Mamata Banerjee | ಮಾಜಿ ಸಿಎಂ ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಆಂತರಿಕ ಸಂಘರ್ಷ ಕಾವು ಪಡೆದುಕೊಳ್ಳುತ್ತಲೇ ಇದ್ದು, ಈ ಬೆಳವಣಿಗೆ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಪಕ್ಷದೊಳಗಿನ ಭಿನ್ನಮತ ಶಮನಗೊಳಿಸಲು ಶುಕ್ರವಾರ ಕೋಲ್ಕತ್ತಾದ ಕಾಲಿಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕರೆದಿದ್ದ ಮಹತ್ವದ ಸಭೆಗೆ ಟಿಎಂಸಿ ಒಟ್ಟು 42 ಸಂಸದರು ಹಾಗೂ 80 ಶಾಸಕರನ್ನು ಹೊಂದಿದ್ದರೂ, ಶುಕ್ರವಾರದ ಸಭೆಗೆ ಬಂದಿದ್ದು ಕೇವಲ 8 ಶಾಸಕರು ಮತ್ತು 6 ಸಂಸದರು ಮಾತ್ರ.
ಸಭೆಗೆ ಶಾಸಕರಾದ ಫಿರ್ಹಾದ್ ಹಕೀಮ್, ಮದನ್ ಮಿತ್ರ, ಕುನಾಲ್ ಘೋಷ್ ಸೇರಿದಂತೆ ಎಂಟು ಜನ ಹಾಗೂ ಸಂಸದರಾದ ಅಭಿಷೇಕ್ ಬ್ಯಾನರ್ಜಿ, ಡೆರೆಕ್ ಒ'ಬ್ರಿಯಾನ್ ಸೇರಿದಂತೆ ಆರು ಜನ ಮಾತ್ರ ಖುದ್ದಾಗಿ ಹಾಜರಾಗಿದ್ದರು. ಈ ಜನಪ್ರತಿನಿಧಿಗಳ ತೀವ್ರ ಗೈರುಹಾಜರಾತಿಯು ಮಮತಾ ಬ್ಯಾನರ್ಜಿ ನಾಯಕತ್ವದ ವಿರುದ್ಧ ಎದ್ದಿರುವ ಅಸಮಾಧಾನವನ್ನು ಬಹಿರಂಗಪಡಿಸಿದೆ. ಆದರೆ ಈ ಬಗ್ಗೆ ತಕ್ಷಣವೇ ಸ್ಪಷ್ಟನೆ ನೀಡಿರುವ ಟಿಎಂಸಿ, ಇದು ಎಲ್ಲಾ ಶಾಸಕರು ಅಥವಾ ಸಂಸದರ ಸಭೆಯಾಗಿರಲಿಲ್ಲ, ಕೇವಲ ರಾಷ್ಟ್ರೀಯ ಕಾರ್ಯಕಾರಿ ಸಮಿತಿ (National Working Committee) ಸಭೆಯಾಗಿತ್ತು. ಮಹುವಾ ಮೊಯಿತ್ರಾ ಸೇರಿದಂತೆ ಹಲವು ನಾಯಕರು ವರ್ಚುವಲ್ ಆಗಿ ಭಾಗವಹಿಸಿದ್ದರು ಎಂದು ಸಮರ್ಥಿಸಿಕೊಂಡಿದೆ.
ಸಂಸತ್ತಿನಲ್ಲೂ ದೀದಿಗೆ ನಡುಕ!..
ಪಕ್ಷ ವಿರೋಧಿ ಚಟುವಟಿಕೆಗಾಗಿ ಟಿಎಂಸಿಯಿಂದ ಉಚ್ಚಾಟಿತಗೊಂಡಿರುವ ನಾಯಕ ರಿತಬ್ರತಾ ಬ್ಯಾನರ್ಜಿ ಹಾಗೂ ಸಂದೀಪನ್ ಸಹಾ ನೇತೃತ್ವದಲ್ಲಿ ಬಂಗಾಳ ವಿಧಾನಸಭೆಯಲ್ಲಿ ಭಾರಿ ಬಂಡಾಯ ಸೃಷ್ಟಿಯಾಗಿದೆ. ಒಟ್ಟು 57 ಶಾಸಕರು ರಿತಬ್ರತಾ ಅವರಿಗೆ ಬೆಂಬಲ ಘೋಷಿಸಿದ್ದು, ವಿಧಾನಸಭೆಯಲ್ಲಿ ಟಿಎಂಸಿ ಅಧಿಕೃತವಾಗಿ ಇಬ್ಬಾಗವಾಗಿದೆ. ಸ್ಪೀಕರ್ ರತೀಂದ್ರ ಬೋಸ್ ಬಂಡಾಯ ಬಣಕ್ಕೆ ಮನ್ನಣೆ ನೀಡಿದ್ದು, ರಿತಬ್ರತಾ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕ (LoP) ಎಂದು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಸಂಸತ್ತಿನಲ್ಲೂ ಹಲವು ಟಿಎಂಸಿ ಸಂಸದರು ಮಮತಾ ನಾಯಕತ್ವದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದು, ಬಿಜೆಪಿ ಸೇರಲು ಅಥವಾ ಪ್ರತ್ಯೇಕ ಬಣ ಸೃಷ್ಟಿಸಲು ಸಜ್ಜಾಗುತ್ತಿರುವುದು ದೀದಿಗೆ ಭಾರಿ ತಲೆನೋವಾಗಿದೆ.
ಲೋಕಸಭೆ ಪ್ರವೇಶಕ್ಕೆ ಮಮತಾ ಬ್ಯಾನರ್ಜಿ ಪ್ಲಾನ್..?
ಇತ್ತೀಚಿನ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಮುಖ್ಯಮಂತ್ರಿ ಸುವೇಂದು ಅಧಿಕಾರೀ ವಿರುದ್ಧ ಸೋಲು ಕಂಡಿದ್ದ ಮಾಜಿ ಸಿಎಂ ಮಮತಾ ಬ್ಯಾನರ್ಜಿ, ಈಗ ದೆಹಲಿ ರಾಜಕಾರಣದತ್ತ ಮುಖ ಮಾಡಲು ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಲೋಕಸಭೆಯಲ್ಲಿ ತಮ್ಮ ವಿರುದ್ಧದ ಬಂಡಾಯವನ್ನು ಹತ್ತಿಕ್ಕಲು ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಲು ಅವರು ಲೋಕಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಇದಕ್ಕಾಗಿ ಬಹರಂಪುರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಯೂಸುಫ್ ಪಠಾಣ್ರ ಸ್ಥಾನ ತ್ಯಾಗ ಮಾಡುವಂತೆ ಟಿಎಂಸಿ ನಾಯಕರು ಮನವಿ ಮಾಡುವ ಸಾಧ್ಯತೆಯಿದೆ ಎಂದು ವರದಿಗಳು ಉಲ್ಲೇಖಿಸಿವೆ(ಏಜೆನ್ಸೀಸ್).