ಕೇವಲ ಮನಮೋಹಕ ನೈಸರ್ಗಿಕ ಸೌಂದರ್ಯ ಅಥವಾ ಪ್ರಸಿದ್ಧ ಪ್ರವಾಸಿ ತಾಣಗಳಷ್ಟೇ ಒಂದು ಪ್ರದೇಶವನ್ನು ಪ್ರತ್ಯೇಕವಾಗಿಸುವುದಿಲ್ಲ. ಕೆಲವೊಮ್ಮೆ ಪುಟಾಣಿ ಮಕ್ಕಳ ಧ್ವನಿಯೂ ಆ ಜಾಗದ ಹಿರಿಮೆಯನ್ನು ಎತ್ತಿಡಿಯಬಲ್ಲದು. ನಾಗಾಲ್ಯಾಂಡ್‌ನ ಐದು ವರ್ಷದ ವಂಗ್ನಾವ್ ಯಾತೋ ಎಂಬ ಪುಟಾಣಿ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಗೀತೆ 'ಜನ ಗಣ ಮನ' ಹಾಡಿದ ಪರಿ ಈಗ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಸೇರಿದಂತೆ ಇಡೀ ದೇಶದ ಗಮನ ಸೆಳೆದಿದೆ.
ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಅಪಾರ ಜನಾಸ್ತೋಮದ ಮುಂದೆ ನಿಂತ 5 ವರ್ಷದ ಬಾಲಕನೊಬ್ಬ ಅತ್ಯಂತ ಆತ್ಮವಿಶ್ವಾಸದಿಂದ ಮಧುರ ಧ್ವನಿಯಲ್ಲಿ ರಾಷ್ಟ್ರಗೀತೆಯನ್ನು ಹಾಡಿದ್ದಾನೆ. ವಯಸ್ಸಿನಲ್ಲಿ ಅತ್ಯಂತ ಚಿಕ್ಕವನಾಗಿದ್ದರೂ, ಯಾವುದೇ ಭಯವಿಲ್ಲದೆ ಸ್ಪಷ್ಟವಾಗಿ ಹಾಗೂ ಭಾವಪೂರ್ಣವಾಗಿ ಆತ ಹಾಡಿದ ಶೈಲಿ ಪ್ರತಿಯೊಬ್ಬರ ಹೃದಯ ತಟ್ಟಿತ್ತು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ವೀಕ್ಷಿಸಿದ ಆನಂದ್ ಮಹೀಂದ್ರಾ, ಬಾಲಕನ ಪ್ರತಿಭೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮ್ಮ ಪ್ರವಾಸದ ಪಟ್ಟಿಯಲ್ಲಿ ನಾಗಾಲ್ಯಾಂಡ್‌ಗೆ ಮೊದಲ ಆದ್ಯತೆ ನೀಡುವುದಾಗಿ ತಮ್ಮ 'X' ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ.
ಆನಂದ್ ಮಹೀಂದ್ರಾ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ. ಬಾಲಕನ ಗಾಯನಕ್ಕೆ ಮನಸೋತ ನೆಟ್ಟಿಗರೊಬ್ಬರು, ಈ ಪುಟಾಣಿಗೆ ರಾಷ್ಟ್ರ ಪ್ರಶಸ್ತಿ ನೀಡಬೇಕು ಮತ್ತು ಈತ ಭಾರತದ ಉಜ್ವಲ ಭವಿಷ್ಯದ ಸಂಕೇತ ಎಂದು ಬಣ್ಣಿಸಿದ್ದರೆ, ಇನ್ನೊಬ್ಬ ಬಳಕೆದಾರ ಮಹೀಂದ್ರಾ ಅವರ ಪ್ರವಾಸದ ಪಟ್ಟಿಗೆ ಸಮ್ಮತಿಸಿ, ನಾಗಾಲ್ಯಾಂಡ್ ಪ್ರತಿಯೊಬ್ಬರೂ ಭೇಟಿ ನೀಡಲೇಬೇಕಾದ ಅತ್ಯದ್ಭುತ ತಾಣ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಸಣ್ಣ ಘಟನೆಯು ನಾಗಾಲ್ಯಾಂಡ್‌ನ ಪ್ರವಾಸೋದ್ಯಮದ ಕುರಿತಾಗಿಯೂ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಈ ರಾಜ್ಯವು ಭಾರತದ ಪ್ರವಾಸೋದ್ಯಮದ ಕಿರೀಟದಲ್ಲಿ ಮತ್ತೊಂದು ಅತ್ಯಮೂಲ್ಯ ರತ್ನವಾಗುವ ಎಲ್ಲ ಅರ್ಹತೆಗಳನ್ನು ಹೊಂದಿದೆ ಎಂದು ಅನೇಕರು ಬಣ್ಣಿಸಿದ್ದಾರೆ (ಏಜೆನ್ಸೀಸ್).