ದೆಹಲಿ ಸ್ಫೋಟದಲ್ಲಿ ಬಲಿಯಾದ ಐವರು ಅಮಾಯಕರು 
ದೇಶ

5 ಕುಟುಂಬದ ಆಧಾರ ಸ್ತಂಭವನ್ನೇ ಕೆಡವಿದ ದೆಹಲಿ ಸ್ಫೋಟ: ಇವರ ಕತೆ ಕೇಳಿದ್ರೆ ಕಣ್ತುಂಬಿ ಬರುತ್ತೆ! Delhi Blast

ಪ್ರಮುಖ ಮುಖ್ಯಾಂಶಗಳು

  • ದೆಹಲಿಯಲ್ಲಿ ನಡೆದ ಕಾರು ಸ್ಫೋಟದಿಂದಾಗಿ ದೇಶದಲ್ಲಿ ಮನೆ ಮಾಡಿದ ಆತಂಕ
  • ಹೀನ ಉಗ್ರ ಕೃತ್ಯಕ್ಕೆ ಬಲಿಯಾದ 13 ಮಂದಿ ಅಮಾಯಕರು
  • ಮನೆಯ ಆಧಾರಸ್ತಂಭವನ್ನೇ ಕಳೆದುಕೊಂಡ ಕೆಲ ಕುಟುಂಬಗಳು
  • ನ್ಯಾಯ ಸಿಗುವ ಭರವಸೆಯಲ್ಲಿವೆ ಸಂತ್ರಸ್ತ ಕುಟುಂಬಗಳು
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕಾರು ಸ್ಫೋಟದಿಂದಾಗಿ ( Delhi Blast ) ಇಡೀ ದೇಶದಲ್ಲಿ ಆತಂಕ ಮನೆ ಮಾಡಿದೆ. ಇದೊಂದು ಉಗ್ರ ಕೃತ್ಯವಾಗಿದ್ದು, 13 ಮಂದಿ ಅಮಾಯಕರು ಬಲಿಯಾಗಿದ್ದಾರೆ. ಯಾರದ್ದೋ ಕುಮ್ಮಕ್ಕಿಗೆ ಅಥವಾ ಯಾರನ್ನೋ ಓಲೈಸಲು ಇಂಥದ್ದೊಂದು ಭೀಕರ ದಾಳಿ ನಡೆಸಿದ್ದಾರೆ. ಸಾಕಷ್ಟು ಭರವಸೆಗಳನ್ನು ಇಟ್ಟುಕೊಂಡು ಬದುಕು ಸಾಗಿಸುತ್ತಿದ್ದ ಅಮಾಯಕರು ಸಾವಿನ ಕೂಪಕ್ಕೆ ಬಿದ್ದಿದ್ದಾರೆ. ಮನೆಯ ಆಧಾರಸ್ತಂಭ ಹಾಗೂ ಕುಟುಂಬ ಭರವಸೆಯನ್ನೇ ಕಳೆದುಕೊಂಡ ಕೆಲ ಕುಟುಂಬಗಳು ಉಗ್ರ ಕೃತ್ಯದಿಂದಾಗಿ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ದುಡಿಯುವ ಏಕೈಕ ಕೈ

ಮೃತ 13 ಮಂದಿಯಲ್ಲಿ ಪಂಕಜ್​ ಸೈನಿ ಕೂಡ ಒಬ್ಬರು. ಇವರು ಬಿಹಾರದ ನಿವಾಸಿ. ದೆಹಲಿಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ದಾಳಿಗೂ ಕೆಲವೇ ಸಮಯದ ಹಿಂದೆ ಪ್ರಯಾಣಿಕರೊಬ್ಬರನ್ನು ಚಾಂದಿನಿ ಚೌಕ್​ ಬಳಿ ಇಳಿಸಿ ಬಂದಿದ್ದರು. ಅದೇ ರೀತಿ ಉತ್ತರ ಪ್ರದೇಶದ ಶಾಮ್ಲಿಯ ನಿವಾಸಿ, ನೋಮನ್ ಎಂಬುವವರು ತಮ್ಮ ಕಾಸ್ಮೆಟಿಕ್​ ಅಂಗಡಿಗೆ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಅಲ್ಲಿಗೆ ಬಂದಿದ್ದರು. ಅಶೋಕ್​ ಕುಮಾರ್​ ಎಂಬುವರು ದೆಹಲಿ ಸಾರಿಗೆ ನಿಗಮದಲ್ಲಿ ಕಂಡಕ್ಟರ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ಹೀಗೆ ಒಂದಲ್ಲ ಒಂದು ಕಾರಣಗಳಿಗೆ ಹಾಗೂ ಬದುಕಿನ ಬಂಡಿ ಸಾಗಿಸುವುದಕ್ಕಾಗಿ ಸಂತ್ರಸ್ತರು ಆ ಪ್ರದೇಶಕ್ಕೆ ಬಂದಿದ್ದರು. ಆದರೆ, ಅದೇ ನಮ್ಮ ಕೊನೆಯ ದಿನ ಆಗಿರುತ್ತದೆ ಎಂದು ಯಾರೊಬ್ಬರು ಕೂಡ ಭಾವಿಸಿರಲಿಲ್ಲ. ಸೂಸೈಡ್​ ಬಾಂಬರ್​ ಡ್ರೈವ್​ ಮಾಡಿಕೊಂಡು ಬಂದ ಐ20 ಕಾರು ಕೆಂಪು ಕೋಟೆಯ ಬಳಿ ಸ್ಫೋಟಗೊಂಡು 13 ಮಂದಿ ಮೃತಪಟ್ಟರು. ಸ್ಫೋಟದ ರಭಸಕ್ಕೆ ವಾಹನಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ನ್ಯಾಯದ ಭರವಸೆ

ಅಂದಹಾಗೆ, 22 ವರ್ಷದ ಪಂಕಜ್ ಸೈನಿ ಇಡೀ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ. ಏಕೆಂದರೆ, ಆತ ಕುಟುಂಬದ ಏಕೈಕ ದುಡಿವ ಕೈ ಆಗಿದ್ದ. ಘಟನೆ ನಡೆದ ದಿನ ತನ್ನ ಪ್ರಯಾಣಿಕನನ್ನು ಆಗಷ್ಟೆ ತಾನೇ ಚಾಂದಿನಿ ಚೌಕ್​ ಬಳಿ ಬಿಟ್ಟು ಬಂದಿದ್ದ. ನನ್ನ ಮಗನ ಸಾವಿಗೆ ಸರ್ಕಾರ ನ್ಯಾಯ ಕೊಡಬೇಕಿದೆ. ನ್ಯಾಯ ಸಿಗುವ ಭರವಸೆಯೂ ನಮಗಿದೆ ಎಂದು ಮಗನ ಶವವನ್ನು ಪಡೆದುಕೊಳ್ಳಲು ದೆಹಲಿಯ ಲೋಕ ನಾಯಕ ಆಸ್ಪತ್ರೆಗೆ ಆಗಮಿಸಿದ್ದ ಮೃತ ಪಂಕಜ್​ ತಂದೆ ಮಾಧ್ಯಮಗಳ ಮುಂದೆ ಕಣ್ಣೀರಿಡುತ್ತಾ ಮಾತನಾಡಿದರು. ​

8 ಮಂದಿಗೆ ಒಬ್ಬನೇ ಆಸರೆ

ಮೃತ ಅಶೋಕ್​ ಕೂಡ 8 ಸದಸ್ಯರುಳ್ಳ ತಮ್ಮ ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದ. ಆತ ಅಮ್ರೋಹ ಮೂಲದ ನಿವಾಸಿ. ದೆಹಲಿಯ ಜಗತ್​ಪುರದಲ್ಲಿ ತನ್ನ ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ವಾಸವಿದ್ದ. ಆತ ದೆಹಲಿಯ ಸಾರಿಗೆ ನಿಗಮದ ಉದ್ಯೋಗಿಯಾಗಿದ್ದ. ಅಮ್ರೋಹ್​ ಮೂಲದ ಲೋಕೇಶ್​ ಕುಮಾರ್​ ಗುಪ್ತಾ ಎಂಬುವರನ್ನು ಭೇಟಿಯಾಗಲು ಅದೇ ಸ್ಥಳದಲ್ಲಿದ್ದಾಗ ಈ ಭೀಕರ ಅವಘಡ ಸಂಭವಿಸಿದೆ. ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಅಶೋಕ್ ಅವರ ಸೋದರಸಂಬಂಧಿ ಸಂತ್ರಸ್ತ ಪಟ್ಟಿಯಲ್ಲಿ ಅಶೋಕ್​ ಅವರ ಹೆಸರನ್ನು ಸಹ ನೋಡಿ ಒಂದು ಕ್ಷಣ ಆಘಾತಕ್ಕೆ ಒಳಗಾದರು. ಸಂತ್ರಸ್ತರ ಪಟ್ಟಿಯಲ್ಲಿ ಅಶೋಕ್​ ಹೆಸರನ್ನು ನಾನು ಓದಿದೆ ಮತ್ತು ಆತ ನನ್ನ ಸೋದರಸಂಬಂಧಿ ಅಂತಾನೂ ಹೇಳಿದೆ. ಆತನ ಬಳಿ ಒಂದು ಬೈಕ್ ಕೂಡ ಇತ್ತು, ಅದು ಕಾಣೆಯಾಗಿರುವುದಾಗಿ ಮತ್ತು ಅಶೋಕ್​ ಮೃತಪಟ್ಟಿರುವುದಾಗಿ ಖಚಿತಪಡಿಸಿದೆ ಎಂದು ಸೋದರ ಸಂಬಂಧಿ ಹೇಳಿದ್ದಾರೆ.
ಇನ್ನು ಅಶೋಕ್​ ಅವರ ತಾಯಿ ಸೋಮವತಿ ಅವರು ತಮ್ಮ ಹಿರಿ ಮಗ ಸುಭಾಷ್ ಜೊತೆ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಸುಭಾಷ್​ ಅವರಿಗೆ ಆಗಾಗ್ಗೆ ಅನಾರೋಗ್ಯ ಕಾಡುತ್ತಿತ್ತು. ಹೀಗಾಗಿ ಅಶೋಕ್ ಅವರು ಒಬ್ಬಂಟಿಯಾಗಿ ಕುಟುಂಬದ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದರು. ಹೆಚ್ಚುವರಿ ಆದಾಯಕ್ಕಾಗಿ ಅಶೋಕ್ ರಾತ್ರಿ ವೇಳೆ ಭದ್ರತಾ ಸಿಬ್ಬಂದಿಯಾಗಿಯೂ ಕೆಲಸ ಮಾಡುತ್ತಿದ್ದರು. ಲೋಕೇಶ್ ಗುಪ್ತಾ ಅವರ ಸಂಬಂಧಿಯೊಬ್ಬರು ಮತ್ತು ಅವರು ಚಾಂದನಿ ಚೌಕ್‌ನಲ್ಲಿ ಅಶೋಕ್ ಅವರನ್ನು ಭೇಟಿಯಾಗಬೇಕಿತ್ತು. ಆದರೆ, ಅಷ್ಟರಲ್ಲಿ ಈ ದುರ್ಘಟನೆ ನಡೆದಿದ್ದು ಅಶೋಕ್​ ಅಸುನೀಗಿದ್ದಾರೆ.

ಮಾರುಕಟ್ಟೆ ಬಂದು ಮಸಣ ಸೇರಿದ

ಮೃತಪಟ್ಟ ಅಮಾಯಕರಲ್ಲಿ ಶಾಮ್ಲಿಯ ನೋಮನ್ ಕೂಡ ಸೇರಿದ್ದಾರೆ. ನೋಮನ್​ ಅವರು ತಮ್ಮ ಕಾಸ್ಮಿಟಿಕ್​ ಅಂಗಡಿಗೆ ವಸ್ತುಗಳನ್ನು ಖರೀದಿ ಮಾಡಲು ಚಾಂದನಿ ಚೌಕ್‌ನಲ್ಲಿರುವ ಚಿಲ್ಲರೆ ಮಾರುಕಟ್ಟೆಗೆ ಹೋಗಿದ್ದರು. ಈ ವೇಳೆ ದುರಂತ ಸಂಭವಿಸಿ, 22 ವರ್ಷದ ನೋಮನ್​ ಸ್ಥಳದಲ್ಲೇ ಕೊನೆಯುಸಿರೆಳೆದರು. ಅವರ ಸೋದರಸಂಬಂಧಿ ಅಮನ್ ಕೂಡ ಗಾಯಗೊಂಡರು. ನೋಮನ್ ಸಾವು ತಮ್ಮ ಕುಟುಂಬವನ್ನೇ ಆಘಾತಕ್ಕೆ ದೂಡಿದೆ. ಮೃತಪಟ್ಟವರೆಲ್ಲರು ಕಷ್ಟಪಟ್ಟು ದುಡಿಯುತ್ತಿದ್ದವರು. ನಾವು ನಮ್ಮ ಮಗನನ್ನು ಕಳೆದುಕೊಂಡೆವು. ಇಂತಹ ಹೀನ ಕೃತ್ಯ ಎಸಗಿದವರನ್ನು ಸರ್ಕಾರ ಸುಮ್ಮನೇ ಬಿಡಬಾರದು ಎಂದು ನೋಮನ್​ ಅವರ ಚಿಕ್ಕಪ್ಪ ಫರ್ಖಾನ್ ಹೇಳಿದರು.

ಮನೆಗೆ ಬರುತ್ತಿದ್ದಾಗ ಸಾವು

ಇನ್ನು ದೆಹಲಿಯ ಲೋಕ ನಾಯಕ್ ಆಸ್ಪತ್ರೆಯ ಹೊರಗೆ, ವೃದ್ಧರೊಬ್ಬರು ಗೋಳಾಡುತ್ತಿರುವ ದೃಶ್ಯಗಳು ಕಂಡುಬಂದವು. ಅವರ ಪುತ್ರನ ಹೆಸರು 34 ವರ್ಷದ ಅಮರ್​ ಕಟಾರಿಯಾ. ಈತ ಮೆಡಿಕಲ್​ ಶಾಪ್​ ನಡೆಸುತ್ತಿದ್ದ. ಸಂಜೆ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಸ್ಫೋಟದಲ್ಲಿ ದುರಂತ ಸಾವಿಗೀಡಾದರು. ಕಟಾರಿಯಾ ಅವರ ಅಂಗಡಿ ಕೆಂಪು ಕೋಟೆಯಿಂದ ಸುಮಾರು 6 ಕಿ.ಮೀ ದೂರದಲ್ಲಿರುವ ಭಾಗೀರಥ ಅರಮನೆಯಲ್ಲಿತ್ತು ಮತ್ತು ಅವರು ಶ್ರೀನಿವಾಸಪುರಿಯಲ್ಲಿ ವಾಸಿಸುತ್ತಿದ್ದರು.
ಅಂದಹಾಗೆ, ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಅನೇಕ ಶವಗಳನ್ನು ಇನ್ನೂ ಗುರುತಿಸಲಾಗಿಲ್ಲ. ಲೋಕ ನಾಯಕ್ ಆಸ್ಪತ್ರೆಯ ಹೊರಗೆ, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ವಿಧಿಯ ಕ್ರೂರತೆಗೆ ಈ ಘಟನೆ ಸಾಕ್ಷಿಯಾಗಿದೆ, (ಏಜೆನ್ಸೀಸ್​).