ಬಿಕಿನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್‌ನಿಂದ ಸ್ಫೂರ್ತಿ: 300ಕ್ಕೂ ಹೆಚ್ಚು ಲಕ್ಷುರಿ ಹೋಟೆಲ್‌ಗಳಿಗೆ ನಾಮ ಹಾಕಿದ್ದ ವೃದ್ಧ ಅರೆಸ್ಟ್! Charles Sobhraj
- ಭಾರತದ 'ನಕಲಿ' ಚಾರ್ಲ್ಸ್ ಶೋಭರಾಜ್ ಕೊನೆಗೂ ಅರೆಸ್ಟ್
- 36 ವರ್ಷದಲ್ಲಿ 300 ಐಷಾರಾಮಿ ಹೋಟೆಲ್‌ಗಳಿಗೆ ನಾಮ ಹಾಕಿದ್ದ 69ರ ವೃದ್ಧ
- ದೇಶದ 10 ರಾಜ್ಯಗಳ ಪೊಲೀಸರಿಗೆ ಮಣ್ಣೆರಚಿದ್ದ ಬಿಂಗ್ಸನ್ ಜಾನ್ ಸೆರೆ
- ಯೋಗ ಟೀಚರ್, ಗೈಡ್ ಸೋಗಿನಲ್ಲಿ ಸ್ಟಾರ್ ಹೋಟೆಲ್ ಲೂಟಿ ಮಾಡ್ತಿದ್ದ ಖದೀಮ
ಚೆನ್ನೈ: ಕಳೆದ 36 ವರ್ಷಗಳಿಂದ ದೇಶಾದ್ಯಂತ 300ಕ್ಕೂ ಹೆಚ್ಚು ಐಷಾರಾಮಿ ಹೋಟೆಲ್‌ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ತಮಿಳುನಾಡು ಮೂಲದ 69 ವರ್ಷದ ವೃದ್ಧನೊಬ್ಬನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು, ತಾನು ಕುಖ್ಯಾತ ಸರಣಿ ಹಂತಕ 'ಚಾರ್ಲ್ಸ್ ಶೋಭರಾಜ್' (Charles Sobhraj) ಜೀವನದಿಂದ ಪ್ರೇರಿತನಾಗಿದ್ದಾಗಿ ಹಾಗೂ ಆತನ ವಂಚನೆಯ ತಂತ್ರಗಳನ್ನೇ ಅಳವಡಿಸಿಕೊಂಡು ಹೋಟೆಲ್‌ಗಳಿಗೆ ಮೋಸ ಮಾಡುತ್ತಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಬಂಧಿತ ಆರೋಪಿಯನ್ನು ಬಿಂಗ್ಸನ್ ಜಾನ್ ಎಂದು ಗುರುತಿಸಲಾಗಿದೆ. ರಾಯ್‌ಪುರದ ಪಂಚತಾರಾ ಹೋಟೆಲ್‌ವೊಂದು ನೀಡಿದ ದೂರಿನ ಆಧಾರದ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿದ ಆ್ಯಂಟಿ-ಕ್ರೈಮ್ ಹಾಗೂ ಸೈಬರ್ ಯುನಿಟ್ ಮತ್ತು ತೇಲಿಬಂಧ ಠಾಣಾ ಪೊಲೀಸರು, ತಾಂತ್ರಿಕ ವಿಶ್ಲೇಷಣೆ ಹಾಗೂ ಮೊಬೈಲ್ ಸಂಖ್ಯೆಗಳ ಆಧಾರದ ಮೇಲೆ ಆರೋಪಿಯನ್ನು ಒಡಿಶಾದ ಭುವನೇಶ್ವರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ಆರೋಪಿ ಬಿಂಗ್ಸನ್ ಜಾನ್ ಹೋಟೆಲ್ ಸಿಬ್ಬಂದಿಯ ವಿಶ್ವಾಸ ಗಳಿಸಲು ತಾನು ವಿದೇಶಿ ಪ್ರವಾಸಿ ಗೈಡ್, ಇಂಗ್ಲಿಷ್ ಶಿಕ್ಷಕ ಅಥವಾ ಯೋಗ ತರಬೇತುದಾರ ಎಂದು ಸುಳ್ಳು ಗುರುತು ಹೇಳಿಕೊಳ್ಳುತ್ತಿದ್ದನು. ಪ್ರೀಮಿಯಂ ಹೋಟೆಲ್‌ಗಳಿಗೆ ಚೆಕ್-ಇನ್ ಆಗಿ ಐಷಾರಾಮಿ ಸೇವೆಗಳನ್ನು ಪಡೆದ ನಂತರ, ಬಿಲ್ ಪಾವತಿಸದೆ ಪರಾರಿಯಾಗುತ್ತಿದ್ದ ಹಾಗೂ ಕೆಲವು ಸಂದರ್ಭಗಳಲ್ಲಿ ಹೋಟೆಲ್‌ನ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದನು ಎಂದು ಹೇಳಲಾಗಿದೆ.
ಇತ್ತೀಚಿನ ಈ ವಂಚನೆ ಪ್ರಕರಣ ರಾಯ್‌ಪುರದ ಪ್ರತಿಷ್ಠಿತ ಹ್ಯಾಟ್ ಹೋಟೆಲ್ ನೀಡಿದ ದೂರಿನಿಂದ ಬೆಳಕಿಗೆ ಬಂದಿದೆ. ಜೂನ್ 25 ರಂದು ಹೋಟೆಲ್‌ಗೆ ಚೆಕ್-ಇನ್ ಆಗಿದ್ದ ಬಿಂಗ್ಸನ್ ಜಾನ್, ಜೂನ್ 27 ರ ಬೆಳಗ್ಗೆ ಯಾವುದೇ ಚೆಕ್-ಔಟ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದೆ ಅಲ್ಲಿಂದ ಕಾಲ್ಕಿತ್ತಿದ್ದನು. ಈತ ಹೋಟೆಲ್‌ಗೆ ಪಾವತಿಸಬೇಕಿದ್ದ 63,755 ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿದ್ದಲ್ಲದೆ, ತನ್ನ ವಿನಂತಿಯ ಮೇರೆಗೆ ಹೋಟೆಲ್‌ನಿಂದ ಪಡೆದಿದ್ದ ಸುಮಾರು 1.48 ಲಕ್ಷ ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್ ಅನ್ನು ಸಹ ಕದ್ದು ಕೊಂಡೊಯ್ದಿದ್ದನು.
ಆರೋಪಿಯನ್ನು ಸಂಪರ್ಕಿಸಲು ಹೋಟೆಲ್ ಸಿಬ್ಬಂದಿ ನಡೆಸಿದ ಸರಣಿ ಪ್ರಯತ್ನಗಳು ವಿಫಲವಾದಾಗ, ಹೋಟೆಲ್ ಆಡಳಿತ ಮಂಡಳಿಯು ತೇಲಿಬಂಧ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದೆ. ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 318(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು, ಆರೋಪಿ ನೀಡಿದ್ದ ನಕಲಿ ದಾಖಲೆಗಳು ಮತ್ತು ಮೊಬೈಲ್ ನೆಟ್‌ವರ್ಕ್ ಟ್ರ್ಯಾಕ್ ಮಾಡುವ ಮೂಲಕ ಆತನನ್ನು ಭುವನೇಶ್ವರದಲ್ಲಿ ಸೆರೆಹಿಡಿದಿದ್ದಾರೆ.
ಚಾರ್ಲ್ಸ್ ಶೋಭರಾಜ್‌ನಿಂದ ಸ್ಫೂರ್ತಿ
ಪೊಲೀಸರ ತೀವ್ರ ವಿಚಾರಣೆ ವೇಳೆ ಆರೋಪಿ ಬಿಂಗ್ಸನ್ ಜಾನ್, ಸುಳ್ಳು ಗುರುತುಗಳ ಮೂಲಕ ಜನರನ್ನು ವಂಚಿಸುತ್ತಿದ್ದ ಕುಖ್ಯಾತ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌ನಿಂದ ತಾನು ಪ್ರಭಾವಿತನಾಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತನಂತೆಯೇ ಹೋಟೆಲ್ ಸಿಬ್ಬಂದಿಯ ನಂಬಿಕೆ ಗಳಿಸಲು ತಾನು ಪದೇ ಪದೇ ವೃತ್ತಿ ಮತ್ತು ಗುರುತುಗಳನ್ನು ಬದಲಾಯಿಸುತ್ತಿದ್ದಾಗಿ ತಿಳಿಸಿದ್ದಾನೆ. 1990 ರಿಂದೀಚೆಗೆ ದೇಶಾದ್ಯಂತ 300ಕ್ಕೂ ಹೆಚ್ಚು ಐಷಾರಾಮಿ ಹೋಟೆಲ್‌ಗಳನ್ನು ಗುರಿಯಾಗಿಸಿಕೊಂಡು ವಂಚಿಸಿರುವುದಾಗಿ ಜಾನ್ ಒಪ್ಪಿಕೊಂಡಿದ್ದು, ಮೆಟ್ರೋಪಾಲಿಟನ್ ನಗರಗಳು ಸೇರಿದಂತೆ ದೇಶದ 10 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈತನ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
ಈ ದೀರ್ಘಕಾಲದ ವಂಚನೆಯ ಜಾಲದಲ್ಲಿ ಆರೋಪಿ ಬಿಂಗ್ಸನ್ ಜಾನ್ ದೆಹಲಿಯ ಪ್ರತಿಷ್ಠಿತ ತಿಹಾರ್ ಜೈಲು ಸೇರಿದಂತೆ ದೇಶದ ವಿವಿಧ ಕಾರಾಗೃಹಗಳಲ್ಲಿ ಬರೋಬ್ಬರಿ 15 ವರ್ಷಗಳಿಗಿಂತ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಜೈಲಿನಲ್ಲಿದ್ದ ಅವಧಿಯಲ್ಲೇ ಈತ ಹಲವು ಕುಖ್ಯಾತ ಅಪರಾಧಿಗಳ ಸಂಪರ್ಕಕ್ಕೆ ಬಂದಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸದ್ಯ ರಾಯ್‌ಪುರದ ಹ್ಯಾಟ್ ಹೋಟೆಲ್‌ನಿಂದ ಈತ ಕದ್ದಿದ್ದ ಲ್ಯಾಪ್‌ಟಾಪ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈತನ ವಂಚನೆಯ ಸಂಪೂರ್ಣ ವ್ಯಾಪ್ತಿಯನ್ನು ಪತ್ತೆಹಚ್ಚಲು ಹಾಗೂ ಇತರ ರಾಜ್ಯಗಳಲ್ಲಿ ದಾಖಲಾಗಿರುವ ಹಳೆಯ ಪ್ರಕರಣಗಳನ್ನು ಮರುಪರಿಶೀಲಿಸಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಚಾರ್ಲ್ಸ್ ಶೋಭರಾಜ್ ಯಾರು?
ಚಾರ್ಲ್ಸ್ ಶೋಭರಾಜ್ 1970ರ ದಶಕದಲ್ಲಿ ಏಷ್ಯಾದಾದ್ಯಂತ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಸರಣಿ ಕೊಲೆ ಹಾಗೂ ವಂಚನೆಗಳನ್ನು ಮಾಡಿದ್ದ ಒಬ್ಬ ಕುಖ್ಯಾತ ಅಂತಾರಾಷ್ಟ್ರೀಯ ಸರಣಿ ಹಂತಕ, ಕಳ್ಳ ಮತ್ತು ವಂಚಕ. ನಕಲಿ ಗುರುತುಗಳನ್ನು ಬಳಸಿ ಪೊಲೀಸರ ಕಣ್ಣಿಗೆ ಮಣ್ಣೆರಚಿ ಹಲವು ಬಾರಿ ಜೈಲಿನಿಂದ ತಪ್ಪಿಸಿಕೊಳ್ಳುತ್ತಿದ್ದ ಈತನ ಚಾಣಾಕ್ಷತನದಿಂದಾಗಿ ಈತನಿಗೆ 'ದಿ ಸರ್ಪೆಂಟ್' ಹಾಗೂ 'ಬಿಕಿನಿ ಕಿಲ್ಲರ್' ಎಂಬ ಹೆಸರುಗಳು ಬಂದಿದ್ದವು. ಥಾಯ್ಲೆಂಡ್, ಭಾರತ ಮತ್ತು ನೇಪಾಳ ಸೇರಿದಂತೆ ಹಲವು ದೇಶಗಳಲ್ಲಿ ಕನಿಷ್ಠ 12ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರನ್ನು ಕೊಲೆ ಮಾಡಿದ ಆರೋಪ ಈತನ ಮೇಲಿದ್ದು, ಭಾರತದ ತಿಹಾರ್ ಜೈಲಿನಲ್ಲಿ ದೀರ್ಘಕಾಲ ಶಿಕ್ಷೆ ಅನುಭವಿಸಿದ ಬಳಿಕ ನೇಪಾಳದಲ್ಲೂ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಈತನನ್ನು 2022ರಲ್ಲಿ ವಯೋಸಹಜ ಕಾರಣಗಳಿಗಾಗಿ ಜೈಲಿನಿಂದ ಬಿಡುಗಡೆ ಮಾಡಿ ಫ್ರಾನ್ಸ್‌ಗೆ ಗಡಿಪಾರು ಮಾಡಲಾಗಿದೆ, (ಏಜೆನ್ಸೀಸ್).