ನವದೆಹಲಿ: ಜಗತ್ತಿನ ಪ್ರಮುಖ ವಿಮಾನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಏರ್ಬಸ್ನ(Airbus) ಎ320 ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿರುವ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಸುಮಾರು 6000 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ವಿಮಾನ ಸೇವೆಯ ಮೇಲೆ ಪರಿಣಾಮ ಬೀರಿದೆ.
ವಿಮಾನದ ಸಾಫ್ಟ್ವೇರ್ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಸಾಫ್ಟ್ವೇರ್ ಅಪ್ಡೇಟ್ ಮಾಡಲು ಮತ್ತು ಕೆಲವೊಂದು ಅಗತ್ಯ ಉಪಕರಣಗಳನ್ನು ಬದಲಿಸಲು ಸೂಚಿಸಲಾಗಿದೆ. ವಿಮಾನಯಾನ ಸಂಸ್ಥೆಗಳು ತಮ್ಮಲ್ಲಿರುವ ಏರ್ಬಸ್ನ ಎ 320 ವರ್ಗದ ವಿಮಾನಗಳಲ್ಲಿ ಸಾಫ್ಟ್ವೇರ್ ಅಪ್ಡೇಟ್ ಮಾಡುತ್ತಿವೆ.
ಭಾರತದ ಮೇಲೆ ಏನು ಪರಿಣಾಮ?
ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಬಳಿ ಸುಮಾರು 370 ಏರ್ಬಸ್ ಎ320 ವಿಮಾನಗಳಿವೆ, ಏರ್ ಇಂಡಿಯಾ ಬಳಿ 127, ಏರ್ ಇಂಡಿಯಾ ಎಕ್ಸ್ಪ್ರೆಸ್ ಬಳಿ 40 ವಿಮಾನಗಳಿವೆ. ಈ ವಿಮಾನಗಳಲ್ಲಿರುವ ದೋಷಪೂರಿತ ಸಾಫ್ಟ್ವೇರ್ ಬದಲಿಸುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಸೂಚಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ ಸಾಫ್ಟ್ವೇರ್ ಸಮಸ್ಯೆ ಇದ್ದ ಶೇ. 40 ಕ್ಕಿಂತ ಹೆಚ್ಚು ವಿಮಾನಗಳಲ್ಲಿ ಸಾಫ್ಟ್ವೇರ್ ಅಪ್ಡೇಡ್ ಮಾಡಲಾಗಿದೆ. ಇಎಎಸ್ಎ ವಿಧಿಸಿರುವ ಕಾಲಮಿತಿಯೊಳಗೆ ಉಳಿದ ವಿಮಾನಗಳ ಸಾಫ್ಟ್ವೇರ್ ಅಪ್ಡೇಟ್ ಮಾಡಲಾಗುವುದು ಎಂದು ತಿಳಿಸಿದೆ.
ಜಗತ್ತಿನಾದ್ಯಂತ ವಿಮಾನ ಸೇವೆ ವ್ಯತ್ಯಯ
ಏರ್ಬಸ್ನ 55 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ. ವಿಶ್ವದಾದ್ಯಂತ ಒಟ್ಟು ಕಾರ್ಯಾಚರಣೆಯಲ್ಲಿರುವ ಎ320 ವಿಮಾನಗಳಲ್ಲಿ ಅರ್ಧದಷ್ಟು ವಿಮಾನಗಳು ಸಾಫ್ಟ್ವೇರ್ ಅಪ್ಡೇಟ್ಗೆ ಒಳಗಾಗುತ್ತಿವೆ. ಸಾವಿರಾರು ವಿಮಾನಗಳ ಹಾರಾಟ ರದ್ದುಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಗಿದೆ. ಮುಂದಿನ 2&3 ದಿನದಲ್ಲಿ ವಿಮಾನಗಳ ಸಾಫ್ಟ್ವೇರ್ ಅಪ್ಡೇಟ್ ಮುಕ್ತಾಯವಾಗುವ ನಿರೀಕ್ಷೆ ಇದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
ತಾಂತ್ರಿಕ ಸಮಸ್ಯೆ ಯಾವುದು?
ಕಳೆದ ತಿಂಗಳು ಮೆಕ್ಸಿಕೋದ ಕ್ಯಾನ್ಕಸ್ನಿಂದ ಅಮೆರಿಕದ ನ್ಯೂಜೆರ್ಸಿಯಲ್ಲಿರುವ ನ್ಯೂವಾರ್ಕ್ ಗೆ ಪ್ರಯಾಣಿಸುತ್ತಿದ್ದ 320 ವಿಮಾನ 35000 ಅಡಿ ಎತ್ತರದಲ್ಲಿ ಚಲಿಸುತ್ತಿತ್ತು. ಈ ವೇಳೆ ಪೈಲಟ್ ಸೂಚನೆ ಇಲ್ಲದೆ ವಿಮಾನ ಕೆಳಮುಖವಾಗಿ ಸಂಚರಿಸಲು ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಪೈಲಟ್ಗಳು ವಿಮಾನವನ್ನು ಸುರತವಾಗಿ ಪ್ಲೋರಿಡಾದ ಟ್ಯಾಂಪಾ ವಿಮಾನನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದರು. ಈ ಘಟನೆಯ ತನಿಖೆ ವೇಳೆ ಪೈಲಟ್ ನೀಡುವ ಆಜ್ಞೆಗಳನ್ನು ರೆಕ್ಕೆಗಳು ಮತ್ತು ಬಾಲಕ್ಕೆ ತಲುಪಿಸುವ ಪ್ರಮುಖ ವ್ಯವಸ್ಥೆಯಾದ ವಿಮಾನದ ಎಲಿವೇಟರ್ ಮತ್ತು ಐಲೆರಾನ್ ಕಂಪ್ಯೂಟರ್ (ಇಎಲ್ಎಸಿ)ನಲ್ಲಿ ದೋಷ ಕಂಡುಬಂದಿತ್ತು. ತೀವ್ರವಾದ ವಿಕಿರಣಶೀಲ ಬೆಳಕಿನಿಂದಾಗಿ ಇಎಲ್ಎಸಿಯ ಸಾಫ್ಟ್ವೇರ್ನಲ್ಲಿ ದೋಷ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಯುರೋಪಿಯನ್ ಒಕ್ಕೂಟದ ವಾಯುಯಾನ ಸುರಕ್ಷತಾ ಸಂಸ್ಥೆ (ಇಎಎಸ್ಎ) ವಿಮಾನಗಳ ಸಾಫ್ಟ್ವೇರ್ ಅಪ್ಡೇಟ್ ಮಾಡುವಂತೆ ಸೂಚಿಸಿತ್ತು ಎಂದು ದೋಷಪೂರಿತ ಕಂಪ್ಯೂಟರ್ ಅನ್ನು ಬದಲಿಸಿ ಇಎಲ್ಎಸಿ ಎಲ್103 ಅನ್ನು ಅಳವಡಿಸಬೇಕು ಎಂದು ತಿಳಿಸಿದೆ.