ಚೆನ್ನೈ: ಇತ್ತೀಚೆಗಷ್ಟೇ ನಾರ್ವೆ ಚೆಸ್ ಟೂರ್ನಿಯಲ್ಲಿ ಐತಿಹಾಸಿಕ ಪ್ರಶಸ್ತಿ ಗೆದ್ದು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ ತಮಿಳುನಾಡಿನ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರಿಗೆ ತಮಿಳುನಾಡು ಸರ್ಕಾರ ಭರ್ಜರಿ ಗೌರವ ನೀಡಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್(CM Vijay) ಅವರು ಸೋಮವಾರ ಚೆನ್ನೈನಲ್ಲಿ ಪ್ರಜ್ಞಾನಂದ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದಲ್ಲದೆ, ತಮಿಳುನಾಡು ಸರ್ಕಾರದ ಪರವಾಗಿ ಬರೊಬ್ಬರಿ 50 ಲಕ್ಷ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.
ಆದರೆ, ಈ ಭೇಟಿಯ ವೇಳೆ ಎಲ್ಲರ ಗಮನ ಸೆಳೆದಿದ್ದು ಸಿಎಂ ವಿಜಯ್ ಹಾಗೂ ಪ್ರಜ್ಞಾನಂದ ನಡುವೆ ನಡೆದ ದಿಢೀರ್ ಚೆಸ್ ಪಂದ್ಯ! ಸಿಎಂ ಅವರ ಚೆಸ್ ಆಟದ ಕೌಶಲ್ಯ ಕಂಡು ಖುದ್ದು ಚಾಂಪಿಯನ್ ಪ್ರಜ್ಞಾನಂದ ಅವರೇ ಆಶ್ಚರ್ಯಚಕಿತರಾಗಿದ್ದಾರೆ.
ಸಿಎಂ ಆಟ ಕಂಡು ಪ್ರಜ್ಞಾನಂದ ಶಾಕ್!
ಮುಖ್ಯಮಂತ್ರಿಗಳ ಜೊತೆಗಿನ ಭೇಟಿಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ 20 ವರ್ಷದ ಪ್ರಜ್ಞಾನಂದ, "ಸಿಎಂ ವಿಜಯ್ ಅವರು ಇಷ್ಟು ಚೆನ್ನಾಗಿ ಚೆಸ್ ಆಡುತ್ತಾರೆ ಎಂದು ನಾನು ನಿಜಕ್ಕೂ ಅಂದುಕೊಂಡಿರಲಿಲ್ಲ. ಅವರಲ್ಲಿ ಚೆಸ್ ಆಡುವ ಕೌಶಲ್ಯ ಇದೆ ಎಂದು ನನಗೆ ಯಾರೂ ಹೇಳಿರಲಿಲ್ಲ. ಅವರೇ ನನ್ನ ಬಳಿ ಚೆಸ್ ಬೋರ್ಡ್ ತರಲು ಹೇಳಿದರು. ನಾವಿಬ್ಬರೂ ಕಾಯಿಗಳನ್ನು ಜೋಡಿಸಿ ಆಟ ಶುರು ಮಾಡಿದೆವು. ಅವರು ನಿಜವಾಗಿಯೂ ಅದ್ಭುತವಾಗಿ ಆಡಿದರು," ಎಂದು ಖುಷಿ ಹಂಚಿಕೊಂಡಿದ್ದಾರೆ.
"ನೀವು ಯಾವಾಗ ಚೆಸ್ ಆಡುತ್ತೀರಿ ಎಂದು ನಾನು ಸಿಎಂ ಅವರನ್ನು ಕೇಳಿದೆ. ಅದಕ್ಕೆ ಅವರು ತಾವು ಬಿಡುವಿನ ವೇಳೆಯಲ್ಲಿ ಸ್ನೇಹಿತರ ಜೊತೆ ಚೆಸ್ ಆಡುವುದಾಗಿ ಹೇಳಿದರು. ಪಂದ್ಯದಲ್ಲಿ ನಾನೇ ಗೆದ್ದೆ, ಆದರೆ ಅವರು ಅಷ್ಟು ಕಠಿಣ ಪೈಪೋಟಿ ನೀಡುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ," ಎಂದು ಪ್ರಜ್ಞಾನಂದ ತಮಿಳುನಾಡು ಸಿಎಂ ಆಟವನ್ನು ಕೊಂಡಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಜ್ಞಾನಂದ ತಾಯಿ ನಾಗಲಕ್ಷ್ಮಿ ಹಾಗೂ ಕ್ರೀಡಾ ಸಚಿವ ಆಧವ್ ಅರ್ಜುನ ಉಪಸ್ಥಿತರಿದ್ದರು.
ನಾರ್ವೆ ಚೆಸ್‌ನಲ್ಲಿ ಪ್ರಜ್ಞಾನಂದ ಸೃಷ್ಟಿಸಿದ ಪವಾಡ!
ಜೂನ್ 6 ರಂದು ಓಸ್ಲೋದಲ್ಲಿ ಮುಕ್ತಾಯಗೊಂಡ ಪ್ರತಿಷ್ಠಿತ 'ನಾರ್ವೆ ಚೆಸ್ 2026' ಟೂರ್ನಿಯಲ್ಲಿ ಪ್ರಜ್ಞಾನಂದ ಇತಿಹಾಸ ಬರೆದಿದ್ದಾರೆ. ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಆದರೆ, ಈ ಗೆಲುವಿನ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಟೂರ್ನಿಯ ಆರಂಭದಲ್ಲಿ ಸತತ ಸೋಲುಗಳನ್ನು ಕಂಡು ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದರು.
ಟೂರ್ನಿಯ ಲೀಡರ್ ವೆಸ್ಲಿ ಸೋ ಅವರಿಗಿಂತ ಪ್ರಜ್ಞಾನಂದ ಬರೋಬ್ಬರಿ 5.5 ಪಾಯಿಂಟ್‌ಗಳ ಹಿಂದೆ ಬಿದ್ದಿದ್ದರು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಅದ್ಭುತ ಕಂಬ್ಯಾಕ್ ಮಾಡಿದ ಪ್ರಜ್ಞಾನಂದ, ಸತತ 4 ಪಂದ್ಯಗಳನ್ನು ಗೆದ್ದು ಪವಾಡ ಮಾಡಿದರು. ಜಗತ್ತಿನ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಎರಡು ಬಾರಿ ಮಣ್ಣು ಮುಕ್ಕಿಸಿದ ಪ್ರಜ್ಞಾನಂದ, ವಿಶ್ವ ಚಾಂಪಿಯನ್ ಡಿ. ಗುಕೇಶ್ ಮತ್ತು ಅಲಿರೆಜಾ ಫಿರೌಜ್ಜಾ ಅವರಿಗೂ ಶಾಕ್ ನೀಡಿದರು. ಕೊನೆಯ ಸುತ್ತಿನಲ್ಲಿ ವಿನ್ಸೆಂಟ್ ಕೀಮರ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಒಟ್ಟು 18 ಪಾಯಿಂಟ್‌ಗಳೊಂದಿಗೆ ಚಾಂಪಿಯನ್ ಪಟ್ಟಕ್ಕೇರಿದರು.
ಅಕ್ಕ-ತಮ್ಮನ ಇತಿಹಾಸ!
ಈ ವರ್ಷ ಪ್ರಜ್ಞಾನಂದ ಕುಟುಂಬಕ್ಕೆ ಅತ್ಯಂತ ಅದ್ಭುತ ವರ್ಷವಾಗಿದೆ. ಕೇವಲ ಪ್ರಜ್ಞಾನಂದ ಮಾತ್ರವಲ್ಲ, ಅವರ ಅಕ್ಕ ಆರ್. ವೈಶಾಲಿ ಕೂಡ ಇತ್ತೀಚೆಗೆ ಸೈಪ್ರಸ್‌ನಲ್ಲಿ ನಡೆದ ಮಹಿಳಾ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಆ ಮೂಲಕ ಚೀನಾದ ಜು ವೆಂಜುನ್ ವಿರುದ್ಧ ಮಹಿಳಾ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಗಾಗಿ ಹೋರಾಡುವ ಅರ್ಹತೆ ಪಡೆದಿದ್ದಾರೆ. ಸದ್ಯ ತಮಿಳುನಾಡು ಸಿಎಂ ವಿಜಯ್ ಅವರು ಈ ಯುವ ಸಾಧಕನಿಗೆ ನೀಡಿರುವ ಪ್ರೋತ್ಸಾಹ ಕ್ರೀಡಾಲೋಕದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ,(ಏಜೆನ್ಸೀಸ್).