ಮಾಜಿ ಉಪ ಮೇಯರ್ ಹತ್ಯೆಗೆ 25 ಲಕ್ಷ ಸುಪಾರಿ?  WEB
ದೇಶ

ಮಾಜಿ ಉಪ ಮೇಯರ್ ಹತ್ಯೆಗೆ 25 ಲಕ್ಷ ಸುಪಾರಿ? ಹೈದರಾಬಾದ್‌ನಲ್ಲಿ ಐವರ ಬಂಧನ!Murder Plot

ಹೈದರಾಬಾದ್ ಮಹಾನಗರ ಪಾಲಿಕೆಯ (GHMC) ಮಾಜಿ ಉಪಮೇಯರ್ ಬಾಬಾ ಫಸಿಯುದ್ದೀನ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪದ ಮೇಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಹತ್ಯೆಯ ಸಂಚನ್ನು ವಿಫಲಗೊಳಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ.Murder Plot

ಹೈದರಾಬಾದ್: ಹೈದರಾಬಾದ್ ಮಹಾನಗರ ಪಾಲಿಕೆಯ (GHMC) ಮಾಜಿ ಉಪಮೇಯರ್ ಬಾಬಾ ಫಸಿಯುದ್ದೀನ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪದ ಮೇಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಹತ್ಯೆಯ ಸಂಚನ್ನು ವಿಫಲಗೊಳಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ.

ಬಂಧಿತರನ್ನು ಇಮ್ರಾನ್ ಖಾನ್ (33), ದೇವರ ರಾಜ (56), ಫಯಾಜ್ ಖಾನ್ (38), ಮೊಹಮ್ಮದ್ ಕಾಶಿಫ್ ಮಿಸ್ಬಾ (26) ಮತ್ತು ಶೇಕ್ ನವಾಜ್ (32) ಎಂದು ಗುರುತಿಸಲಾಗಿದೆ. ಇವರಲ್ಲಿ ಇಮ್ರಾನ್ ಖಾನ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರೆ, ದೇವರ ರಾಜ ರಿಯಲ್ ಎಸ್ಟೇಟ್ ಮಧ್ಯವರ್ತಿಯಾಗಿದ್ದಾರೆ. ಉಳಿದ ಆರೋಪಿಗಳಲ್ಲಿ ಇಬ್ಬರು ಚಾಲಕರಾಗಿದ್ದು, ಮತ್ತೊಬ್ಬರು ವೆಲ್ಡರ್ ಆಗಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಸೈಯದ್ ಹಾದಿ ಎಂದು ಗುರುತಿಸಲಾಗಿದೆ.

ಹತ್ಯೆಗೆ 20ರಿಂದ 25 ಲಕ್ಷ ಆಫರ್

ಶನಿವಾರ ಪೊಲೀಸರಿಗೆ ಸಲ್ಲಿಕೆಯಾದ ದೂರಿನ ಪ್ರಕಾರ, ಸುಮಾರು ಒಂದು ತಿಂಗಳ ಹಿಂದೆ ಇಮ್ರಾನ್ ಖಾನ್ ಮತ್ತು ಆತನ ಸಹೋದರ ಫಯಾಜ್ ಖಾನ್, ಮಿಸ್ಬಾ ಎಂಬ ವ್ಯಕ್ತಿಯನ್ನು ಸಂಪರ್ಕಿಸಿದ್ದರು. ಮಾಜಿ ಉಪಮೇಯರ್ ಬಾಬಾ ಫಸಿಯುದ್ದೀನ್ ಅವರನ್ನು ಹತ್ಯೆ ಮಾಡಿದರೆ 20 ಲಕ್ಷದಿಂದ 25 ಲಕ್ಷದವರೆಗೆ ಹಣ ನೀಡುವುದಾಗಿ ಆಮಿಷವೊಡ್ಡಿದ್ದರು ಎನ್ನಲಾಗಿದೆ.ಹತ್ಯೆಯ ಯೋಜನೆ ರೂಪಿಸಲು ಮತ್ತು ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ಮುಂಗಡವಾಗಿ 5 ಲಕ್ಷ ನೀಡುವ ಒಪ್ಪಂದವೂ ನಡೆದಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಮನೆ ಬಳಿ ಮಾರಕಾಸ್ತ್ರಗಳೊಂದಿಗೆ ಸುತ್ತಾಟ

ಆರೋಪಿಗಳು ಫಸಿಯುದ್ದೀನ್ ಅವರ ನಿವಾಸದ ಸುತ್ತಮುತ್ತ ರಹಸ್ಯವಾಗಿ ಓಡಾಡಿ, ಅವರ ಚಲನವಲನಗಳ ಮೇಲೆ ನಿಗಾ ಇರಿಸಿದ್ದರು ಎನ್ನಲಾಗಿದೆ. ಈ ವೇಳೆ ಮಾರಕಾಸ್ತ್ರಗಳನ್ನೂ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಮಾಹಿತಿ ಆಧರಿಸಿ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದರು. ಹೈದರಾಬಾದ್ ಪೊಲೀಸ್ ಆಯುಕ್ತರು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ವಿಶೇಷ ತಂಡಗಳನ್ನು ರಚಿಸಿದ್ದರು. ಸಂಚಿನ ಹಿಂದಿರುವ ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಂತೆ ಸೂಚನೆ ನೀಡಿದ್ದರು.

ಎರಡು ಚಾಕು, ಐದು ಮೊಬೈಲ್ ವಶಕ್ಕೆ

ಸಾಕ್ಷಿಗಳ ಹೇಳಿಕೆ ಮತ್ತು ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಿ, ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಆರೋಪಿಗಳು ಸ್ಥಳ ಪರಿಶೀಲನೆಗೆ ಬಳಸಿದ್ದಾರೆ ಎನ್ನಲಾದ ಎರಡು ಚಾಕುಗಳು ಮತ್ತು ಸಂಚಿನ ಕುರಿತು ಸಂವಹನ ನಡೆಸಲು ಬಳಸಿರಬಹುದಾದ ಐದು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.