ಸಾಂದರ್ಭಿಕ ಚಿತ್ರ 
ದೇಶ

57,000 ಕೋಟಿ ಬ್ಯಾಂಕ್ ವಂಚನೆ ಪ್ರಕರಣ: ವಾಧ್ವಾನ್ ಸಹೋದರರಿಗೆ ಸುಪ್ರೀಂ ಜಾಮೀನು | Supreme Court

ನವದೆಹಲಿ : ₹57,000 ಕೋಟಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್‌) ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವಾಧವನ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನನ್ನು ಮಂಜೂರು ಮಾಡಿದೆ. ವಿಚಾರಣೆಯೇ ಆರಂಭವಾಗದೆ ದೀರ್ಘಕಾಲ ಅವರನ್ನು ಜೈಲಿನಲ್ಲಿ ಇರಿಸುವುದು ಸ್ವಾತಂತ್ರ್ಯ ಮತ್ತು ತ್ವರಿತ ವಿಚಾರಣೆಗೆ ಸಂಬಂಧಿಸಿದಂತೆ ಇರುವ ಸಂವಿಧಾನಾತ್ಮಕ ಉಲ್ಲಂಘನೆ ಎಂದು ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ನ್ಯಾಯಪೀಠ ಹೇಳಿತು.
ಸಂಬಂಧಿತ ಪ್ರಕರಣಗಳಲ್ಲಿ ಉಳಿದ ಆರೋಪಿಗಳಿಗೆ ಜಾಮೀನು ದೊರೆತಿದ್ದರೂ, ವಾಧ್ವಾನ್‌ ಸಹೋದರರು ಐದು ವರ್ಷಕ್ಕೂ ಹೆಚ್ಚು ಕಾಲದಿಂದ ನ್ಯಾಯಾಂಗ ಬಂಧನದಲ್ಲೇ ಇದ್ದಾರೆ ಎಂದ ನ್ಯಾಯಾಲಯ, ಇಬ್ಬರ ವಿರುದ್ಧದ ತನಿಖೆ ಪೂರ್ಣಗೊಂಡಿರುವುದನ್ನು ಗಣನೆಗೆ ತೆಗೆದುಕೊಂಡಿತು. ನಾಲ್ಕು ಲಕ್ಷ ಪುಟಗಳಷ್ಟು ಸುದೀರ್ಘ ಆರೋಪಪಟ್ಟಿ ಇದ್ದು 736 ಸಾಕ್ಷಿಗಳು, 17 ಟ್ರಂಕ್ ದಾಖಲೆಗಳು ಹಾಗೂ ದೊಡ್ಡ ಪ್ರಮಾಣದ ಡಿಜಿಟಲ್ ಮಾಹಿತಿಯಿದೆ. ನಿತ್ಯ ವಿಚಾರಣೆ ನಡೆಸಿದರೂ ವಿಚಾರಣೆ ಪೂರ್ಣಗೊಳ್ಳಲು 2–3 ವರ್ಷಗಳು ಹಿಡಿಯಬಹುದು ಎಂದು ನ್ಯಾಯಾಲಯ ಹೇಳಿತು.
ಇದು ದೇಶದ ಅತಿದೊಡ್ಡ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಒಂದು ಎಂದು ಬಣ್ಣಿಸಿದ್ದ ಸಿಬಿಐ, 17 ಬ್ಯಾಂಕುಗಳ ಒಕ್ಕೂಟದಿಂದ ಡಿಎಚ್‌ಎಫ್‌ಎಲ್ ಪಡೆದಿದ್ದ ಸಾಲವನ್ನು ಭಾರೀ ಪ್ರಮಾಣದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದಿತ್ತು. ಆದರೆ ಆರ್ಥಿಕ ಅಪರಾಧಗಳು ಗಂಭೀರವಾದರೂ ಜಾಮೀನಿಗೆ ಆದ್ಯತೆಯೇ ವಿನಾ ಸೆರೆವಾಸಕ್ಕಲ್ಲ ಎಂಬ ತತ್ವ ಅನ್ವಯಿಸಬೇಕಿದೆ ಎಂದ ನ್ಯಾಯಾಲಯ ಷರತ್ತುಬದ್ಧ ಜಾಮೀನನ್ನು ನೀಡಿದೆ.
ಆರೋಪಿಗಳು ಶ್ಯೂರಿಟಿ ಬಾಂಡ್‌ಗಳನ್ನು ಪಾಸ್‌ಪೋರ್ಟ್‌ಗಳನ್ನು ಸಲ್ಲಿಸಬೇಕು. ಪೊಲೀಸರೆದುರು ನಿಯಮಿತವಾಗಿ ಹಾಜರಾಗಬೇಕು ಹಾಗೂ ವಿದೇಶ ಪ್ರವಾಸಕ್ಕೆ ಮುನ್ನ ಅನುಮತಿ ಪಡೆಯಬೇಕು ಎಂದು ತಾಕೀತು ಮಾಡಿ, ಷರತ್ತು ಉಲ್ಲಂಘನೆಯಾದರೆ ಜಾಮೀನು ರದ್ದುಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದೆ. ವಾಧ್ವಾನ್‌ ಸಹೋದರರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಮುಕುಲ್‌ ರೋಹಟ್ಗಿ, ಬಲ್ಬೀರ್‌ ಸಿಂಗ್‌, ಹಾಗೂ ಅರವಿಂದ್‌ ನಾಯರ್‌ ವಾದ ಮಂಡಿಸಿದರೆ, ಪ್ರಾಸಿಕ್ಯೂಷನ್‌ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ಮತ್ತವರ ಕಾನೂನು ತಂಡ ವಾದ ಮಂಡಿಸಿತು.

₹57,000 ಕೋಟಿ ಬ್ಯಾಂಕ್ ವಂಚನೆ ಪ್ರಕರಣ

17 ಬ್ಯಾಂಕ್‌ಗಳ ಒಕ್ಕೂಟದಿಂದ ಸುಮಾರು ₹57,252 ಕೋಟಿ ಮೊತ್ತದ ಸಾಲವನ್ನು DHFL ಪಡೆದಿದ್ದು, ಅದರಲ್ಲಿ ವಾಧ್ವಾನ್‌ಗಳಿಗೆ ಸಂಬಂಧಿಸಿದ ಶೆಲ್ ಕಂಪನಿಗಳ ಮೂಲಕ ₹34,926 ಕೋಟಿ ವಂಚನೆ ಮಾಡಲಾಗಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಆರೋಪಿಸಿದೆ. ಸರ್ಕಾರಿ ಸಂಸ್ಥೆಯು ಪ್ರವರ್ತಕರ ಮೇಲೆ ಕ್ರಿಮಿನಲ್ ಪಿತೂರಿ, ವಂಚನೆ, ಕ್ರಿಮಿನಲ್ ನಂಬಿಕೆ ದ್ರೋಹ, ಖಾತೆಗಳ ಸುಳ್ಳು ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ವಿಧಿಸಿದೆ. ಆರೋಪಿಗಳನ್ನು 2020 ರಲ್ಲಿ ಬಂಧಿಸಲಾಗಿದ್ದು, ಅಕ್ಟೋಬರ್ 2022 ರಲ್ಲಿ ಮೊದಲ ಆರೋಪಪಟ್ಟಿಯನ್ನು ಸಲ್ಲಿಸಲಾಗಿತ್ತು. ಸಿಬಿಐ 70 ಕಂಪನಿಗಳು ಮತ್ತು 40 ವ್ಯಕ್ತಿಗಳು ಸೇರಿದಂತೆ ಒಟ್ಟು 110 ಆರೋಪಿಗಳ ಹೆಸರುಗಳನ್ನು ಆರೋಪಪಟ್ಟಿಯಲ್ಲಿ ಸಲ್ಲಿಸಿದೆ ಎಂದು ವರದಿಯಾಗಿದೆ. (ಏಜನ್ಸೀಸ್).