ದೇಶದ 58 ಇಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ
- ದೇಶಾದ್ಯಂತ 58 ಇಂಜಿನಿಯರಿಂಗ್ ಕಾಲೇಜುಗಳು ಬಂದ್
- ಒಟ್ಟು 58 ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳನ್ನು ಮುಚ್ಚಲು ಆದೇಶ
ನವದೆಹಲಿ: ದೇಶವ್ಯಾಪಿ ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ನಿಯಂತ್ರಿಸುವ ‘ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ’ (AICTE), 2025–26ರ ಶೈಕ್ಷಣಿಕ ವರ್ಷದಲ್ಲಿ ಒಟ್ಟು 58 ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜುಗಳನ್ನು ಮುಚ್ಚಲು ಆದೇಶಿಸಿದೆ ಎಂಬ ಅಚ್ಚರಿ ವರದಿಯೊಂದು ಹೊರಬಿದ್ದಿದೆ.
ಈಗಾಗಲೇ ಈ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಮಂಡಳಿ ಮುಂಜಾಗ್ರತಾ ಕ್ರಮವಾಗಿ ಸ್ಪಷ್ಟಪಡಿಸಿದೆ. ಆದೇಶಕ್ಕೆ ಒಳಪಟ್ಟಿರುವ ಕಾಲೇಜುಗಳು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮೊದಲ ವರ್ಷದ ಕೋರ್ಸ್‌ಗಳಿಗೆ ಹೊಸದಾಗಿ ಯಾವುದೇ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಂತಿಲ್ಲ. ಈಗಾಗಲೇ ವ್ಯಾಸಂಗ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಪೂರ್ಣಗೊಳಿಸಲು ಮುಕ್ತ ಅವಕಾಶ ನೀಡಲಾಗಿದೆ.
ಹಂತ ಹಂತವಾಗಿ ಮುಚ್ಚುವಿಕೆ
ಈ ಬಾರಿ ಮುಚ್ಚಲ್ಪಟ್ಟಿರುವ 58 ಕಾಲೇಜುಗಳಿಗೆ AICTE ಹಂತ ಹಂತವಾಗಿ ಮುಚ್ಚುವಿಕೆಗೆ ಅನುಮತಿಯನ್ನು ನೀಡಿದೆ. ಮುಚ್ಚಲಾದ ಈ 58 ಸಂಸ್ಥೆಗಳಲ್ಲಿ ಕೇವಲ 3 ಮಾತ್ರ ಸರ್ಕಾರಿ ಅನುದಾನಿತ ಕಾಲೇಜುಗಳಾಗಿದ್ದು, ಇನ್ನುಳಿದ 55 ಖಾಸಗಿ ಅನುದಾನರಹಿತ ಸಂಸ್ಥೆಗಳಾಗಿವೆ. ಇದಲ್ಲದೆ, ದೇಶಾದ್ಯಂತ ವಿವಿಧ ಕಾಲೇಜುಗಳಲ್ಲಿ ನಡೆಯುತ್ತಿದ್ದ ಸುಮಾರು 950ಕ್ಕೂ ಹೆಚ್ಚು ತಾಂತ್ರಿಕ ಕೋರ್ಸ್‌ಗಳನ್ನು ಸಹ ಈ ಅವಧಿಯಲ್ಲಿ ಕ್ಲೋಸ್ ಮಾಡಲಾಗಿದೆ.
ಯಾವ ರಾಜ್ಯದಲ್ಲಿ ಅತಿಹೆಚ್ಚು?
ಪ್ರಸ್ತುತ ಮುಚ್ಚಲ್ಪಟ್ಟಿರುವ ಒಟ್ಟು 58 ಕಾಲೇಜುಗಳ ಸಂಸ್ಥೆಗಳಲ್ಲಿ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿವೆ. ಯುಪಿ, ಮಹಾರಾಷ್ಟ್ರ ತಲಾ 12, ಮಧ್ಯಪ್ರದೇಶ 08, ತೆಲಂಗಾಣ, ಪಂಜಾಬ್ ತಲಾ 04, ಆಂಧ್ರಪ್ರದೇಶ, ರಾಜಸ್ಥಾನ ತಲಾ 03, ಪುದುಚೇರಿ 01, ಕರ್ನಾಟಕ, ಗುಜರಾತ್, ತಮಿಳುನಾಡು, ಹರಿಯಾಣ, ಒಡಿಶಾ, ಉತ್ತರಾಖಂಡ, ಪಶ್ಚಿಮ ಬಂಗಾಳದಲ್ಲಿ ತಲಾ 02 ಕಾಲೇಜುಗಳು ಬಂದ್ ಆಗಿವೆ.
ಎರಡು ರೀತಿ ಮುಚ್ಚಲು ಆದೇಶ!
ನಿಯಮಗಳ ಪ್ರಕಾರ, AICTE ಎರಡು ರೀತಿಯಲ್ಲಿ ಕಾಲೇಜುಗಳನ್ನು ಮುಚ್ಚಲು ಆದೇಶಿಸಿದೆ. ಒಂದು ಹಂತ ಹಂತವಾಗಿ ಮುಚ್ಚುವುದು, ಮತ್ತೊಂದು ಸಂಪೂರ್ಣವಾಗಿ ಬಂದ್ ಮಾಡುವುದು. ಎರಡನೇ ಆದೇಶಕ್ಕೆ ಒಳಪಟ್ಟಿರುವ ಕಾಲೇಜಿನ ವಿದ್ಯಾರ್ಥಿಗಳನ್ನು ಇತರೆ ಕಾಲೇಜುಗಳಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.
ಕಾಲೇಜುಗಳನ್ನು ಮುಚ್ಚಲು ಕಾರಣಗಳೇನು?
- ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಅತ್ಯಂತ ಕಡಿಮೆ
- ನಿಯಮಾವಳಿಗಳ ಪ್ರಕಾರ, ಅಗತ್ಯವಿರುವಷ್ಟು ಸಂಖ್ಯೆಯ ಅರ್ಹ ಉಪನ್ಯಾಸಕರು/ಸಿಬ್ಬಂದಿಯ ಅಲಭ್ಯತೆ
- ಮೂಲಸೌಕರ್ಯಗಳ ಕೊರತೆ ಮತ್ತು AICTE ಸೂಚಿಸಿರುವ ಕಾರ್ಯನಿರ್ವಹಣಾ ನಿಯಮಗಳ ಉಲ್ಲಂಘನೆ