Tamilu Nadu Election | ಐದು ಕೋನಗಳ ಹೈ-ವೋಲ್ಟೇಜ್ ಫೈಟ್‌ನ ಕಂಪ್ಲೀಟ್ ಪಿಕ್ಚರ್ ಇಲ್ಲಿದೆ!
Tamilu Nadu Election: ತಮಿಳುನಾಡು ಇತ್ತೀಚಿನ ದಶಕಗಳಲ್ಲೇ ಅತ್ಯಂತ ಸಂಕೀರ್ಣ ಮತ್ತು ಕುತೂಹಲಕಾರಿ ವಿಧಾನಸಭಾ ಚುನಾವಣೆಗೆ ಸಾಕ್ಷಿಯಾಗುತ್ತಿದ್ದು, ಈ ಬಾರಿ ಕೇವಲ ಎರಡು ಪ್ರಮುಖ ದ್ರಾವಿಡ ಪಕ್ಷಗಳ ನಡುವೆ ಮಾತ್ರವಲ್ಲದೆ, ಹೊಸ ರಾಜಕೀಯ ಶಕ್ತಿಗಳು ಮತ್ತು ಬದಲಾದ ಮೈತ್ರಿಕೂಟಗಳ ನಡುವೆ ಐದು ಕಡೆಗಳಿಂದ ಸ್ಪರ್ಧೆ ಏರ್ಪಟ್ಟಿದೆ.
ಡಿಎಂಕೆ ಮೈತ್ರಿಕೂಟದ ಪಾರುಪತ್ಯ..
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸತತ ನಾಲ್ಕನೇ ಗೆಲುವಿನ ಮೇಲೆ ಕಣ್ಣಿಟ್ಟಿದ್ದು, ಕಾಂಗ್ರೆಸ್ ಸೇರಿದಂತೆ ಹಳೆಯ ಮಿತ್ರಪಕ್ಷಗಳ ಜೊತೆಗೆ, ಈ ಬಾರಿ ಕಮಲ್ ಹಾಸನ್ರ ಮಕ್ಕಳ್ ನೀಧಿ ಮಯ್ಯಮ್ ಮತ್ತು ಡಿಎಂಡಿಕೆ ಕೂಡ ಸ್ಟಾಲಿನ್ ಕೈಹಿಡಿದಿವೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಮಾಸಿಕ ಆರ್ಥಿಕ ನೆರವಿನಂತಹ ಯೋಜನೆಗಳ ಬಲದೊಂದಿಗೆ ಡಿಎಂಕೆ ಅಖಾಡಕ್ಕಿಳಿದಿದೆ.
ಬಿಜೆಪಿಯ ತ್ರಿಭಾಷಾ ಸೂತ್ರ ಮತ್ತು ಹಿಂದಿ ಹೇರಿಕೆಯನ್ನು ಪ್ರಮುಖ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿರುವ ಸ್ಟಾಲಿನ್, ಈ ಸಮರವನ್ನು ತಮಿಳುನಾಡು ವರ್ಸಸ್ ಎನ್‌ಡಿಎ ಸರ್ಕಾರ ಎಂದು ಬಿಂಬಿಸುವ ಪ್ರಯತ್ನಕ್ಕಿಳಿದಿದ್ದಾರೆ.
ಎಐಎಡಿಎಂಕೆ-ಬಿಜೆಪಿ ಮೈತ್ರಿ ಮತ್ತು ಸವಾಲುಗಳು
ಸತತ ಸೋಲುಗಳಿಂದ ಕಂಗೆಟ್ಟಿರುವ ಎಐಎಡಿಎಂಕೆಗೆ ಇದು ಅಸ್ತಿತ್ವದ ಹೋರಾಟವಾಗಿದೆ. ಎಡಪ್ಪಾಡಿ ಕೆ. ಪಳನಿಸ್ವಾಮಿ ಮತ್ತೊಮ್ಮೆ ಬಿಜೆಪಿಯೊಂದಿಗೆ ಕೈಜೋಡಿಸಿದ್ದು, ಟಿ.ಟಿ.ವಿ. ದಿನಕರನ್ರನ್ನು ಮರಳಿ ಮೈತ್ರಿಗೆ ತರುವ ಮೂಲಕ ತೇವರ್ ಸಮುದಾಯದ ಮತಬ್ಯಾಂಕ್ ಭದ್ರಪಡಿಸಲು ಮುಂದಾಗಿದ್ದಾರೆ. ಆದರೆ, ಶಶಿಕಲಾ ಮತ್ತು ಓ. ಪನ್ನೀರ್‌ಸೆಲ್ವಂ ಗೈರುಹಾಜರಿ ಹಾಗೂ ಪಿಎಂಕೆ ಪಕ್ಷದೊಳಗಿನ ಆಂತರಿಕ ಅಸಮಾಧಾನವು ಈ ಮೈತ್ರಿಕೂಟಕ್ಕೆ ಸ್ವಲ್ಪ ಹಿನ್ನಡೆ ತರುವ ಸಾಧ್ಯತೆಯಿದೆ.
ನಟ ವಿಜಯ್ರ ಟಿವಿಕೆ ಎಂಟ್ರಿ..
ತಮಿಳು ಚಿತ್ರರಂಗದ ಸ್ಟಾರ್ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷದ ರಾಜಕೀಯ ಪ್ರವೇಶವು ಚುನಾವಣೆಗೆ ಹೊಸ ತಿರುವು ನೀಡಿದ್ದು, ಭ್ರಷ್ಟಾಚಾರ ಮತ್ತು ಕುಟುಂಬ ರಾಜಕೀಯದ ವಿರುದ್ಧ ಧ್ವನಿ ಎತ್ತಿರುವ ವಿಜಯ್, ಯುವಜನತೆ ಮತ್ತು ಮಹಿಳಾ ಮತದಾರರ ಮೇಲೆ ಭರವಸೆ ಇಟ್ಟಿದ್ದಾರೆ. ಡಿಎಂಕೆಯನ್ನು ರಾಜಕೀಯ ಶತ್ರು ಹಾಗೂ ಬಿಜೆಪಿಯನ್ನು ಸೈದ್ಧಾಂತಿಕ ಪ್ರತಿಸ್ಪರ್ಧಿ ಎಂದು ಕರೆದಿರುವ ಅವರು, ದ್ರಾವಿಡ ಪಕ್ಷಗಳಿಗೆ ಪರ್ಯಾಯ ಶಕ್ತಿಯಾಗುವ ಪ್ರಯತ್ನದಲ್ಲಿದ್ದಾರೆ.
1967ರಲ್ಲಿ ಸಿ.ಎನ್. ಅಣ್ಣಾದೊರೈ ಮತ್ತು 1977ರಲ್ಲಿ ಎಂ.ಜಿ. ರಾಮಚಂದ್ರನ್ ನಿರ್ಮಿಸಿದ ರಾಜಕೀಯ ಕ್ರಾಂತಿಯನ್ನು ವಿಜಯ್ರ ಇಂದಿನ ನಡೆಗೆ ಹೋಲಿಸಲಾಗುತ್ತಿದೆ. ಆದರೆ ಬಲವಾದ ಮೈತ್ರಿಕೂಟಗಳನ್ನು ರಚಿಸುವಲ್ಲಿ ಟಿವಿಕೆ ತೋರಿಸುತ್ತಿರುವ ಅಸಮರ್ಥತೆ ಮತ್ತು ಇತ್ತೀಚೆಗೆ ಕರೂರ್ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದ ದುರಂತವು ವಿಜಯ್ ನಾಯಕತ್ವ ಹಾಗೂ ಪಕ್ಷದ ಸಂಘಟನಾ ಶಕ್ತಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಹಿಂದೆ ಶಿವಾಜಿ ಗಣೇಶನ್ ಮತ್ತು ವಿಜಯಕಾಂತ್ರಂತಹ ದಿಗ್ಗಜ ನಟರು ಚಿತ್ರರಂಗದ ಜನಪ್ರಿಯತೆಯನ್ನು ಪೂರ್ಣಪ್ರಮಾಣದ ರಾಜಕೀಯ ಅಧಿಕಾರವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದರು. ಇನ್ನು ಸೂಪರ್‌ಸ್ಟಾರ್ ರಜನಿಕಾಂತ್ ರಾಜಕೀಯದಿಂದಲೇ ದೂರ ಸರಿದ ಇತಿಹಾಸವೂ ಇದೆ. ಇಂತಹ ಸನ್ನಿವೇಶದಲ್ಲಿ, ವಿಜಯ್ ಎಂಜಿಆರ್ ಅಥವಾ ಜಯಲಲಿತಾರಂತೆ ದ್ರಾವಿಡ ಕೋಟೆಯಲ್ಲಿ ಹೊಸ ಇತಿಹಾಸ ಬರೆಯುತ್ತಾರಾ ಅಥವಾ ಕೇವಲ ವೋಟ್ ಕಟ್ ಮಾಡುವ ಪಕ್ಷವಾಗಿ ಉಳಿಯುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.
ಸೀಮನ್ರ ಏಕಾಂಗಿ ಹೋರಾಟ
ಪ್ರತಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಶೇ. 8.5 ರಷ್ಟು ಮತ ಗಳಿಕೆ ಪಡೆಯುವ ಸೀಮನ್ರ ನಾಮ್ ತಮಿಳರ್ ಕಚ್ಚಿ, ತಮಿಳು ರಾಷ್ಟ್ರೀಯತಾವಾದದ ಮೇಲೆ ನಂಬಿಕೆ ಇಟ್ಟಿದೆ. ನಟ ವಿಜಯ್ರ ಆಗಮನದಿಂದ ಸೀಮನ್ ಮತಬ್ಯಾಂಕ್‌ಗೆ ಹೊಡೆತ ಬೀಳಬಹುದು ಎಂಬ ಚರ್ಚೆಗಳು ನಡೆಯುತ್ತಿವೆಯಾದರೂ, ಅವರು ಮಾತ್ರ ತಮ್ಮ ನೆಲೆಯನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಶಶಿಕಲಾ-ರಾಮದಾಸ್ ತಂತ್ರ
ಚುನಾವಣೆಯ ಅಂತಿಮ ಹಂತದಲ್ಲಿ ವಿ.ಕೆ. ಶಶಿಕಲಾ ಮತ್ತು ಪಿಎಂಕೆ ಸಂಸ್ಥಾಪಕ ಎಸ್. ರಾಮದಾಸ್ ನಡುವಿನ ಅಘೋಷಿತ ಹೊಂದಾಣಿಕೆ ರಾಜಕಾರಣ ಇಪಿಎಸ್ ಮತ್ತು ದಿನಕರನ್ರಂತಹ ನಾಯಕರಿಗೆ ಬಿಸಿ ಮುಟ್ಟಿಸುವ ಸಾಧ್ಯತೆ ಇದ್ದು, ಇದು ಜಾತಿ ಆಧಾರಿತ ಮತಬ್ಯಾಂಕ್‌ಗಳನ್ನು ವಿಭಜಿಸಿ ಪ್ರಮುಖ ಮೈತ್ರಿಕೂಟಗಳ ಲೆಕ್ಕಾಚಾರವನ್ನು ತಲೆಕೆಳಗಾಗಿಸಬಹುದು ಎಂಬ ಆತಂಕ ಅನೇಕರನ್ನು ಕಾಡುತ್ತಿದೆ.
ಒಟ್ಟಾರೆಯಾಗಿ, ಕುಟುಂಬ ರಾಜಕೀಯ, ಭ್ರಷ್ಟಾಚಾರ, ಹಿಂದಿ ಹೇರಿಕೆ ಮತ್ತು ಅಭಿವೃದ್ದಿ ಯೋಜನೆಗಳ ಸುತ್ತ ಸುತ್ತುತ್ತಿರುವ ಈ ಬಾರಿಯ ತಮಿಳುನಾಡು ಚುನಾವಣೆ, ಭಾರತದ ರಾಜಕೀಯ ಭೂಪಟದಲ್ಲಿ ಅತ್ಯಂತ ಮಹತ್ವದ ಫಲಿತಾಂಶ ನೀಡುವ ನಿರೀಕ್ಷೆಯಿದೆ(ಏಜೆನ್ಸೀಸ್).