳಗೂ ಹೇಳಿದ್ದೇನೆ, ಶೇ. 70-80 ರಷ್ಟು ರಾಜಕಾರಣಿಗಳು ಪೋರ್ನ್ ನೋಡುತ್ತಾರೆ.
ತಾಕತ್ತಿದ್ದರೆ ಎಲ್ಲರ ಫೋನ್‌ಗಳನ್ನು ಪರೀಕ್ಷಿಸಿ. ನನ್ನ ಫೋನ್‌ನಲ್ಲಿ ಪೋರ್ನ್ ಇದ್ದರೆ ನನಗೂ ಶಿಕ್ಷೆ ನೀಡಿ. ಆದರೆ ನನಗೆ ನೋಟಿಸ್ ನೀಡುತ್ತಿರುವ ಇವರು ಯಾರು? ಗಾಜಿನ ಮನೆಯಲ್ಲಿ ವಾಸಿಸುವವರು ಬೇರೆಯವರ ಮೇಲೆ ಕಲ್ಲು ಎಸೆಯಬಾರದು, ಎಂದು ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಪುರುಷರ ಕೋಣೆ ಪ್ರವೇಶಿಸದೆ ಮಹಿಳೆಯ ರಾಜಕೀಯ ಜೀವನವಿಲ್ಲ!
ಪಪ್ಪು ಯಾದವ್ ಕೇವಲ ಪೋರ್ನ್ ಬಗ್ಗೆ ಮಾತ್ರವಲ್ಲದೆ, ರಾಜಕೀಯದಲ್ಲಿ ಮಹಿಳೆಯರ ಸ್ಥಿತಿಗತಿಯ ಬಗ್ಗೆಯೂ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಭಾರತದಲ್ಲಿ ಮಹಿಳೆಯರನ್ನು ದೇವತೆಗಳೆಂದು ಪೂಜಿಸಲಾಗುತ್ತದೆ, ಆದರೆ ವಾಸ್ತವದಲ್ಲಿ ಅವರಿಗೆ ಗೌರವ ಸಿಗುತ್ತಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಇವತ್ತಿನ ವ್ಯವಸ್ಥೆಯಲ್ಲಿ ಶೇ. 90 ಮಹಿಳೆಯರು ಪ್ರಭಾವಿ ರಾಜಕಾರಣಿಗಳ ಕೋಣೆಗೆ ಪ್ರವೇಶಿಸದೆ ರಾಜಕೀಯದಲ್ಲಿ ಬೆಳೆಯಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಮಹಿಳೆಯರನ್ನು ಶೋಷಿಸದೆ ಪುರುಷ ರಾಜಕಾರಣಿಗಳು ಅವರಿಗೆ ದಾರಿ ಮಾಡಿಕೊಡುವುದಿಲ್ಲ. ಈ ಮಾತು ಕಹಿಯಾಗಿದ್ದರೂ ಸತ್ಯ. ನಾನು ಮಹಿಳೆಯರ ಪರವಾಗಿ ಹೋರಾಡುತ್ತಿದ್ದೇನೆ, ಎಂದು ಅವರು ಹೇಳಿದ್ದಾರೆ.
ದತ್ತಾಂಶಗಳ ಮೂಲಕ ತಿರುಗೇಟು
ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಯಾದವ್, ಅಂಕಿಅಂಶಗಳನ್ನೇ ಮುಂದಿಟ್ಟಿದ್ದಾರೆ. ಸುಮಾರು 755 ಪುರುಷ ರಾಜಕಾರಣಿಗಳ ಮೇಲೆ ಲೈಂಗಿಕ ಶೋಷಣೆಯ ಆರೋಪಗಳಿವೆ ಮತ್ತು 155 ಜನರ ಮೇಲೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಇಡೀ ವ್ಯವಸ್ಥೆಯೇ ಕಳಂಕಿತಗೊಂಡಿರುವಾಗ, ನಾನು ಪುರುಷ ರಾಜಕಾರಣಿಗಳ ಬಗ್ಗೆ ಮಾತನಾಡಿದರೆ ಮಹಿಳಾ ಆಯೋಗಕ್ಕೆ ಯಾಕೆ ಉರಿ? ಎಂದು ಪ್ರಶ್ನಿಸಿದ್ದಾರೆ.
ರಾಜಕೀಯದಲ್ಲಿ ಬಿರುಗಾಳಿ
ಪಪ್ಪು ಯಾದವ್ ಅವರ ಈ ಹೇಳಿಕೆಗಳು ಈಗ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ಮಹಿಳಾ ಆಯೋಗ ಮತ್ತು ವಿರೋಧ ಪಕ್ಷದ ನಾಯಕರು ಅವರ ಈ ಮಾತನ್ನು ಖಂಡಿಸುತ್ತಿದ್ದಾರಾದರೂ, ಯಾದವ್ ಮಾತ್ರ ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ. ನಾನು ಹೇಳಿದ ಮಾತು ಸುಳ್ಳಾಗಿದ್ದರೆ ಖಂಡಿತವಾಗಿ ಶಿಕ್ಷೆ ಅನುಭವಿಸುತ್ತೇನೆ. ಆದರೆ ನಾನು ಹೇಳಿರುವ ಯಾವ ಮಾತು ತಪ್ಪಿಲ್ಲ ಎನ್ನುವುದು ಪಪ್ಪು ಯಾದವ್ ಅವರ ವಾದವಾಗಿದೆ, (ಏಜನ್ಸೀಸ್).