ನ್ಯೂಯಾರ್ಕ್: "ಅಮೆರಿಕದಲ್ಲಿ ಸಂಬಳ ಜಾಸ್ತಿ ಇರಬಹುದು, ಆದರೆ ಇಲ್ಲಿನ ಬದುಕು ಎಷ್ಟು ದುಬಾರಿ ಗೊತ್ತಾ?" - ಹೀಗೆಂದು ಪ್ರಶ್ನಿಸುತ್ತಾ ಭಾರತೀಯ ಮೂಲದ ಪಾರ್ಥ ವಿಜಯವರ್ಗಿಯ ಎಂಬುವವರು ಹಂಚಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೌದು, ಕೇವಲ ಒಂದೂವರೆ ಗಂಟೆಯ ಆಸ್ಪತ್ರೆ ಭೇಟಿಗೆ ಸುಮಾರು 5 ಲಕ್ಷ ರೂಪಾಯಿ ಬಿಲ್ ಬಂದಿರುವ ಕಹಿಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ. ಕಳೆದ ಡಿಸೆಂಬರ್ 25 ರಂದು ಪಾರ್ಥ ಅವರು ನ್ಯೂಯಾರ್ಕ್‌ನಲ್ಲಿ ಐಸ್ ಸ್ಕೇಟಿಂಗ್ ಮಾಡುತ್ತಿದ್ದಾಗ ಕಾಲಿಗೆ ಪೆಟ್ಟಾಗಿತ್ತು. ಮೂಳೆ ಮುರಿತವಾಗಿರಬಹುದು ಎಂದು ಹೆದರಿದ ಅವರು ತಕ್ಷಣ ಎಮರ್ಜೆನ್ಸಿ ರೂಮ್‌ಗೆ (ER) ಹೋಗಲು ನಿರ್ಧರಿಸಿದರು. ಆದರೆ ಅಮೆರಿಕದಲ್ಲಿ ಅಂಬ್ಯುಲೆನ್ಸ್ ವೆಚ್ಚ ವಿಪರೀತವಾಗಿರುವುದರಿಂದ, ಅವರು ನೋವಿನಲ್ಲೇ ಟ್ಯಾಕ್ಸಿ ಹಿಡಿದು ಆಸ್ಪತ್ರೆಗೆ ಹೋಗಿದ್ದರು.
ಒಂದೂವರೆ ಗಂಟೆ, 5 ಲಕ್ಷ ರೂ. ಬಿಲ್!
ಆಸ್ಪತ್ರೆಯಲ್ಲಿ ವೈದ್ಯರು ಪಾರ್ಥ ಅವರಿಗೆ ಎಕ್ಸ್ರೇ (X-ray) ಮಾಡಿದರು, ಕಾಲನ್ನು ಪರೀಕ್ಷಿಸಿ ಅದೊಂದು ಮಾಂಸಖಂಡದ ಗಾಯ ಎಂದು ತಿಳಿಸಿ ಬ್ಯಾಂಡೇಜ್ ಕಟ್ಟಿ ಕಳುಹಿಸಿದರು. ಕೇವಲ 90 ನಿಮಿಷಗಳ ಈ ಚಿಕಿತ್ಸೆಗೆ ಬಂದ ಬಿಲ್ ನೋಡಿ ಪಾರ್ಥ ದಂಗಾಗಿದ್ದಾರೆ.
ವಿಮೆ ಕಂಪನಿ ಪಾವತಿಸಿದ್ದು: ಸುಮಾರು 4,000 ರಿಂದ 4,500 ಡಾಲರ್ (ಅಂದಾಜು 3.3 ರಿಂದ 3.7 ಲಕ್ಷ ರೂ. ಪಾರ್ಥ ಕೈಯಿಂದ ಪಾವತಿಸಿದ್ದು: 1,800 ಡಾಲರ್ (ಅಂದಾಜು 1.5 ಲಕ್ಷ ರೂ.)ಒಟ್ಟು ಬಿಲ್: ಸರಿಸುಮಾರು 5 ಲಕ್ಷ ರೂಪಾಯಿಗೂ ಅಧಿಕವಾಗಿದೆ ಎಂದು ಆರೋಪಿಸಿದ್ದಾರೆ.
ಭಾರತದ ಆರೋಗ್ಯ ವ್ಯವಸ್ಥೆಗೆ ಶ್ಲಾಘನೆ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಅಮೆರಿಕದ ಆರೋಗ್ಯ ವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. "ಭಾರತದಲ್ಲಿ ಇದೇ ಚಿಕಿತ್ಸೆಗೆ ಗರಿಷ್ಠ ಎಂದರೆ 2,000 ರಿಂದ 5,000 ರೂಪಾಯಿ ಆಗಬಹುದು. ಅಮೆರಿಕದಲ್ಲಿ ಸಣ್ಣ ಪುಟ್ಟ ಗಾಯಗಳೂ ಆರ್ಥಿಕ ದಂಡದಂತೆ ಕಾಣುತ್ತವೆ" ಎಂದು ಬಳಕೆದಾರರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು "ಅಮೆರಿಕದಲ್ಲಿ ಚಿಕಿತ್ಸೆ ಪಡೆಯುವುದಕ್ಕಿಂತ ಭಾರತಕ್ಕೆ ಬಂದು ಹೋಗುವುದು ಅಗ್ಗ" ಎಂದು ತಮಾಷೆ ಮಾಡಿದ್ದಾರೆ,(ಏಜೆನ್ಸೀಸ್).