NALSAR Convocation | ಹೈದರಾಬಾದ್ ನಲ್ಸಾರ್ ವಿವಿ ಘಟಿಕೋತ್ಸವಕ್ಕೆ ಸಿಜೆಐ ಆಹ್ವಾನಿಸಿದ್ದಕ್ಕೆ 450 ವಿದ್ಯಾರ್ಥಿಗಳ ವಿರೋಧ
ಹೈದರಾಬಾದ್: ಹೈದರಾಬಾದ್‌ನ ಪ್ರತಿಷ್ಠಿತ ನಲ್ಸಾರ್ ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವ (NALSAR Convocation) ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲು ವಿಶ್ವವಿದ್ಯಾಲಯ ಆಡಳಿತ ಮಂಡಳಿ ನಿರ್ಧರಿಸಿದೆ ಎನ್ನಲಾದ ಕ್ರಮವನ್ನು ನಿರ್ಗಮಿತ ವಿದ್ಯಾರ್ಥಿಗಳ ಒಂದು ಬಣ ವಿರೋಧಿಸಿದೆ.
2026ರ ಬ್ಯಾಚ್‌ನ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಕುಲಪತಿಗಳು, ರಿಜಿಸ್ಟ್ರಾರ್ ಹಾಗೂ ಪ್ರಾಧ್ಯಾಪಕರಿಗೆ ಜಂಟಿ ಮನವಿ ಪತ್ರ ಸಲ್ಲಿಸಿದ್ದು, ಸಿಜೆಐ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ನಿರ್ಧಾರವನ್ನು ತಕ್ಷಣವೇ ಪುನರ್ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
ಇತ್ತೀಚಿನ ಕೆಲವು ನ್ಯಾಯಾಂಗ ನಡಾವಳಿಗಳಲ್ಲಿ ಸಿಜೆಐ ಸೂರ್ಯ ಕಾಂತ್ ಅವರ ನಿಲುವು ಹಾಗೂ ಹೇಳಿಕೆಗಳನ್ನು ಉಲ್ಲೇಖಿಸಿರುವ ವಿದ್ಯಾರ್ಥಿಗಳು, ತಮ್ಮ ಆಕ್ಷೇಪಣೆಗೆ ಸ್ಪಷ್ಟ ಕಾರಣಗಳನ್ನು ನೀಡಿದ್ದಾರೆ. 2026ರ ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಿಂದ ಸಂಸತ್ತಿಗೆ ಚಲೋ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯದ ಅರ್ಜಿಯ ವಿಚಾರಣೆ ವೇಳೆ, ಸಾಕ್ಷಿಯಾಗಿ ನೀಡಲಾದ ವಿಡಿಯೋಗಳನ್ನು ವೀಕ್ಷಿಸಲು ಸಿಜೆಐ ನಿರಾಕರಿಸಿದ್ದರು. ಆ ಸಮಯದಲ್ಲಿ ನಮಗೆ ವಿಡಿಯೋ ನೋಡಲು ಆಸಕ್ತಿಯಿಲ್ಲ ಮತ್ತು ಅದನ್ನು ನೋಡಲು ಸಮಯವೂ ಇಲ್ಲ ಎಂದು ಹೇಳಿ ಅರ್ಜಿದಾರರ ಪರ ವಕೀಲರ ವಾದವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇದಲ್ಲದೆ, ಈ ಪ್ರತಿಭಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರೂ ಆ ಬಗ್ಗೆ ತನಿಖೆಗೆ ಕೋರಿದ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ತಮ್ಮ ಶೈಕ್ಷಣಿಕ ಮತ್ತು ಭಾವನಾತ್ಮಕ ಜೀವನದಲ್ಲಿ ಅತ್ಯಂತ ಮಹತ್ವದ ದಿನವಾದ ಘಟಿಕೋತ್ಸವದಲ್ಲಿ, ವಿದ್ಯಾರ್ಥಿಗಳ ಬಗ್ಗೆ ನಿರಾಸಕ್ತಿ ತಳೆದ ಹಾಗೂ ಪೊಲೀಸ್ ದೌರ್ಜನ್ಯವನ್ನು ಅಲಕ್ಷಿಸಿದ ವ್ಯಕ್ತಿಯಿಂದ ಪದವಿ ಸ್ವೀಕರಿಸುವುದು ತಮಗೆ ಸರಿ ಎನಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ವಿರೋಧವು ಸಿಜೆಐ ಹುದ್ದೆಯ ವಿರುದ್ಧವಲ್ಲ, ಬದಲಾಗಿ ಅವರ ಇತ್ತೀಚಿನ ನಡವಳಿಕೆಯು ಕಾನೂನು ವಿಶ್ವವಿದ್ಯಾಲಯವು ಎತ್ತಿಹಿಡಿಯುವ ಸಂವಿಧಾನಾತ್ಮಕ ಮೌಲ್ಯಗಳು, ನ್ಯಾಯಸಮ್ಮತತೆ ಮತ್ತು ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಇದಕ್ಕೂ ಮುನ್ನ, ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS) ಆಯೋಜಿಸಿದ್ದ 86ನೇ ಘಟಿಕೋತ್ಸವ ಸಮಾರಂಭಕ್ಕೆ ಸಿಜೆಐ ಸೂರ್ಯ ಕಾಂತ್ ಅವರನ್ನೇ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆದರೆ, ಕಾಕ್ರೋಚ್ ಜನತಾ ಪಾರ್ಟಿ ಚಳವಳಿಯ ಬೆಂಬಲಿತ ವಿದ್ಯಾರ್ಥಿಗಳಿಂದ ಭಾರಿ ಪ್ರತಿಭಟನೆ ವ್ಯಕ್ತವಾಗುವ ಹಾಗೂ ಭದ್ರತಾ ಲೋಪ ಉಂಟಾಗುವ ಭೀತಿಯಿಂದಾಗಿ, ಆಯೋಜನೆಯ ಕೇವಲ ಎರಡು ದಿನಗಳ ಮುನ್ನ ಸಂಸ್ಥೆಯು ಸಮಾರಂಭವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು