5 ಕೋಟಿ ರೂ. ಚಿನ್ನ ಲೇಪಿತ ರಾಮಚರಿತಮಾನಸ ಕಣ್ಮರೆ  
ದೇಶ

5 ಕೋಟಿ ರೂ. ಚಿನ್ನದ ರಾಮಚರಿತಮಾನಸ ಕಣ್ಮರೆ! ರಾಮಮಂದಿರ ಟ್ರಸ್ಟ್​ ವಿರುದ್ಧ ಮಾಜಿ ಐಎಎಸ್ ಅಧಿಕಾರಿ ಆರೋಪ

ಪ್ರಮುಖ ಮುಖ್ಯಾಂಶಗಳು

  • ಅಯೋಧ್ಯೆ ರಾಮಮಂದಿರ ಕಾಣಿಕ ಲೂಟಿ ಪ್ರಕರಣ
  • ದೇಗುಲಕ್ಕೆ ಅರ್ಪಿಸಿದ್ದ 5 ಕೋಟಿ ರೂ. ಮೌಲ್ಯದ ಚಿನ್ನದ ರಾಮಚರಿತಮಾನಸ ಕಣ್ಮರೆ
  • ಲಕ್ಷ್ಮಿನಾರಾಯಣನ್ ದೇವಾಲಯದಿಂದ ಪ್ರತಿಯನ್ನು ಸ್ಥಳಾಂತರ ಆರೋಪ
  • ಚಂಪತ್ ರಾಯ್ ಅಸಡ್ಡೆ ಹೇಳಿಕೆಗೆ ಮಾಜಿ ಐಎಎಸ್ ಅಧಿಕಾರಿ ಕೆಂಡ
ಅಯೋಧ್ಯೆ: ಪ್ರಸ್ತುತ ರಾಮ ಮಂದಿರದಲ್ಲಿ ಕಾಣಿಕೆ ಲೂಟಿ ಪ್ರಕರಣ ದೇಶದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಟ್ರಸ್ಟ್​ ಮತ್ತು ಆರೋಪಿಗಳ ವಿರುದ್ಧ ತನಿಖೆ ಚುರುಕುಗೊಂಡಿದೆ. ಈ ಮಧ್ಯೆ, ಹೊಸದೊಂದು ಆರೋಪ ಕೇಳಿಬಂದಿದ್ದು, ಮಾಜಿ ಐಎಎಸ್ ಅಧಿಕಾರಿ ಎಸ್. ಲಕ್ಷ್ಮಿನಾರಾಯಣನ್ ಅವರು ತಮ್ಮ ಕುಟುಂಬದ ವತಿಯಿಂದ ದೇಗುಲಕ್ಕೆ ನೀಡಿದ್ದ 5 ಕೋಟಿ ರೂ. ಮೌಲ್ಯದ ಚಿನ್ನದ ರಾಮಚರಿತಮಾನಸ ಕಣ್ಮರೆಯಾಗಿದೆ ಎಂದು ಆರೋಪಿಸಿದ್ದಾರೆ.
ಏಪ್ರಿಲ್ 2024ರಲ್ಲಿ ತಮ್ಮ ಕುಟುಂಬವು ಚಿನ್ನದ ರಾಮಚರಿತಮಾನಸವನ್ನು ರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್‌ಗೆ ದಾನ ಮಾಡಿತು. ಆದರೀಗ, ಅದನ್ನು ದೇವಾಲಯದ ಆವರಣದಿಂದ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್​ ಹೇಳಿದ್ದಾರೆ. ಮತ್ತು ದೇಗುಲಕ್ಕೆ ಕೊಟ್ಟ ಎಲ್ಲ ದೇಣಿಗೆ, ಉಡುಗೊರೆಗಳನ್ನು ಪ್ರದರ್ಶಿಸಲು ಸಾಧ್ಯವಿಲ್ಲ ಎಂಬ ಅಸಡ್ಡೆಯಿಂದ ಹೇಳಿರುವುದಾಗಿ ಲಕ್ಷ್ಮಿನಾರಾಯಣನ್ ಕಿಡಿಕಾರಿದ್ದಾರೆ.
ರಾಮಮಂದಿರ ದೇಣಿಗೆ ದುರ್ಬಳಕೆ ಪ್ರಕರಣದ ತನಿಖೆ ನಡೆಯುತ್ತಿರುವ ಸಮಯದಲ್ಲಿ ಈ ಹೊಸ ಆರೋಪಗಳು ಭಾರಿ ಚರ್ಚೆಗೆ ಗ್ರಾಸವಾಗಿವೆ. ಅಯೋಧ್ಯೆ ರಾಮ ಮಂದಿರ ನಿಧಿಯ ದುರುಪಯೋಗದ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಈಗಾಗಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ, ಆರೋಪಿಗಳ ಸಂಪೂರ್ಣ ಬಯೋಡೇಟಾವನ್ನು ಜಾಲಾಡಿಸುತ್ತಿದೆ. ಈಗ 5 ಕೋಟಿ ರೂ. ಮೌಲ್ಯದ ಚಿನ್ನದ ರಾಮಚರಿತಮಾನಸ ಏಕೆ ಸ್ಥಳಾಂತರಗೊಂಡಿತು? ಈಗ ಎಲ್ಲಿದೆ? ಎಂಬ ಪ್ರಶ್ನೆಗಳಿಗೆ ಟ್ರಸ್ಟ್ ಸ್ಪಷ್ಟತೆಯನ್ನು ನೀಡುವಂತೆ ಆಗ್ರಹಿಸಲಾಗಿದೆ.
ಇದಕ್ಕೂ ಮೊದಲು, ವಿರೋಧ ಪಕ್ಷಗಳು ಮತ್ತು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​(ಐಬಿಜೆಎ), ರಾಮ ಮಂದಿರಕ್ಕೆ ದೇಣಿಗೆಯಾಗಿ ನೀಡಿದ್ದ ದೊಡ್ಡ ಪ್ರಮಾಣದ ಬೆಳ್ಳಿಯ ಬಾರ್‌ಗಳು ಮತ್ತು ವಸ್ತುಗಳು ಕಣ್ಮರೆಯಾಗಿವೆ ಎಂದು ದೂರಿತ್ತು. ಈ ಆರೋಪಕ್ಕೆ ಸಂಬಂಧಿಸಿದಂತೆಯೂ ಪ್ರಶ್ನೆಗಳನ್ನು ಕೇಳಲಾಗಿದೆ. ಒಟ್ಟಾರೆ, ಬಗೆದಷ್ಟು ಬಯಲಾಗುತ್ತಿದೆ ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಪ್ರಕರಣ,(ಏಜೆನ್ಸೀಸ್).