Sikkim Tunnel Accident ಸಾಂದರ್ಭಿಕ ಚಿತ್ರ 
ದೇಶ

ಸಿಕ್ಕಿಂನಲ್ಲಿ ಭೀಕರ ದುರಂತ: ಸುರಂಗದಲ್ಲಿ ಭೂಕುಸಿತ, ವಿಷಾನಿಲ ಸೋರಿಕೆಯಾಗಿ 8 ಸಾವು! 18 ಜನ ಲಾಕ್​​.. Sikkim Tunnel Accident

Sikkim Tunnel Accident : ದಕ್ಷಿಣ ಸಿಕ್ಕಿಂನ ಸಮರ್ದುಂಗ್ ಪ್ರಾಂತ್ಯದಲ್ಲಿ ತೀಸ್ತಾ ನದಿ ಹಂತ-6 ಜಲವಿದ್ಯುತ್ ಯೋಜನೆಯ ಸುರಂಗ ಮಾರ್ಗ ನಿರ್ಮಾಣದ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಮಂದಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ. ಪಟೇಲ್ ಇಂಜಿನಿಯರಿಂಗ್ ಸಂಸ್ಥೆಯು ಕೈಗೆತ್ತಿಕೊಂಡಿದ್ದ ಈ ಸುರಂಗ ಕಾಮಗಾರಿಯ ಸ್ಥಳದಲ್ಲಿ ಸೋಮವಾರ ಮಧ್ಯಾಹ್ನ ಸುಮಾರು 3.09 ರ ವೇಳೆಗೆ ಬೃಹತ್ ಸ್ಫೋಟದಂತಹ ಶಬ್ದದೊಂದಿಗೆ ಮಣ್ಣು ಕುಸಿದುಬಿದ್ದಿದೆ. ಪರಿಣಾಮವಾಗಿ ಹೊರಹೋಗುವ ದಾರಿಗಳು ಮುಚ್ಚಿಹೋಗಿ ಕೆಲಸದಲ್ಲಿದ್ದ ಹಲವಾರು ಕಾರ್ಮಿಕರು ಸುರಂಗದ ಆಳದಲ್ಲಿ ಸಿಲುಕಿಕೊಳ್ಳುವಂತಾಯಿತು.
ಘಟನೆ ನಡೆದ ತಕ್ಷಣವೇ ಸ್ಪಂದಿಸಿದ ರಕ್ಷಣಾ ಸಿಬ್ಬಂದಿ 12 ಜನರನ್ನು ಸುರಕ್ಷಿತವಾಗಿ ಹೊರತರಲು ಯಶಸ್ವಿಯಾಗಿದ್ದಾರಾದರೂ, ಕನಿಷ್ಠ 18ಕ್ಕೂ ಹೆಚ್ಚು ಜನರು ಇನ್ನೂ ಒಳಗೇ ಇರುವ ಭೀತಿ ಎದುರಾಗಿದೆ. ಆದರೆ ಸುರಂಗದೊಳಗೆ ಸಿಲುಕಿರುವ ಸಂತ್ರಸ್ತರ ನಿಖರ ಸಂಖ್ಯೆಯನ್ನು ಜಿಲ್ಲಾಡಳಿತ ಹಾಗೂ ಮುಖ್ಯಮಂತ್ರಿಗಳ ಕಚೇರಿ ಇನ್ನು ಅಧಿಕೃತವಾಗಿ ಖಚಿತಪಡಿಸಬೇಕಿದೆ.
ರಕ್ಷಣಾ ಕಾರ್ಯಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿರುವುದು ಸುರಂಗದೊಳಗೆ ಸೃಷ್ಟಿಯಾಗಿರುವ ಭೀಕರ ಮಿಥೇನ್ ಅನಿಲದ ಸೋರಿಕೆ. ಭೂಕುಸಿತ ಸಂಭವಿಸಿದ ಕೂಡಲೇ ಸ್ಥಳೀಯ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಯಾವುದೇ ವಿಶೇಷ ರಕ್ಷಣಾ ಕವಚಗಳಿಲ್ಲದೆ ಎರಡು ಬಾರಿ ಸುರಂಗವನ್ನು ಪ್ರವೇಶಿಸಲು ಪ್ರಾಮಾಣಿಕ ಯತ್ನ ನಡೆಸಿದ್ದರು.
ಆದರೆ ಒಳಗಿದ್ದ ಅತಿಯಾದ ವಿಷಗಾಳಿಯಿಂದಾಗಿ ರಕ್ಷಣೆಗ ಇಳಿದ ಸಿಬ್ಬಂದಿಗೇ ತೀವ್ರ ತಲೆಸುತ್ತು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡು ಅಸ್ವಸ್ಥಗೊಂಡ ಕಾರಣ ಅವರು ಹಿಂದೆ ಸರಿಯಬೇಕಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ರಾಜ್ಯ ವಿಪತ್ತು ಶಮನ ಪಡೆಯ (SDRF) ಸಾಹಸ ಸಿಬ್ಬಂದಿ, ಅಸ್ವಸ್ಥಗೊಂಡಿದ್ದ ಅಗ್ನಿಶಾಮಕ ಸಿಬ್ಬಂದಿಯನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದರು. ತದನಂತರ ಆಮ್ಲಜನಕ ಸಿಲಿಂಡರ್ ಹಾಗೂ ವಿಶೇಷ ಸುರಕ್ಷತಾ ಉಪಕರಣಗಳನ್ನು ಧರಿಸಿ ಎರಡನೇ ಪಡೆ ಸುರಂಗದೊಳಗೆ ಪ್ರವೇಶಿಸಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ನಾಮ್ಚಿ ಜಿಲ್ಲಾಧಿಕಾರಿ ಅನುಫಾ ತಾಮ್ಲಿಂಗ್ ಅವರು ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ನೆರೆಯ ಸಿಲಿಗುರಿ ಹಾಗೂ ಪಾಕ್ಯೋಂಗ್ ಪ್ರದೇಶಗಳಿಂದ ಹೆಚ್ಚುವರಿ ಪರಿಣಿತರ ರಕ್ಷಣಾ ತಂಡಗಳನ್ನು ಕರೆಸಿಕೊಂಡಿದ್ದಾರೆ. ಸುರಂಗದ ಸುತ್ತಮುತ್ತ ರಕ್ಷಣಾ ವಾಹನಗಳ ಸುಗಮ ಸಂಚಾರಕ್ಕಾಗಿ ಸಾರ್ವಜನಿಕ ವಾಹನ ದಟ್ಟಣೆಯನ್ನು ನಿಯಂತ್ರಿಸಲಾಗಿದೆ. ಪ್ರಸ್ತುತ ಸುರಂಗದ ಆಳದಲ್ಲಿ ಮಿಥೇನ್ ಅನಿಲದ ಸಾಂದ್ರತೆ ತೀರಾ ಹೆಚ್ಚಿರುವುದರಿಂದ ಗೋಚರತೆ ಕೊರತೆಯಾಗಿದ್ದು, ಕಾರ್ಮಿಕರು ಸಿಲುಕಿದ್ದಾರೆ ಎನ್ನಲಾದ ನಿರ್ದಿಷ್ಟ ಜಾಗವನ್ನು ತಲುಪಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ದುರಂತಕ್ಕೆ ನಿಜವಾದ ಕಾರಣವೇನೆಂಬುದು ಈವರೆಗೂ ಸ್ಪಷ್ಟವಾಗಿಲ್ಲದಿದ್ದರೂ ಆಳದಲ್ಲಿ ಸಿಲುಕಿರುವ ಪ್ರತಿಯೊಬ್ಬ ಜೀವವನ್ನು ಸುರಕ್ಷಿತವಾಗಿ ಹೊರತರುವುದೇ ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ (ಏಜೆನ್ಸೀಸ್​).