ಅಪಹರಣವಾಗಿದ್ದು ಮಗುವನ್ನು ತಾಯಿಗೆ ಹಸ್ತಾಂತರಿಸಿದ ಸಂದರ್ಭ 
ದೇಶ

5 ವರ್ಷದ ಬಾಲಕಿ ಅಪಹರಣ ಮಾಡಿ 90 ಸಾವಿರ ರೂ. ಮಾರಾಟ ಮಾಡಿದ ಸೋದರ ಮಾವ; ಬಾಲಕಿ ರಕ್ಷಿಸಿದ ಪೊಲೀಸರು | Girl kidnapped

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿ ಅಪಹರಣ(Girl kidnapped) ಮಾಡಿ 90 ಸಾವಿರಕ್ಕೆ ಮಾರಾಟ ಮಾಡಿದ್ದ 5 ವರ್ಷದ ಬಾಲಕಿಯನ್ನು ಮುಂಬೈ ಪೊಲೀಸರು ಪತ್ತೆ ಮಾಡಿ ರಕ್ಷಣೆ ಮಾಡಿ, ಬಾಲಕಿಯನ್ನು ತಾಯಿಯೊಂದಿಗೆ ಸೇರಿಸಿದ್ದಾರೆ. ಕಿಡ್ನಾಪ್ ಮಾಡಿದ ಆರೋಪಿ ಬಾಲಕಿಯ ಸ್ವಂತ ಸೋದರ ಮಾವ ಎಂದು ತಿಳಿದು ಬಂದಿದ್ದು, ಅವನನ್ನು ಸೇರಿ 5 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮುಂಬೈನ ಸಾಂತಾಕ್ರೂಜ್ (ಪೂರ್ವ)ದ ವಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ತಾಯಿ ದೂರಿನನ್ವಯ ಠಾಣೆಯ ಅಧಿಕಾರಿಗಳು ತ್ವರಿತ ತನಿಖೆ ನಡೆಸಿ ಬಾಲಕಿಯನ್ನು ಪನ್ವೇಲ್‌ನಲ್ಲಿ ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಬಳಿಕ ಮಗುವನ್ನು ರಕ್ಷಿಸಿ ನವೆಂಬರ್ 25 ರಂದು ಮುಂಬೈಗೆ ಕರೆತಂದು ತಾಯಿಯೊಂದಿಗೆ ಸೇರಿಸಿದ್ದಾರೆ. ಇನ್ನೂ ಅಪಹರಣ ಮತ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಐವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮುಂಬೈ ಪೊಲೀಸರು, 5 ವರ್ಷದ ಬಾಲಕಿಯ ಅಪಹರಣ ಮತ್ತು ಕಳ್ಳಸಾಗಣೆ ಪ್ರಕರಣದಲ್ಲಿ ವಕೋಲಾ ಠಾಣೆಯ ಪೊಲೀಸರು ಮಗುವನ್ನು ಪನ್ವೇಲ್‌ನಲ್ಲಿ ಪತ್ತೆಹಚ್ಚಿ ಐದು ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ತನಿಖೆಯಿಂದ ಬಾಲಕಿಯ ಮಾವ ಮತ್ತು ಆತನ ಪತ್ನಿ ಮಧ್ಯರಾತ್ರಿ ಅಪಹರಿಸಿ 90,000 ರೂ.ಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಂತರ ಖರೀದಿದಾರ ಮಗುವನ್ನು ಇನ್ನೊಬ್ಬ ವ್ಯಕ್ತಿಗೆ 1,80,000 ರೂ.ಗೆ ಮರುಮಾರಾಟ ಮಾಡಿದ್ದಾನೆ. ತ್ವರಿತವಾಗಿ ಕಾರ್ಯನಿರ್ವಹಿಸಿದ ಬಾಲಕಿಯನ್ನು ಪನ್ವೇಲ್‌ನಿಂದ ರಕ್ಷಿಸಿ ಸುರಕ್ಷಿತವಾಗಿ ಆಕೆಯ ತಾಯಿಯೊಂದಿಗೆ ಸೇರಿಸಿದ್ದಾರೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).