ಮುರಿದ ಕಾಲಿನಲ್ಲೇ 150 ಕಿ.ಮೀ ತ್ರಿಚಕ್ರ ವಾಹನ ತುಳಿದು ಆಸ್ಪತ್ರೆ ತಲುಪಿದ 73ರ ವೃದ್ಧ (150 km on tricycle ಚಿತ್ರ X) 
ದೇಶ

ಬಡತನದ ಕರಾಳ ಮುಖ!...ಮುರಿದ ಕಾಲಿನಲ್ಲೇ 150 ಕಿ.ಮೀ ತ್ರಿಚಕ್ರ ವಾಹನ ತುಳಿದು ಆಸ್ಪತ್ರೆ ತಲುಪಿದ 73ರ ವೃದ್ಧ 150 km on tricycle

ಭುವನೇಶ್ವರ:

ಬಡತನ ಮತ್ತು ಕಷ್ಟಗಳು ಮನುಷ್ಯನನ್ನು ಎಂತಹ ಪರಿಸ್ಥಿತಿಗೂ ತಳ್ಳಬಲ್ಲವು ಎಂಬುದಕ್ಕೆ ಒಡಿಶಾದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿ. ಕಾಲಿನ ಮೂಳೆ ಮುರಿದಿದ್ದರೂ ಚಿಕಿತ್ಸೆಗೆ ಹಣವಿಲ್ಲದೆ 73 ವರ್ಷದ ವೃದ್ಧರೊಬ್ಬರು ಬರೋಬ್ಬರಿ 150 ಕಿಲೋಮೀಟರ್ ದೂರವನ್ನು ತ್ರಿಚಕ್ರ ವಾಹನದಲ್ಲೇ (

150 km on tricycle

) ಕ್ರಮಿಸಿ ಆಸ್ಪತ್ರೆ ತಲುಪಿದ ಘಟನೆ ಬೆಳಕಿಗೆ ಬಂದಿದೆ.

ಏನಿದು ಘಟನೆ?

ಒಡಿಶಾದ ನಯಾಗಢ ಜಿಲ್ಲೆಯ ಸುಖದೇವ್ ನಾಯಕ್ (73), ಕಾಲಿನ ತೀವ್ರ ನೋವಿನ ನಡುವೆಯೂ ಉಚಿತ ಚಿಕಿತ್ಸೆಯ ಭರವಸೆಯಿಂದ ಬೆರ್ಹಾಂಪುರದ ಸರ್ಕಾರಿ ಎಂಕೆಸಿಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಲುಪಲು ಸುಮಾರು ಎರಡು ದಿನಗಳ ಕಾಲ ಸ್ವತಃ ತ್ರಿಚಕ್ರ ವಾಹನ ತುಳಿದುಕೊಂಡು ಬಂದಿದ್ದಾರೆ.

ಹಸಿವು, ನೋವಿನ ನಡುವೆ 2 ದಿನಗಳ ಸುದೀರ್ಘ ಪ್ರಯಾಣ

ಈ ಹಿಂದೆ ಸುಖದೇವ್ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದಾಗ ಅಪಘಾತದಲ್ಲಿ ಕಾಲನ್ನು ಮುರಿದುಕೊಂಡಿದ್ದರು. ಈ ವೇಳೆ ಬಡತನದ ಜೊತೆಗೆ ಅವರನ್ನು ಕರೆದುಕೊಂಡು ಹೋಗಲು ಯಾರೂ ಇರಲಿಲ್ಲ. ಬೇರೆ ದಾರಿ ಕಾಣದೆ, ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಸಿಗಬಹುದು ಎಂಬ ಭರವಸೆಯಿಂದ ಬೆರ್ಹಾಂಪುರಕ್ಕೆ ಹೊರಟಿರುವುದಾಗಿ ತಿಳಿಸಿದ್ದಾರೆ.
ಪ್ರಯಾಣದ ಮಧ್ಯೆ ಊಟಕ್ಕೂ ಹಣವಿಲ್ಲದಿದ್ದಾಗ, ಹಾದಿಯಲ್ಲಿ ಸಿಕ್ಕ ಜನರು ನೀಡಿದ ಆಹಾರವನ್ನು ಸೇವಿಸುತ್ತಾ, ಅಸಹನೀಯ ನೋವಿನ ನಡುವೆಯೂ ಪ್ರಯಾಣ ಮುಂದುವರಿಸಿದ್ದಾರೆ. 

ಕಣ್ಣೀರು ತರಿಸುವ ಕುಟುಂಬದ ಕಥೆ

ತಮ್ಮ ಅಳಲನ್ನು ತೋಡಿಕೊಂಡ ಸುಖದೇವ್, "2011ರಲ್ಲೇ ನನ್ನ ಹೆಂಡತಿ ತೀರಿಕೊಂಡಳು. ಒಬ್ಬನೇ ಮಗನಿದ್ದು, ಆತ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಕೆಲಸ ಮಾಡಲು ಆತನಿಗೆ ಸಾಧ್ಯವಿಲ್ಲ. ಕುಟುಂಬದಲ್ಲಿ ತೀವ್ರ ಆರ್ಥಿಕ ಸಂಕಷ್ಟವಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆತು ಮತ್ತೆ ಮೊದಲಿನಂತೆಯೇ ನಡೆಯುವಂತೆ ಆದರೆ ಸಾಕು ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಸ್ಪಂದಿಸಿದ ಆಸ್ಪತ್ರೆ ಆಡಳಿತ ಮಂಡಳಿ

ವೃದ್ಧನ ಶೋಚನೀಯ ಸ್ಥಿತಿಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಎಂಕೆಸಿಜಿ ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಯು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿದೆ. ಸುಖದೇವ್ ಅವರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ತಪಾಸಣೆಗಳನ್ನು ನಡೆಸಿ, ಸೂಕ್ತ ಚಿಕಿತ್ಸೆ ನೀಡುವುದಾಗಿ ಆಸ್ಪತ್ರೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ (ಏಜೆನ್ಸೀಸ್​).