West Bengal SIR 
ದೇಶ

West Bengal SIR | ಬಂಗಾಳದ ಕರಡು ಮತದಾರರ ಪಟ್ಟಿ ಪ್ರಕಟ; 58.8 ಲಕ್ಷ ಜನರ ಹೆಸರು ಡಿಲೀಟ್​

ಕೊಲ್ಕತ್ತಾ: ಕಳೆದ ಒಂದು ತಿಂಗಳಿನಿಂದ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಕರಡು ಮತದಾರರ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಹೆಸರು ಅಳಿಸಲು ಪ್ರಸ್ತಾಪಿಸಲಾದ ಮತದಾರರ ಪಟ್ಟಿಯೂ ಸೇರಿದೆ.
ವಿಶೇಷ ತೀವ್ರ ಪರಿಷ್ಕರಣೆಯ ಬಳಿಕ ಸುಮಾರು 58.8 ಲಕ್ಷ ಮತದಾರರನ್ನು ರಾಜ್ಯ ಮತದಾರರ ಪಟ್ಟಿಯಿಂದ ತೆಗೆದುಹಾಕುವ ಸಾಧ್ಯತೆಯಿದೆ ಎಂದು ಮೂಲಗಳು ಈ ಹಿಂದೆಯೇ ಮಾಹಿತಿ ನೀಡಿದ್ದವು. ಈ 58 ಲಕ್ಷ ಹೆಸರುಗಳಲ್ಲಿ 24 ಲಕ್ಷ ಮೃತರು, 19 ಲಕ್ಷ ವಿಳಾಸ ಬದಲಿಸಿದವರು, 12 ಲಕ್ಷ ಕಾಣೆಯಾದವರು (ಬೂತ್ ಮಟ್ಟದ ಅಧಿಕಾರಿಯೊಬ್ಬರು ಮತದಾರರ ನಿವಾಸಕ್ಕೆ 3 ಅಥವಾ ಅದಕ್ಕಿಂತ ಹೆಚ್ಚು ಬಾರಿ ಭೇಟಿ ನೀಡಿ ವ್ಯಕ್ತಿಯನ್ನು ಪತ್ತೆ ಮಾಡಲು ಸಾಧ್ಯವಾಗದಿದ್ದರೆ, ಆ ಹೆಸರನ್ನು ಕಾಣೆಯಾದ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ) ಮತ್ತು 1.3 ಲಕ್ಷ ಹೆಸರುಗಳನ್ನು ನಕಲಿ ಎಂದು ಹೇಳಲಾಗುತ್ತಿದೆ.

24 ಲಕ್ಷ ಮೃತರು..

  • ಚುನಾವಣಾ ಆಯೋಗದ ಮೂಲಗಳ ಪ್ರಕಾರ, ರಾಜ್ಯದಲ್ಲಿ ಮೃತ ಮತದಾರರ ಸಂಖ್ಯೆ ಈಗ 24,18,699. ಇದಲ್ಲದೆ, 12,01,462 ಜನರು ಪತ್ತೆಯಾಗಿಲ್ಲ. ಬೂತ್ ಮಟ್ಟದ ಅಧಿಕಾರಿಗಳು ಪತ್ತೆ ಮಾಡುವ ನಿಟ್ಟಿನಲ್ಲಿ ಮೂರ್ನಾಲ್ಕು ಬಾರಿ ಅವರ ಮನೆಗೆ ಭೇಟಿ ನೀಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಅಂತಹ ಮತದಾರರನ್ನು ಕಾಣೆಯಾದವರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.
  • ರಾಜ್ಯದ 19,93,087 ಮತದಾರರು ತಮ್ಮ ವಿಳಾಸವನ್ನು ಬದಲಾಯಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಹೆಸರುಗಳು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಕಾಣಿಸಿಕೊಂಡಿವೆ, ಆದ್ದರಿಂದ ಅವರ ಹೆಸರುಗಳನ್ನು ಒಂದು ಕಡೆಯಿಂದ ತೆಗೆದುಹಾಕಿ ಸರಿಯಾದ ಸ್ಥಳದಲ್ಲಿ ಉಳಿಸಿಕೊಳ್ಳಲಾಗುತ್ತದೆ.
  • ಚುನಾವಣಾ ಆಯೋಗವು 1,37,575 ಮತದಾರರನ್ನು ನಕಲಿ ಎಂದು ಗುರುತಿಸಿದೆ, ಆದ್ದರಿಂದ ಅವರ ಹೆಸರುಗಳು ಕೂಡ ಕರಡು ಪಟ್ಟಿಯಲ್ಲಿ ಇರುವುದಿಲ್ಲ. 57,509 ಜನರನ್ನು ಇನ್ನೊಂದು ವರ್ಗದಲ್ಲಿ ಇರಿಸಲಾಗಿದ್ದು, ಅವರನ್ನೂ ಸಹ ಹೊರಗಿಡಲಾಗುತ್ತದೆ ಎಂದು ತಿಳಿದುಬಂದಿದೆ.

ಪಶ್ಚಿಮ ಬಂಗಾಳದಲ್ಲಿ ಎಸ್​​ಐಆರ್​​

ಪಶ್ಚಿಮ ಬಂಗಾಳದಲ್ಲಿ ಕರಡು ಮತದಾರರ ಪಟ್ಟಿಯನ್ನು ಡಿಸೆಂಬರ್ 16 ರಂದು ಪ್ರಕಟಿಸಲಿದ್ದು, ಆ ಪಟ್ಟಿಯ ಕುರಿತಾಗಿ ಯಾವುದೇ ರೀತಿಯ ದೂರುಗಳು ಅಥವಾ ದೋಷಗಳಿದ್ದರೆ ಅವುಗಳನ್ನು ಆಯೋಗಕ್ಕೆ ವರದಿ ಮಾಡಬಹುದು. ಈ ವರದಿಗಳ ಆಧಾರದ ಮೇಲೆ ವಿಚಾರಣೆಗಳನ್ನು ನಡೆಸಲಾಗುತ್ತದೆ. ಎಲ್ಲಾ ಪುರಾವೆಗಳನ್ನು ಪರಿಶೀಲಿಸಿದ ಬಳಿಕವೇ, ಆಯೋಗ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ರಾಜ್ಯದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ನವೆಂಬರ್ 4 ರಂದು ಎಣಿಕೆ ನಮೂನೆಗಳ ವಿತರಣೆಯೊಂದಿಗೆ ಪ್ರಾರಂಭವಾಯಿತು, ಇದು ಡಿಸೆಂಬರ್ 11 ರಂದು ಕೊನೆಗೊಂಡಿದೆ. ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 14, 2026 ರಂದು ಬಿಡುಗಡೆ ಮಾಡಲಾಗುತ್ತದೆ.

ಬಂಗಾಳ SIR ಬಗ್ಗೆ ಮಮತಾ ಬ್ಯಾನರ್ಜಿ vs ಚುನಾವಣಾ ಆಯೋಗ

ಮತದಾರರ ಪಟ್ಟಿ ಪರಿಷ್ಕರಣೆಯ ವಿವಾದದ ಕುರಿತಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಂತರವಾಗಿ ಚುನಾವಣಾ ಆಯೋಗವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರುಗಳು, ಬ್ಯಾನರ್ಜಿ ಎಸ್​​ಐಆರ್​ ವಿರುದ್ಧವಾಗಿ ನೀಡಿದ ಹೇಳಿಕೆಗಳಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುವ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಅವ್ಯವಸ್ಥೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ(ಏಜೆನ್ಸೀಸ್​).