ವೋಟರ್ ಲಿಸ್ಟ್‌ನಿಂದ 6.5 ಕೋಟಿ ಹೆಸರುಗಳ ಡಿಲೀಟ್! ಮೋದಿ ಸರ್ಕಾರ ಮುಸ್ಲಿಮರಲ್ಲಿ ಪ್ರಾಣಭಯ ಹುಟ್ಟಿಸುತ್ತಿದೆ! SIR ಪ್ರಕ್ರಿಯೆ ವಿರುದ್ಧ ಓವೈಸಿ ಆಕ್ರೋಶ! 
ದೇಶ

ವೋಟರ್ ಲಿಸ್ಟ್‌ನಿಂದ 6.5 ಕೋಟಿ ಹೆಸರುಗಳ ಡಿಲೀಟ್! ಮೋದಿ ಸರ್ಕಾರ ಮುಸ್ಲಿಮರಲ್ಲಿ ಪ್ರಾಣಭಯ ಹುಟ್ಟಿಸುತ್ತಿದೆ! SIR ಪ್ರಕ್ರಿಯೆ ವಿರುದ್ಧ ಓವೈಸಿ ಆಕ್ರೋಶ! Asaduddin Owaisi on SIR

ಹೈದರಾಬಾದ್: ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ(SIR) ಯೋಜನೆಯ ಸುತ್ತ ಈಗ ಇಡೀ ದೇಶದಲ್ಲಿ ರಾಜಕೀಯ ಮಹಾಸಂಗ್ರಾಮ ಭುಗಿಲೆದ್ದಿದೆ. ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ(Asaduddin Owaisi) ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಭಾರತದಲ್ಲಿ ಬಡವರು ಹಾಗೂ ಅಲ್ಪಸಂಖ್ಯಾತರನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯಿಂದಲೇ ಶಾಶ್ವತವಾಗಿ ಹೊರದೂಡುವ ದೊಡ್ಡ ಸಂಚಾಗಿದೆ ಎಂದು ಓವೈಸಿ ಗಂಭೀರವಾಗಿ ಆರೋಪಿಸಿದ್ದಾರೆ.

6.5 ಕೋಟಿ ಜನರ ವೋಟ್ ಕಟ್! - ಓವೈಸಿ ವಾದ

ಈ ಬಗ್ಗೆ ಎಕ್ಸ್​ನಲ್ಲಿ ಕೇಂದ್ರದ ನೀತಿಗಳನ್ನು ಕಟುವಾಗಿ ಟೀಕಿಸಿರುವ ಓವೈಸಿ, ಕೇಂದ್ರ ಸರ್ಕಾರವು ಕೇವಲ ದಾಖಲೆಗಳ ಆಧಾರದ ಮೇಲೆ ದೇಶದ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬರೋಬ್ಬರಿ 6.5 ಕೋಟಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಿದೆ. ಈಗ ಇದೇ ಬಹಿಷ್ಕೃತ ಜನರನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಲು ಸಮಿತಿಯೊಂದನ್ನು ರಚಿಸುತ್ತಿದೆ. ಅಕ್ರಮ ವಲಸಿಗರನ್ನು ಪತ್ತೆಹಚ್ಚುವ, ಬಂಧನ ಶಿಬಿರಗಳಲ್ಲಿ ಇಡುವ ಮತ್ತು ಗಡಿಪಾರು ಮಾಡುವ ದೀರ್ಘಕಾಲೀನ ಕಾಯಂ ವ್ಯವಸ್ಥೆಯನ್ನು ಸಾಂಸ್ಥಿಕಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಆಪಾದಿಸಿದ್ದಾರೆ.
ಮುಂದುವರಿದು ಮಾತನಾಡಿರುವ ಓವೈಸಿ, ಪ್ರಭಾವಶಾಲಿಗಳ ವಿರುದ್ಧ ಹೋರಾಡಲು ಈ ದೇಶದ ಬಡವನಿಗಿರುವ ಏಕೈಕ ಆಯುಧವೆಂದರೆ ಅದು ಮತದಾನದ ಹಕ್ಕು. ಅದನ್ನು ಕಿತ್ತುಕೊಂಡರೆ ಸರ್ಕಾರ ಬಡವರನ್ನು ತನ್ನಿಷ್ಟದಂತೆ ನಡೆಸಿಕೊಳ್ಳುತ್ತದೆ. ಈಗಾಗಲೇ ವೋಟರ್ ಲಿಸ್ಟ್‌ನಿಂದ ಹೊರಬಿದ್ದಿರುವ ಜನರಿಗೆ ಸರ್ಕಾರದ ಸೌಲಭ್ಯಗಳು ಮತ್ತು ಕಲ್ಯಾಣ ಯೋಜನೆಗಳು ಸಿಗದಂತೆ ತೊಂದರೆ ನೀಡಲಾಗುತ್ತಿದೆ ಎಂದು ಓವೈಸಿ ಆತಂಕ ಹೊರಹಾಕಿದ್ದಾರೆ.

"ಮೋದಿ ಸರ್ಕಾರಕ್ಕೆ ಒಂದು ಪರೀಕ್ಷೆ ನಡೆಸಲು ಯೋಗ್ಯತೆ ಇಲ್ಲ!- ನೀಟ್, ಸಿಬಿಎಸ್‌ಇ ವಿಷಯ ಪ್ರಸ್ತಾಪ

ದೇಶದ ಜನಸಂಖ್ಯಾ ಬೆಳವಣಿಗೆ ಸ್ಥಿರವಾಗಿದ್ದು, ಒಟ್ಟು ಹೆರಿಗೆ ಪ್ರಮಾಣ (TFR) 2.0 ಗೆ ತಲುಪಿದೆ ಎಂದು ಸರ್ಕಾರದ ಅಂಕಿ-ಅಂಶಗಳೇ ಹೇಳುತ್ತಿರುವಾಗ, ಈ ಹೊಸ ಸಮಿತಿಯ ಅಗತ್ಯವೇನಿದೆ ಎಂದು ಪ್ರಶ್ನಿಸಿರುವ ಓವೈಸಿ, ಇದು ಕೇವಲ ಮುಸ್ಲಿಮರಲ್ಲಿ ಭಯ ಮತ್ತು ಆತಂಕವನ್ನು ಸೃಷ್ಟಿಸಲು ಮಾಡುತ್ತಿರುವ ರಾಜಕೀಯ ಗಿಮಿಕ್ ಎಂದಿದ್ದಾರೆ.
ಸರ್ಕಾರದ ಇತ್ತೀಚಿನ ಆಡಳಿತಾತ್ಮಕ ವೈಫಲ್ಯಗಳನ್ನು ತರಾಟೆಗೆ ತೆಗೆದುಕೊಂಡ ಓವೈಸಿ, ಈ ಸರ್ಕಾರಕ್ಕೆ ಭಾರತೀಯರನ್ನು ಸದಾ ಯಾವುದಾದರೊಂದು ದಾಖಲೆ, ಕೆವೈಸಿ, ಎಸ್‌ಐಆರ್ ಅಥವಾ ಪೋರ್ಟಲ್‌ಗಳಿಗೆ ಡಾಕ್ಯುಮೆಂಟ್ ಅಪ್‌ಲೋಡ್ ಮಾಡುವ ಕೆಲಸದಲ್ಲಿ ನಿರತರಾಗಿರುವಂತೆ ಮಾಡಿ ಜನರ ಸಮಯ ವ್ಯರ್ಥ ಮಾಡುವುದೆಂದರೆ ಭಾರಿ ಇಷ್ಟ. ಆದರೆ, ದೇಶದ ಯುವಜನತೆಯ ಭವಿಷ್ಯ ನಿರ್ಧರಿಸುವ ಒಂದು ಸರಳವಾದ ನೀಟ್-ಯುಜಿ ೨೦೨೬ ಪರೀಕ್ಷೆಯನ್ನಾಗಲಿ ಅಥವಾ ಸಿಬಿಎಸ್‌ಇ ಒಎಸ್‌ಎಂ ವ್ಯವಸ್ಥೆಯನ್ನಾಗಲಿ ಸರಿಯಾಗಿ ನಡೆಸಲು ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ ಎಂದು ಚಾಟಿ ಬೀಸಿದ್ದಾರೆ. ಸಾಮಾನ್ಯ ಜನರನ್ನು ಸರ್ಕಾರ ತನಿಖೆ ಮಾಡುತ್ತದೆ, ಆದರೆ ಜನಸಾಮಾನ್ಯರು ಮಾತ್ರ ಸರ್ಕಾರವನ್ನು ಪ್ರಶ್ನಿಸುವಂತಿಲ್ಲ ಎಂದು ಕಿಡಿಕಾರಿದ್ದಾರೆ.

ಚುನಾವಣಾ ಆಯೋಗದ ಹಂತ-3 ರ ಭಾರಿ ರಣತಂತ್ರ!

ಮತ್ತೊಂದೆಡೆ, ಭಾರತೀಯ ಚುನಾವಣಾ ಆಯೋಗವು (ECI) ಈಗಾಗಲೇ ದೇಶದ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳ 36 ಕೋಟಿಗೂ ಹೆಚ್ಚು ಮತದಾರರನ್ನು ಒಳಗೊಂಡ ಮೂರನೇ ಹಂತದ ‘ವಿಶೇಷ ತೀವ್ರ ಪರಿಷ್ಕರಣೆ’ ಕಾರ್ಯಾಚರಣೆಯನ್ನು ಪ್ರಕಟಿಸಿದೆ. ಜನಗಣತಿಯ ಮನೆ-ಪಟ್ಟಿ ಪ್ರಕ್ರಿಯೆಯೊಂದಿಗೆ ಸಮನ್ವಯ ಸಾಧಿಸಿ ಈ ಕಾರ್ಯಾಚರಣೆ ನಡೆಯುತ್ತಿದೆ.
ತೆಲಂಗಾಣ ಮತ್ತು ಪಂಜಾಬ್ ರಾಜ್ಯಗಳಿಗೆ ಅರ್ಹತಾ ದಿನಾಂಕವನ್ನು 2026ರ ಅಕ್ಟೋಬರ್ 1ರಂದು ನಿಗದಿಪಡಿಸಲಾಗಿದೆ. ಇದರ ಸಿದ್ಧತಾ ಹಂತ ಜೂನ್ 15 ರಿಂದ ಜೂನ್ 24 ರವರೆಗೆ ನಡೆಯಲಿದ್ದು, ಜೂನ್ 2Copy ರಿಂದ ಜುಲೈ 24 ರವರೆಗೆ ಬಿಎಲ್‌ಒ (BLO) ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಜುಲೈ 31 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಆಕ್ಷೇಪಣೆಗಳ ಇತ್ಯರ್ಥದ ಬಳಿಕ ಅಕ್ಟೋಬರ್ 1 ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಲಿದೆ ಎಂದು ಆಯೋಗ ತಿಳಿಸಿದೆ.
ಚುನಾವಣಾ ಆಯೋಗವು ಈ ಪ್ರಕ್ರಿಯೆಯನ್ನು ಕೇವಲ ಮತದಾರರ ಪಟ್ಟಿಯ ಶುದ್ಧೀಕರಣ ಎಂದು ಕರೆಯುತ್ತಿದ್ದರೆ, ಓವೈಸಿ ಅವರ ಈ ಭೀಕರ ಹೇಳಿಕೆಯು ಮುಂಬರುವ ದಿನಗಳಲ್ಲಿ ದೇಶಾದ್ಯಂತ ಮತ್ತೊಂದು ದೊಡ್ಡ ರಾಜಕೀಯ ಬಿರುಗಾಳಿಗೆ ಮುನ್ನುಡಿ ಬರೆದಿದೆ,(ಏಜೆನ್ಸೀಸ್).