47 ವರ್ಷಗಳ ಕಾಯುವಿಕೆ ಅಂತ್ಯ! ಒಂದೇ ಫ್ರೇಮ್‌ನಲ್ಲಿ ರಜನಿ-ಕಮಲ್..? KH x RK ಪ್ರೋಮೋದಲ್ಲಿ ಅಡಗಿದೆ ದೊಡ್ಡ ರಹಸ್ಯ! 
ದೇಶ

47 ವರ್ಷಗಳ ಕಾಯುವಿಕೆ ಅಂತ್ಯ! ಒಂದೇ ಫ್ರೇಮ್‌ನಲ್ಲಿ ರಜನಿ-ಕಮಲ್..? KH x RK ಪ್ರೋಮೋದಲ್ಲಿ ಅಡಗಿದೆ ದೊಡ್ಡ ರಹಸ್ಯ!

ಚೆನ್ನೈ: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಇಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನವಾಗಿದೆ. ಸುಮಾರು ನಾಲ್ಕು ದಶಕಗಳ ಸುದೀರ್ಘ ಕಾಯುವಿಕೆಯ ನಂತರ, ಭಾರತೀಯ ಚಿತ್ರರಂಗದ ಇಬ್ಬರು ಧ್ರುವತಾರೆಗಳಾದ ಸೂಪರ್‌ಸ್ಟಾರ್ ರಜನೀಕಾಂತ್ ಮತ್ತು ಉಳಗನಾಯಗನ್ ಕಮಲ್ ಹಾಸನ್ ಬೆಳ್ಳಿ ಪರದೆಯ ಮೇಲೆ ಒಂದಾಗುತ್ತಿದ್ದಾರೆ. ಈ ಬೃಹತ್ ಚಿತ್ರಕ್ಕೆ 'KH x RK' ಎಂದು ತಾತ್ಕಾಲಿಕವಾಗಿ ಹೆಸರಿಸಲಾಗಿದ್ದು, ಶನಿವಾರ ಬಿಡುಗಡೆಯಾದ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ನನ್ನ ಗೆಳೆಯನೊಂದಿಗೆ ಮತ್ತೆ ಪ್ರಯಾಣ...

ಈ ಕುರಿತು ಎಕ್ಸ್​ನಲ್ಲಿ ಹಂಚಿಕೊಂಡಿರುವ ಕಮಲ್ ಹಾಸನ್, ನನ್ನ ಗೆಳೆಯ ರಜನೀಕಾಂತ್ ಜೊತೆಗಿನ ವಿಶೇಷ ಮರುಸಂಗಮ. ಪ್ರತಿ ಶ್ರೇಷ್ಠ ಪ್ರಯಾಣಕ್ಕೂ ಇನ್ನೊಂದು ಅಧ್ಯಾಯದ ಅವಶ್ಯಕತೆ ಇರುತ್ತದೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ರಜನೀಕಾಂತ್ ಮತ್ತು ಕಮಲ್ ಹಾಸನ್ ಕೊನೆಯದಾಗಿ 1979ರ 'ಅಲ್ಲಾವುದ್ದೀನುಂ ಅದ್ಭುತ ವಿಲಕ್ಕುಂ' ಚಿತ್ರದಲ್ಲಿ ಪೂರ್ಣಪ್ರಮಾಣದಲ್ಲಿ ಕಾಣಿಸಿಕೊಂಡಿದ್ದರು. 1985ರ ಗೆರಾಫ್ತಾರ್ ಚಿತ್ರದಲ್ಲಿ ಕಮಲ್ ಅತಿಥಿ ಪಾತ್ರ ಮಾಡಿದ್ದರು.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಐತಿಹಾಸಿಕ ಸಿನಿಮಾ
ಜೈಲರ್ ಮತ್ತು 'ಡಾಕ್ಟರ್' ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ ನೆಲ್ಸನ್ ದಿಲೀಪ್‌ಕುಮಾರ್ ಈ ಮಹಾನ್ ಜೋಡಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರೆಡ್ ಜೈಂಟ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು, ಕ್ಲಾಸಿಕ್ ಮತ್ತು ರೆಟ್ರೋ ಶೈಲಿಯ ಸ್ಪರ್ಶ ಹೊಂದಿರಲಿದೆ ಎಂಬುದು ಪ್ರೋಮೋದಿಂದ ಸ್ಪಷ್ಟವಾಗಿದೆ. ಇಬ್ಬರೂ ನಟರು ಅತ್ಯಂತ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಅವರ ಸ್ವಾಗ್ ಅಭಿಮಾನಿಗಳ ಎದಬಡಿತ ಹೆಚ್ಚಿಸಿದೆ.

ತಾಂತ್ರಿಕ ದಿಗ್ಗಜರ ಸಮಾಗಮ

ಈ ಸಿನಿಮಾದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ತಾಂತ್ರಿಕ ತಂಡವಾಗಿದೆ.
ಸಂಗೀತ: ಯುವ ಸಂವೇದನೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದು, ಈಗಾಗಲೇ ಪ್ರೋಮೋ ಮ್ಯೂಸಿಕ್ ವೈರಲ್ ಆಗಿದೆ.
ಛಾಯಾಗ್ರಹಣ: ಖ್ಯಾತ ಛಾಯಾಗ್ರಾಹಕ ರಾಜೀವ್ ಮೆನನ್ ಅವರು ಕ್ಯಾಮೆರಾ ಕೈಚಳಕ ತೋರಲಿದ್ದಾರೆ.
ಸಂಪಾದನೆ: ಆರ್. ನಿರ್ಮಲ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.
ಕಲಾ ನಿರ್ದೇಶನ: ಡಿಆರ್‌ಕೆ ಕಿರಣ್ ಅವರು ಈ ರೆಟ್ರೋ ಪ್ರಪಂಚವನ್ನು ಸೃಷ್ಟಿಸುತ್ತಿದ್ದಾರೆ.
ಈ ಚಿತ್ರದ ಘೋಷಣೆಯು ಕೇವಲ ತಮಿಳು ಚಿತ್ರರಂಗಕ್ಕೆ ಮಾತ್ರವಲ್ಲದೆ, ಇಡೀ ಭಾರತೀಯ ಸಿನಿ ಪ್ರಿಯರಿಗೆ ದೊಡ್ಡ ಹಬ್ಬವಾಗಲಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರವು ಹೊಸ ಇತಿಹಾಸ ಸೃಷ್ಟಿಸುವುದು ಖಚಿತ ಎಂದು ಸಿನಿ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ,(ಏಜೆನ್ಸೀಸ್).