- ಶೇ.73ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪೂರ್ಣಗೊಳಿಸದೆ ಡ್ರಾಪ್ ಔಟ್
- ಶಾಲೆಗಳ ಸಂಖ್ಯೆ ಕುಸಿತವೂ ಡ್ರಾಪ್‌ಔಟ್‌ಗೆ ಪ್ರಮುಖ ಕಾರಣವೆಂದು ಹೇಳಿಕೆ
- ಕೇವಲ 5.23 ಲಕ್ಷ ಶಾಲೆಗಳಲ್ಲಿ ಮಾತ್ರ ವಿಶೇಷಚೇತನ ಸ್ನೇಹಿ ಶೌಚಾಲಯ
ನವದೆಹಲಿ: ದೇಶದ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ, ಅವರು ಉನ್ನತ ಮಾಧ್ಯಮಿಕ ಅಂದರೆ ಹಿರಿಯ ಪ್ರಾಥಮಿಕ ಅಥವಾ ಪ್ರೌಢ ಶಾಲಾ ಹಂತಕ್ಕೆ ಹೋಗುವ ಮುನ್ನವೇ ಅಧಿಕ ಸಂಖ್ಯೆಯಲ್ಲಿ ಡ್ರಾಪ್ ಔಟ್ ಆಗುತ್ತಿರುವ ಶಾಕಿಂಗ್ ಅಂಕಿಅಂಶ ಇದೀಗ ಹೊರಬಿದ್ದಿದೆ.
ಹಿರಿಯ ಪ್ರಾಥಮಿಕ ಶಾಲೆಗಳಿಗೆ ದಾಖಲು ಆಗುವವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ. ಶೇ.73ರಷ್ಟು ವಿದ್ಯಾರ್ಥಿಗಳು ಉನ್ನತ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸುವ ಹಂತಕ್ಕೆ ತಲುಪದೆ, ಅರ್ಧಕ್ಕೆ ಶಾಲೆ ಬಿಟ್ಟು ಹೋಗುತ್ತಿದ್ದಾರೆ ಎಂದು ಸಂಸದೀಯ ಶಿಕ್ಷಣ ಸಮಿತಿ ತನ್ನ ವರದಿಯಲ್ಲಿ ತೀರ ಕಳವಳ ವ್ಯಕ್ತಪಡಿಸಿದೆ. 2026-27ನೇ ಸಾಲಿನ ಅಂದಾಜುಗಳ ಕಮಿಟಿಯ 10ನೇ ವರದಿಯಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಹಲವು ಪ್ರಮುಖ ಸಮಸ್ಯೆಗಳನ್ನು ಎತ್ತಿ ಹಿಡಿಯಲಾಗಿದೆ.
ವಿದ್ಯಾರ್ಥಿಗಳ ದಾಖಲಾತಿ ಕುಸಿತದ ಜತೆಗೆ, ಶಾಲೆಗಳು ಹಾಗೂ ಪಠ್ಯಪುಸ್ತಕಗಳ ಕೊರತೆ, ಹೊಸ ಪರೀಕ್ಷಾ ಪದ್ಧತಿಯಿಂದ ವಿದ್ಯಾರ್ಥಿಗಳ ಮೇಲಿನ ಒತ್ತಡ, ವಿಶೇಷಚೇತನ ವಿದ್ಯಾರ್ಥಿಗಳಿಗೆ ಮೂಲಸೌಕರ್ಯದ ಅಭಾವ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯ ಪ್ರಮಾಣದ ಹಣ ಬಳಕೆಯಾಗದಿರುವುದನ್ನೂ ಗಮನಿಸಿರುವ ಸಮಿತಿ, ಈ ಗಂಭೀರ ವಿಷಯಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದೆ.
ಯಾವ ಹಂತದಲ್ಲಿ ಎಷ್ಟು ಕುಸಿತ?
ಯುಡಿಐಎಸ್ಇ ಪ್ಲಸ್ (UDISE+) 2024-25ರ ಅಂಕಿಅಂಶಗಳ ಪ್ರಕಾರ, ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿ 6.18 ಕೋಟಿ ವಿದ್ಯಾರ್ಥಿಗಳು ದಾಖಲಾಗಿದ್ದರು. 6ರಿಂದ 8ನೇ ತರಗತಿಯ ಹಂತಕ್ಕೆ ಬಂದಾಗ ಈ ಸಂಖ್ಯೆ ಸುಮಾರು 4.09 ಕೋಟಿಗೆ ಇಳಿಕೆ ಆಗಿರುವುದಾಗಿ ತಿಳಿಸಿದೆ. ಇನ್ನು, ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 2.37 ಕೋಟಿ, ಅದೇ ಉನ್ನತ ಮಾಧ್ಯಮಿಕ ಹಂತದಲ್ಲಿ 1.64 ಕೋಟಿಗೆ ಕುಸಿದಿದೆ ಎಂದು ವಿವರಿಸಿದೆ.
ಎಲ್ಲರೂ ಶಾಲೆ ಅರ್ಧಕ್ಕೆ ಬಿಟ್ಟಿದ್ದಾರೆ ಎಂಬರ್ಥವಲ್ಲ!
ಇದನ್ನು ಇನ್ನಷ್ಟು ವಿವರವಾಗಿ ತಿಳಿಯುವುದಾದರೆ, ಪ್ರಾಥಮಿಕ ಹಂತದಲ್ಲಿ ಶಾಲೆಗೆ ಸೇರುವ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಪೈಕಿ ಬಹುತೇಕರು ಉನ್ನತ ಶಿಕ್ಷಣ ಪಡೆಯಲು ಮುಂದಾಗುತ್ತಿಲ್ಲ. ಬದಲಿಗೆ 7-8ನೇ ತರಗತಿಗೆ ಹೋಗುವ ಮುನ್ನವೇ ಅಧಿಕ ಪ್ರಮಾಣದಲ್ಲಿ ಡ್ರಾಪ್ ಔಟ್ ಆಗುತ್ತಿದ್ದಾರೆ ಎಂಬುದನ್ನು ಈ ಅಂಕಿಅಂಶಗಳು ಒತ್ತಿ ಹೇಳಿವೆ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ, ಎಲ್ಲರೂ ಶಾಲೆಯನ್ನು ಅರ್ಧಕ್ಕೆ ಬಿಟ್ಟು, ವಿದ್ಯಾಭ್ಯಾಸ ಕಡಿತಗೊಳಿಸಿದ್ದಾರೆ ಎಂದರ್ಥವಲ್ಲ. ಕೆಲವರು, ಶಾಲೆ ಬದಲಾವಣೆ, ಇತರೆ ಶಿಕ್ಷಣ ವ್ಯವಸ್ಥೆಗಳಿಂದ ವರ್ಗಾವಣೆ ಸೇರಿ ಹಲವು ಕಾರಣಗಳಿಂದ ಬಿಟ್ಟಿದ್ದಾರೆ. ಇದೂ ದಾಖಲಾತಿ ಸಂಖ್ಯೆಯ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ಪ್ರೌಢ, ಉನ್ನತ ಮಾಧ್ಯಮಿಕ ಶಾಲೆಗಳ ಕೊರತೆ
ಪ್ರಾಥಮಿಕ ಹಂತಕ್ಕೆ ಹೋಲಿಸಿದರೆ ಪ್ರೌಢ ಮತ್ತು ಉನ್ನತ ಮಾಧ್ಯಮಿಕ ಹಂತದಲ್ಲಿ ಶಾಲೆಗಳ ಸಂಖ್ಯೆಯೂ ಕಡಿಮೆಯಾಗಿದೆ. ದೇಶದಲ್ಲಿರುವ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಪೈಕಿ 9.11 ಲಕ್ಷ ಸ್ಕೂಲ್ಗಳು ಪ್ರಾಥಮಿಕ ಹಂತದಲ್ಲಿದ್ದರೆ, ಕೇವಲ 1.62 ಲಕ್ಷ ಪ್ರೌಢ ಹಂತದಲ್ಲಿ ಮತ್ತು 90,866 ಶಾಲೆಗಳು ಉನ್ನತ ಮಾಧ್ಯಮಿಕ ಹಂತದಲ್ಲಿವೆ.
ವಿದ್ಯಾರ್ಥಿಗಳು ಹಂತ ಹಂತವಾಗಿ ತರಗತಿಗಳಿಗೆ ಹೋಗುತ್ತಿದ್ದಂತೆ ಅವರಿಗೆ ಹತ್ತಿರದಲ್ಲೇ ಲಭ್ಯವಿರುವ ಶಾಲೆಗಳ ಸಂಖ್ಯೆಯೂ ಕಡಿಮೆಯಾಗಿದೆ. ಈ ಸಮಸ್ಯೆ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಕೆಗೂ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಇದಕ್ಕಾಗಿ ಈಗಿರುವ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಮಾಧ್ಯಮಿಕ ಶಾಲೆಗಳಾಗಿ ಮೇಲ್ದರ್ಜೆಗೇರಿಸುವಂತೆ ಸಮಿತಿ ಶಿಫಾರಸು ಮಾಡಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊಸ ಪ್ರೌಢ ಹಾಗೂ ಉನ್ನತ ಮಾಧ್ಯಮಿಕ ಶಾಲೆಗಳನ್ನು ಸ್ಥಾಪಿಸಲು ಉತ್ತೇಜನ ನೀಡುವಂತೆ ಕೇಂದ್ರ ಶಿಕ್ಷಣ ಸಚಿವಾಲಯಕ್ಕೂ ಸೂಚಿಸಿದೆ.
ಶೇ.50ಕ್ಕೂ ಅಧಿಕ ಶಾಲೆಯಲ್ಲಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳಿಲ್ಲ!
ಶಾಲೆಗಳಲ್ಲಿ ವಿಶೇಷಚೇತನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳ ಕೊರತೆಯನ್ನೂ ಸಂಸದೀಯ ಸಮಿತಿ ಗಂಭೀರವಾಗಿ ಪ್ರಸ್ತಾಪಿಸಿದೆ. UDISE+ 2024-25ರ ಪ್ರಕಾರ, ದೇಶದಲ್ಲಿರುವ 14.71 ಲಕ್ಷ ಶಾಲೆಗಳಲ್ಲಿ ಕೇವಲ 5.23 ಲಕ್ಷ ಶಾಲೆಗಳಲ್ಲಿ ಮಾತ್ರ ವಿಶೇಷಚೇತನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಶೌಚಾಲಯಗಳಿವೆ. ಸುಮಾರು 8.08 ಲಕ್ಷ ಶಾಲೆಗಳಲ್ಲಿ ಮಾತ್ರ ಕೈಹಿಡಿಕೆ ಹೊಂದಿರುವ ರ‍್ಯಾಂಪ್‌ಗಳಿವೆ. ಇದರರ್ಥ, ದೇಶದ ದೊಡ್ಡ ಸಂಖ್ಯೆಯ ಶಾಲೆಗಳಲ್ಲಿ ವಿಶೇಷ ಅಗತ್ಯವಿರುವ ಮಕ್ಕಳಿಗೆ ಸುಲಭವಾಗಿ ಪ್ರವೇಶಿಸಲು ಮತ್ತು ಶಾಲಾ ಸೌಲಭ್ಯಗಳನ್ನು ಬಳಸಲು ಇನ್ನೂ ಸೂಕ್ತ ವ್ಯವಸ್ಥೆಯೇ ಇಲ್ಲ ಎಂಬುದು ಇಲ್ಲಿ ಗಮನಾರ್ಹ.
ಮೀಸಲಿಟ್ಟ ಹಣವೂ ಸಂಪೂರ್ಣ ಬಳಕೆಯಾಗಿಲ್ಲ
ಮೂಲಸೌಕರ್ಯ ಅಭಿವೃದ್ಧಿಗೆ ಹಣ ಮೀಸಲಿಟ್ಟಿದ್ದರೂ ಅದರ ಬಳಕೆ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ ಎಂದು ಸಮಿತಿ ವಿರೋಧಿಸಿದೆ. 186 ವಿಶೇಷಚೇತನ ಸ್ನೇಹಿ ಶೌಚಾಲಯಗಳ ನಿರ್ಮಾಣಕ್ಕಾಗಿ 482 ಲಕ್ಷ ರೂ. ಮೀಸಲಿಟ್ಟಿದ್ದರೂ, 2024-25ರಲ್ಲಿ ಕೇವಲ 2.60 ಲಕ್ಷ ಮಾತ್ರ ಬಳಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಗೊಂಡಿದೆ. ಅದೇ ರೀತಿ, ಪ್ರಾಥಮಿಕ ಶಿಕ್ಷಣದಲ್ಲಿ ವಿಶೇಷ ಶಿಕ್ಷಕರಿಗಾಗಿ ಮೀಸಲಿಟ್ಟಿದ್ದ 962 ಲಕ್ಷದಲ್ಲಿ ಕೇವಲ 80.50 ಲಕ್ಷ ರೂ. ಮಾತ್ರ ಬಳಸಿಕೊಳ್ಳಲಾಗಿದೆ,(ಏಜೆನ್ಸೀಸ್).