- ವಿಶಾಖಪಟ್ಟಣದ ಉಕ್ಕಿನ ಘಟಕದಲ್ಲಿ ಅಗ್ನಿ ಅವಘಡ
- ಕನಿಷ್ಠ 8 ಕಾರ್ಮಿಕರು ಮೃತಪಟ್ಟಿದ್ದಾರೆ
ಆಂಧ್ರಪ್ರದೇಶ: ಇಂದು (ಜೂ.08) ವಿಶಾಖಪಟ್ಟಣದ ಉಕ್ಕಿನ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ ಎಂಟು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಬಕೆಟ್ನಲ್ಲಿದ್ದ ಕರಗಿದ ಉಕ್ಕು ಕಾರ್ಮಿಕರ ಮೈಮೇಲೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಅವಘಡದಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಇನ್ನೂ ಕೆಲವರು ಒಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ದುರಂತ ಸಂಭವಿಸಿದ್ದು ಹೇಗೆ?
ಪ್ಲಾಂಟ್‌ನ ಸ್ಟೀಲ್ ಮೆಲ್ಟಿಂಗ್ ಶಾಪ್ (SMS)-2 ಮತ್ತು STC-3 ವಿಭಾಗದಲ್ಲಿ ಮೇಲಕ್ಕೆತ್ತುವ ಪ್ರಕ್ರಿಯೆ ನಡೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ. ಭಾರಿ ಪ್ರಮಾಣದ ಕರಗಿದ ಉಕ್ಕು ಇದ್ದಕ್ಕಿದ್ದಂತೆ ಕೆಳಗೆ ಚೆಲ್ಲಿದೆ, ಸ್ಥಳದಲ್ಲೇ ಇದ್ದ ಕಾರ್ಮಿಕರು ಈ ಬಿಸಿ ಲೋಹದಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಗಾಯಗೊಂಡ ಕಾರ್ಮಿಕರನ್ನು ಕೂಡಲೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕ ಎನ್ನಲಾಗಿದೆ. ಪ್ರಸ್ತುತ, ಸ್ಥಳಕ್ಕೆ ದೌಡಾಯಿಸಿರುವ ರಕ್ಷಣಾ ಪಡೆಗಳು ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಮುಂದಾಗಿದ್ದು, ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).