ಚೆನ್ನೈ: ದೇಶದ ಪ್ರಮುಖ ಸಾರಿಗೆ ಸಂಸ್ಥೆಯಾದ ವಿಆರ್ಎಲ್ ಲಾಜಿಸ್ಟಿಕ್ಸ್ 715 ವಾಣಿಜ್ಯ ವಾಹನಗಳ ಪೂರೈಕೆಗಾಗಿ ಚೆನ್ನೈ ಮೂಲದ ಅಶೋಕ್ ಲೇಲ್ಯಾಂಡ್ಗೆ ಬೃಹತ್ ಆರ್ಡರ್ ನೀಡಿದೆ. ಈ ಆರ್ಡರ್ನಲ್ಲಿ ಎವಿಟಿಆರ್ 3120 ಸರಕು ಸಾಗಣೆ ಟ್ರಕ್ಗಳು, ಬಾಸ್ 1615 ಟ್ರಕ್ಗಳು ಮತ್ತು ಆಯ್ಸ್ಟರ್ ಸಿಬ್ಬಂದಿ ಸಾರಿಗೆ ಬಸ್ಗಳು ಸೇರಿವೆ.
ಅಶೋಕ್ ಲೇಲ್ಯಾಂಡ್ ಈ ಬಗ್ಗೆ ಸೋಮವಾರ ಪ್ರಕಟಣೆ ನೀಡಿ, ವಿಆರ್ಎಲ್ ಲಾಜಿಸ್ಟಿಕ್ಸ್ ಸಂಸ್ಥೆಯೊಂದಿಗೆ ತನಗಿರುವ ದಶಕಗಳ ಸುದೀರ್ಘ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಈ ಒಪ್ಪಂದ ಪ್ರಮುಖ ಮೈಲಿಗಲ್ಲಾಗಿದೆ ಎಂದು ತಿಳಿಸಿದೆ. ಒಪ್ಪಂದದ ಪ್ರಕಾರ ವಾಹನಗಳ ಪೂರೈಕೆ ಪ್ರಕ್ರಿಯೆ ಈಗಾಗಲೇ ಪ್ರಗತಿಯಲ್ಲಿದ್ದು, ಒಟ್ಟು ವಾಹನಗಳ ಪೈಕಿ 300 ಟ್ರಕ್ಗಳನ್ನು ಈಗಾಗಲೇ ವಿಆರ್ಎಲ್ ಸಂಸ್ಥೆಗೆ ಯಶಸ್ವಿಯಾಗಿ ಹಸ್ತಾಂತರಿಸಲಾಗಿದೆ. ಇನ್ನುಳಿದ 415 ವಾಹನಗಳನ್ನು ಪ್ರಸಕ್ತ ವರ್ಷದ ಒಳಗಾಗಿ ಪೂರೈಸಲು ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದೆ.
ಅಶೋಕ್ ಲೇಲ್ಯಾಂಡ್ನ ಮೀಡಿಯಂ ಆಂಡ್ ಹೆವಿ ಕಮರ್ಷಿಯಲ್ ವೆಹಿಕಲ್ಸ್ (ಎಂಎಚ್ಸಿವಿ) ವಿಭಾಗದ ರಾಷ್ಟ್ರೀಯ ಮಾರಾಟ ಮುಖ್ಯಸ್ಥೆ ಮಾಧವಿ ದೇಶ್ವುುಖ್ ಪ್ರತಿಕ್ರಿಯಿಸಿದ್ದು, ‘ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಗ್ರಾಹಕರ ಉದಯೋನ್ಮುಖ ಅಗತ್ಯಗಳಿಗೆ ತಕ್ಕಂತೆ ಹೊಸ ಉತ್ಪನ್ನಗಳು ಮತ್ತು ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ವಿಆರ್ಎಲ್ ಸಂಸ್ಥೆ ಹಲವಾರು ವರ್ಷಗಳಿಂದ ನಮ್ಮೊಂದಿಗೆ ನಿಕಟವಾಗಿ ಕೆಲಸ ಮಾಡಿದೆ. ಈ ಬೃಹತ್ ಆರ್ಡರ್ ಲಭಿಸಿರುವುದು ಅಶೋಕ್ ಲೇಲ್ಯಾಂಡ್ನ ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯ ಮೇಲೆ ವಿಆರ್ಎಲ್ ಲಾಜಿಸ್ಟಿಕ್ಸ್ ಇಟ್ಟಿರುವ ಅಚಲ ನಂಬಿಕೆಗೆ ಸಾಕ್ಷಿಯಾಗಿದೆ’ ಎಂದು ಹೇಳಿದ್ದಾರೆ.
ಈ ಹೊಸ ವಾಹನಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಇವುಗಳ ನಿರ್ವಹಣಾ ವೆಚ್ಚ ಹಾಗೂ ರಿಪೇರಿ ಸಮಯ (ಡೌನ್ಟೈಮ್ ಗಣನೀಯವಾಗಿ ಕಡಿಮೆ ಇರಲಿದೆ. ಇದು ಸಾರಿಗೆ ಸಂಸ್ಥೆಯ ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೆ, ಕಾರ್ಯಾಚರಣೆಯ ಲಾಭದಾಯಕತೆಯನ್ನು ಉತ್ತಮ ಪಡಿಸಲು ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅಶೋಕ್ ಲೇಲ್ಯಾಂಡ್ ತಿಳಿಸಿದೆ.
"
ನಮ್ಮ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಲಯದ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ 715 ಹೊಸ ವಾಹನಗಳ ಈ ಆರ್ಡರ್ ಎರಡೂ ಕಂಪನಿಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಿದೆ.
- ಡಾ. ವಿಜಯ ಸಂಕೇಶ್ವರ
- ಡಾ. ಆನಂದ ಸಂಕೇಶ್ವರ