Riju Dutta | ಸಿಎಂ ಕುರ್ಚಿಗೆ ದಾದಾಗಿಂತ ಅರ್ಹರು ಮತ್ತೊಬ್ಬರಿಲ್ಲ ಎಂದ ಟಿಎಂಸಿ ವಕ್ತಾರ!  
ದೇಶ

ಸುವೇಂದು ಸಂಯಮದಿಂದಾಗಿ ತಪ್ಪಿತು ರಕ್ತಪಾತ! ಸಿಎಂ ಕುರ್ಚಿಗೆ ದಾದಾಗಿಂತ ಅರ್ಹರು ಮತ್ತೊಬ್ಬರಿಲ್ಲ ಎಂದ ಟಿಎಂಸಿ ವಕ್ತಾರ! | Riju Dutta

ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶಗಳು ಪ್ರಕಟವಾದ ಬಳಿಕ ನಡೆದ ಹಿಂಸಾಚಾರವನ್ನು ತಡೆಯುವಲ್ಲಿ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಪಾತ್ರ ದೊಡ್ಡದಿದೆ ಎಂದು ಅಮಾನತುಗೊಂಡ ಟಿಎಂಸಿ ವಕ್ತಾರ ರಿಜು ದತ್ತಾ ಶ್ಲಾಘಿಸಿದ್ದಾರೆ.
ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆಪ್ತ ಸಹಾಯಕನ ಹತ್ಯೆಯ ಬಳಿಕ ನಡೆಯಬಹುದಾಗಿದ್ದ ದೊಡ್ಡ ಪ್ರಮಾಣದ ಹಿಂಸಾಚಾರವನ್ನು ಅಧಿಕಾರಿ ಅವರೇ ತಡೆದಿದ್ದಾರೆ ಎಂದು ದತ್ತಾ ಹೇಳಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ದತ್ತಾ, ಸುವೇಂದು ಅಧಿಕಾರಿ ಕನಿಷ್ಠ 5,000 ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಜೀವಗಳನ್ನು ಉಳಿಸಿದ್ದಾರೆ, ಮೇ 6 ರಂದು ಅವರ ಪಿಎ ಮೇಲೆ ಗುಂಡು ಹಾರಿಸಲಾಯಿತು. ಆ ರಾತ್ರಿ ಅವರು ಸೇಡು ತೀರಿಸಿಕೊಳ್ಳಲು ಕರೆ ನೀಡಿದ್ದರೆ, 5,000 ಟಿಎಂಸಿ ಕಾರ್ಯಕರ್ತರು ಹತ್ಯೆಯಾಗುತ್ತಿದ್ದರು. ಆದರೆ ಅವರು ಶಾಂತಿ ಕಾಪಾಡಲು ಮತ್ತು ಕಾನೂನನ್ನು ಕೈಗೆ ತೆಗೆದುಕೊಳ್ಳದಂತೆ ಮನವಿ ಮಾಡಿದರು ಎಂದು ದತ್ತಾ ತಿಳಿಸಿದ್ದಾರೆ.

ಸಿಎಂ ಆಗಲು ಅವರು ಅರ್ಹರು!...

ಸುವೇಂದು ಅಧಿಕಾರಿ ನಡೆದುಕೊಂಡ ಬಂದಿರುವ ರಾಜಕೀಯ ಹಾದಿಯನ್ನು ಅಸಾಧಾರಣ ಎಂದು ಬಣ್ಣಿಸಿರುವ ದತ್ತಾ, ಮಮತಾ ಬ್ಯಾನರ್ಜಿ ಬಳಿಕ ಬಂಗಾಳದ ಮುಖ್ಯಮಂತ್ರಿಯಾಗಲು ಅವರು ಅರ್ಹ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಟಾಪ್ 10 ರಾಜಕಾರಣಿಗಳ ಪಟ್ಟಿಯಲ್ಲಿ ಮಮತಾ ಬ್ಯಾನರ್ಜಿ ಹೆಸರು ಇರುತ್ತದೆ ನಿಜ, ಆದರೆ ಸುವೇಂದು ಅಧಿಕಾರಿಯವರ ಸಾಧನೆ ವಿಭಿನ್ನವಾಗಿದೆ. ಅವರು ಸಂಸದರಾಗಿದ್ದಾರೆ, ಸಚಿವರಾಗಿದ್ದಾರೆ ಮತ್ತು ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಯನ್ನು ಸೋಲಿಸಿದ್ದಾರೆ. ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವರಿಗಿಂತ ಮತ್ತೊಂದು ಆಯ್ಕೆ ಹುಡುಕಲು ಸಾಧ್ಯವಿಲ್ಲ ಎಂದಿದ್ದಾರೆ.
ಪಕ್ಷದ ಶಿಸ್ತು ಸಮಿತಿಯ ನಿಯಮ ಉಲ್ಲಂಘನೆಯ ಆರೋಪದ ಮೇಲೆ ಆರು ವರ್ಷಗಳ ಕಾಲ ಅಮಾನತುಗೊಂಡಿರುವ ದತ್ತಾ, ಟಿಎಂಸಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಹೊರಗಿನ ಸಂಸ್ಥೆಯಾದ ಐ-ಪಿಎಸಿ (I-PAC) ಇಡೀ ಪಕ್ಷವನ್ನು ಹೇಗೆ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು ಎಂಬ ಬಗ್ಗೆ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಉತ್ತರ ನೀಡಬೇಕು ಎಂದು ದತ್ತಾ ಆಗ್ರಹಿಸಿದ್ದಾರೆ.
ಚುನಾವಣಾ ಹಿನ್ನಡೆಯ ಬಳಿಕ ಟಿಎಂಸಿಯ ಹಲವು ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಮಾಜಿ ಸಚಿವ ಮನೋಜ್ ತಿವಾರಿ ಅವರು ಸಚಿವ ಅರೂಪ್ ಬಿಸ್ವಾಸ್​ರನ್ನು ಟೀಕಿಸಿದ್ದಾರೆ. ಈ ಭ್ರಷ್ಟ ಸರ್ಕಾರವು ಜನರಿಂದ ಸರಿಯಾದ ಚಿಕಿತ್ಸೆಯನ್ನೆ ಪಡೆಯಿತು ಎಂದು ತಮ್ಮ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಹಿರಿಯ ನಾಯಕರಾದ ಕೃಷ್ಣೇಂದು ನಾರಾಯಣ್ ಚೌಧರಿ ಮತ್ತು ಅತಿನ್ ಘೋಷ್ ಅಭಿಷೇಕ್ ಬ್ಯಾನರ್ಜಿ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದು, ಪಕ್ಷದ ಪತನಕ್ಕೆ ಅವರೇ ನೇರ ಕಾರಣ ಎಂದು ಆರೋಪಿಸಿದ್ದಾರೆ(ಏಜೆನ್ಸೀಸ್​​).