ಗುವಾಹಟಿಯಲ್ಲಿ 45 ಅಡಿ ಎತ್ತರದ ಗಣೇಶನ ವಿಗ್ರಹದೊಂದಿಗೆ ಸಂಭ್ರಮಾಚರಣೆ; ಗಣೇಶ ಚತುರ್ಥಿ ಸಂದರ್ಭದಲ್ಲಿ ಜುಬಿನ್ ಗಾರ್ಗ್ ಅವರಿಗೆ ಗೌರವ ನಮನ.
ಅಸ್ಸಾಂ: ಭಾರತ ಒಂದರ್ಥದಲ್ಲಿ ಹಬ್ಬಗಳ ದೇಶವಾಗಿದೆ. ಅದರಲ್ಲೂ ಗಣೇಶ ಚತುರ್ಥಿ ಬಂತೆಂದರೆ ಸಾಕು, ದೇಶಾದ್ಯಂತ ಸಂಭ್ರಮ ಮನೆ ಮಾಡುತ್ತದೆ. ಗಲ್ಲಿ ಗಲ್ಲಿಯಲ್ಲೂ ವಿಘ್ನನಿವಾರಕನ ಮೂರ್ತಿ ಪ್ರತಿಷ್ಠಾಪಿಸಿ, ಭಕ್ತಿಯಿಂದ ಪೂಜಿಸುವ ಹಬ್ಬ ಇದಾಗಿದೆ.
ಈ ಬಾರಿ ಗುವಾಹಟಿಯಲ್ಲಿ ನಡೆಯುತ್ತಿರುವ ಗಣೇಶ ಚತುರ್ಥಿ ಆಚರಣೆಯು ಎಲ್ಲರ ಗಮನ ಸೆಳೆಯುತ್ತಿದೆ. ಇಲ್ಲಿ ಬರೀ ದೇವಸ್ಥಾನಗಳಲ್ಲ, ಸಾರ್ವಜನಿಕ ಪೆಂಡಾಲ್‌ಗಳಲ್ಲಿ ಅದ್ದೂರಿಯಾಗಿ ಹಬ್ಬವನ್ನು ಆಚರಿಸಲು ಭರ್ಜರಿ ಸಿದ್ಧತೆ ನಡೆದುಕೊಂಡಿದೆ.
ಹೆಮ್ಮೆಯ ಗಾಯಕನಿಗೆ ವಿಶೇಷ ನಮನ!
ಸಾಮಾನ್ಯವಾಗಿ ದೊಡ್ಡ ಗಣೇಶ ಮೂರ್ತಿಗಳು ಅಂದ್ರೆ ಮುಂಬೈ ಅಥವಾ ಕರ್ನಾಟಕ ನೆನಪಿಗೆ ಬರುತ್ತದೆ. ಆದರೆ, ಈಗ ಅಸ್ಸಾಂನ ಗುವಾಹಟಿಯಲ್ಲೂ ಬೃಹತ್ ಗಾತ್ರದ ಗಣೇಶನ ಮೂರ್ತಿಗಳು ಹಬ್ಬದ ಕಳೆ ಹೆಚ್ಚಿಸುತ್ತಿವೆ. ಈ ಬಗ್ಗೆ ಕ್ಲಬ್ ಕಾರ್ಯದರ್ಶಿ ಸಿ. ಗೋವಿಂದ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಕುತೂಹಲಕಾರಿ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ನಾವು ಈ ಹಿಂದೆ 41 ಅಡಿ ಮತ್ತು 35 ಅಡಿ ಎತ್ತರದ ಗಣೇಶನ ಪ್ರತಿಮೆಗಳನ್ನು ಸ್ಥಾಪಿಸಿದ್ದೇವೆ. ಆದರೆ, ಈ ವರ್ಷ ನಮ್ಮ ಉತ್ಸಾಹ ಮತ್ತಷ್ಟು ಹೆಚ್ಚಾಗಿದ್ದು, ಬರೋಬ್ಬರಿ 45 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ಸ್ಥಾಪಿಸುತ್ತಿದ್ದೇವೆ ಎಂದು ಅವರು ಖುಷಿಯಿಂದ ತಿಳಿಸಿದ್ದಾರೆ.
ಅಂದಹಾಗೆ, ಈ ಬಾರಿಯ ಉತ್ಸವಕ್ಕೆ ಒಂದು ವಿಶೇಷ ಥೀಮ್ ಕೂಡ ಇದೆ. ಹೌದು, ಅಸ್ಸಾಂನ ಜನಪ್ರಿಯ ಗಾಯಕ ಹಾಗೂ ದಿಗ್ಗಜ ವ್ಯಕ್ತಿತ್ವವಾಗಿರುವ ಜುಬಿನ್ ದಾ (Zubeen Garg) ಅವರಿಗೆ ಈ ಬಾರಿಯ ಗಣೇಶೋತ್ಸವವನ್ನು ಸಮರ್ಪಿಸಲಾಗಿದೆ. ಅವರ ಸಾಧನೆಯನ್ನು ಸ್ಮರಿಸುತ್ತಾ, ಗುವಾಹಟಿ ಹಾಗೂ ಇಡೀ ಅಸ್ಸಾಂನ ಜನರು ಈ ಹಬ್ಬವನ್ನು ಸಂಭ್ರಮದಿಂದ ಆನಂದಿಸಬೇಕು ಎನ್ನುವುದು ಆಯೋಜಕರ ಆಶಯವಾಗಿದೆ ಎಂದಿದ್ದಾರೆ.
7 ದಿನಗಳ ಕಾಲ ನಡೆಯಲಿದೆ ಅದ್ದೂರಿ ಸಂಭ್ರಮ
ಸಾಮಾನ್ಯವಾಗಿ ಗಣೇಶ ಹಬ್ಬ ಎಂದರೆ ಒಂದೆರಡು ದಿನಗಳು ಅಥವಾ ಹತ್ತು ದಿನಗಳು ಎಂಬ ಲೆಕ್ಕಾಚಾರವಿರುತ್ತದೆ. ಆದರೆ ಗುವಾಹಟಿಯ ಈ ವಿಶೇಷ ಸ್ಥಳದಲ್ಲಿ ಸತತ 7 ದಿನಗಳ ಕಾಲ ಹಬ್ಬದ ವಾತಾವರಣ ಕಳೆಗಟ್ಟಲಿದೆ. ಸಂಘದ ಸದಸ್ಯರಾದ ಡಿ.ಕೆ. ಕಾಮರಾಜು ಈ ಬಗ್ಗೆ ಮಾತನಾಡಿ, ನಮ್ಮ ಗಣೇಶ ಚತುರ್ಥಿ ಕಾರ್ಯಕ್ರಮವು ಸೆಪ್ಟೆಂಬರ್ 14 ರಿಂದ 20 ರವರೆಗೆ ಒಟ್ಟು 7 ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸ್ಥಳೀಯ ಶಾಸಕರು, ಸಂಸದರು ಹಾಗೂ ಹಲವು ಸಚಿವರನ್ನು ಸಹ ಆಹ್ವಾನಿಸಲಾಗಿದೆ ಎಂದಿದ್ದಾರೆ.
ಯಾರು ಈ ಜುಬಿನ್ ಗಾರ್ಗ್?
ಅಸ್ಸಾಂನ ಹೆಮ್ಮೆಯ ಸಾಂಸ್ಕೃತಿಕ ಐಕಾನ್ ಮತ್ತು ಜನಪ್ರಿಯ ಹಿನ್ನೆಲೆ ಗಾಯಕ ಜುಬಿನ್ ಗಾರ್ಗ್ (Zubeen Garg) ಭಾರತೀಯ ಸಂಗೀತ ರಂಗದಲ್ಲಿ ಅಳಿಸಲಾಗದ ಮುದ್ರೆ ಒತ್ತಿದ ದಿಗ್ಗಜರಾಗಿದ್ದಾರೆ. ನವೆಂಬರ್ 18, 1972 ರಂದು ಅಸ್ಸಾಂನಲ್ಲಿ ಜನಿಸಿದ ಇವರು, ಕೇವಲ ಗಾಯಕರಾಗಿ ಮಾತ್ರವಲ್ಲದೆ ಅತ್ಯುತ್ತಮ ಸಂಗೀತ ನಿರ್ದೇಶಕ, ಗೀತರಚನೆಕಾರ, ನಟ ಹಾಗೂ ಚಲನಚಿತ್ರ ನಿರ್ದೇಶಕರಾಗಿ ಬಹುಮುಖ ಪ್ರತಿಭೆಯನ್ನು ಮೆರೆದಿದ್ದರು.
ಬಾಲಿವುಡ್‌ನ ಬ್ಲಾಕ್‌ಬಸ್ಟರ್ 'ಗ್ಯಾಂಗ್‌ಸ್ಟರ್' ಚಿತ್ರದ 'ಯಾ ಅಲಿ' (Ya Ali) ಹಾಡಿನ ಮೂಲಕ ಇವರು ಇಡೀ ದೇಶದಾದ್ಯಂತ ಭಾರಿ ಜನಪ್ರಿಯತೆ ಗಳಿಸಿದರು. ಅಸ್ಸಾಮಿ ಮತ್ತು ಹಿಂದಿ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಇವರು, ಅಸ್ಸಾಂನ ಗಲ್ಲಿ ಗಲ್ಲಿಯಲ್ಲೂ ಮನೆಮಾತಾಗಿದ್ದರು ಮತ್ತು ಯುವಜನತೆಯ ಆರಾಧ್ಯ ದೈವವಾಗಿದ್ದರು. ಸಂಗೀತದ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿದ್ದ ಜುಬಿನ್ ಗಾರ್ಗ್, ಅಸ್ಸಾಂನ ಜನರ ಪ್ರೀತಿ ಹಾಗೂ ಗೌರವಕ್ಕೆ ಪಾತ್ರರಾಗಿ 'ಜುಬಿನ್ ದಾ' ಎಂದೇ ಕರೆಯಲ್ಪಡುತ್ತಿದ್ದರು.
ದುರದೃಷ್ಟವಶಾತ್, 2025ರ ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ನಡೆದ ದುರ್ಘಟನೆಯೊಂದರಲ್ಲಿ ಅವರು ಅನಿರೀಕ್ಷಿತವಾಗಿ ನಿಧನರಾದರು. ಅವರ ಅಗಲಿಕೆ ಇಡೀ ಅಸ್ಸಾಂ ರಾಜ್ಯಕ್ಕೆ ಮತ್ತು ಭಾರತೀಯ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಮಧುರ ಕಂಠದ ಮೂಲಕ ಮತ್ತು ಅವರ ಕೊಡುಗೆಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಅಮರರಾಗಿದ್ದಾರೆ, (ಏಜನ್ಸೀಸ್).