Gurugram Rain Traffic Jam 
ದೇಶ

ಗುರುಗ್ರಾಮದಲ್ಲಿ ವರುಣನ ಅಬ್ಬರ: ರಸ್ತೆ ಕುಸಿತ, 8 ಕಿಲೋ ಮೀಟರ್​​ಗಟ್ಟಲೇ ಟ್ರಾಫಿಕ್ ಜಾಮ್, ಸವಾರರು ಹೈರಾಣು!

ಪ್ರಮುಖ ಮುಖ್ಯಾಂಶಗಳು

  • ಗುರುಗ್ರಾಮದಲ್ಲಿ ಕೇವಲ ಎರಡು ಗಂಟೆಗಳಲ್ಲಿ 82 ಮಿಮೀ ಮಳೆಯಾಗಿದೆ
  • ನರಸಿಂಗ್‌ಪುರ ಬಳಿಯ ದೆಹಲಿ-ಜೈಪುರ ಹೆದ್ದಾರಿಯ ಮುಖ್ಯ ರಸ್ತೆ ಕುಸಿತ, ಟ್ರಾಫಿಕ್ ಜಾಮ್
  • ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಂಡ ವಾಹನ ಸವಾರರು
ಗುರುಗ್ರಾಮ: ಮಂಗಳವಾರ ಸುರಿದ ಭಾರಿ ಮಳೆಗೆ ಹರಿಯಾಣದ ಸೈಬರ್ ಸಿಟಿ ಗುರುಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಗೆ ನಗರದ ಪ್ರಮುಖ ರಸ್ತೆಗಳು ಕುಸಿದಿದ್ದು, ಕಿಲೋ ಮೀಟರ್​​​ಗಟ್ಟಲೇ ಉಂಟಾಗಿದ್ದ ಟ್ರಾಫಿಕ್​ ಜಾಮ್​ನಿಂದಾಗಿ ಸವಾರರು ಗಂಟೆ ಗಟ್ಟಲೇ ರಸ್ತೆಯಲ್ಲೇ ನಿಂತು ಸುಸ್ತಾದರು.
ತೆರೆದ ಚರಂಡಿಗೆ ಶಾಲಾ ಬಸ್‌ ಉರುಳಿದ್ದು, ಅದೃಷ್ಟವಶಾತ್ ಬಸ್‌ನಲ್ಲಿ ಯಾವುದೇ ವಿದ್ಯಾರ್ಥಿಗಳಿಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗುರುಗ್ರಾಮ ಪೊಲೀಸರು ಖಾಸಗಿ ಕಂಪನಿಗಳ ಉದ್ಯೋಗಿಗಳಿಗೆ ಮುಂದಿನ ಕೆಲವು ದಿನಗಳ ಕಾಲ 'ವರ್ಕ್ ಫ್ರಮ್ ಹೋಮ್' ನೀಡುವಂತೆ ಕಾರ್ಪೊರೇಟ್ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ.

ಸಂಚಾರ ದಟ್ಟಣೆ

ನರಸಿಂಗ್‌ಪುರ, ಬಸಾಯಿ, ಹೀರೊ ಹೊಂಡಾ ಚೌಕ್, ಗಾಲ್ಫ್ ಕೋರ್ಸ್ ಎಕ್ಸ್‌ಟೆನ್ಶನ್ ರಸ್ತೆ, ರಾಜೀವ್ ಚೌಕ್, ವಾಟಿಕಾ ಚೌಕ್, ಇಫ್ಕೋ ಚೌಕ್, ಉದ್ಯೋಗ್ ವಿಹಾರ್, ಸೋಹ್ನಾ ರಸ್ತೆ, ಖಾಂಡ್ಸಾ ರಸ್ತೆ, ಹಳೇ ದೆಹಲಿ ರಸ್ತೆ, ಪಟೌಡಿ ರಸ್ತೆ, ಮಿಲೇನಿಯಮ್ ಸಿಟಿ ಸೆಂಟರ್‌ನಿಂದ ಹೀರೊ ಹೊಂಡಾ ಚೌಕ್ ರಸ್ತೆ, ಹಳೇ ರೈಲ್ವೆ ನಿಲ್ದಾಣ ಮತ್ತು ಹೊಸ ರೈಲ್ವೆ ನಿಲ್ದಾಣ ರಸ್ತೆಗಳು ಟ್ರಾಫಿಕ್‌ನಿಂದಾಗಿ ಸಂಪೂರ್ಣ ಸಂಚಾರ ಸ್ಥಗಿತಗೊಂಡಿದ್ದವು