ಚೆನ್ನೈ: ಕರೂರ್ ಕಾಲ್ತುಳಿತ ದುರಂತದ ಬಳಿಕ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ರ ಮೊದಲ ಸಾರ್ವಜನಿಕ ಸಭೆ ಪುದುಚೇರಿಯಲ್ಲಿ ನಡೆದಿದ್ದು, ಕಾರ್ಯಕ್ರಮದ ಸಂದರ್ಭದಲ್ಲಿ ಪಕ್ಷದ ನಾಯಕ ಬುಸ್ಸಿ ಆನಂದ್ ಸ್ಥಳಾವಕಾಶವಿದೆ ಎಂದು ಹೆಚ್ಚಿನ ಜನರನ್ನು ಆಹ್ವಾನಿಸಿರುವ ಘಟನೆ ಸಂಭವಿಸಿದೆ. ಈ ವೇಳೆ ಪೊಲೀಸ್ ವರಿಷ್ಠಾಧಿಕಾರಿ ಇಶಾ ಸಿಂಗ್, ಆನಂದ್ ಕೈಲಿದ್ದ ಮೈಕ್ರೊಫೋನ್ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕಾರ್ಯಕ್ರಮ ಪ್ರಾರಂಭವಾಗುವ ಸಂದರ್ಭದಲ್ಲಿ ಬುಸ್ಸಿ ಆನಂದ್, ಸ್ಥಳವಿದೆ ಒಳಗೆ ಬನ್ನಿ ಎಂದು ಜನರನ್ನು ಒಳಗೆ ಆಹ್ವಾನಿಸುತ್ತಿದ್ದರು, ಈ ವೇಳೆ ಮಧ್ಯಪ್ರವೇಶಿಸಿದ ಐಪಿಎಸ್ ಅಧಿಕಾರಿ ಸಿಂಗ್, ಕೂಡಲೇ ಮೈಕ್ರೊಫೋನ್ ಕಸಿದುಕೊಂಡು ಅವರ ಭಾಷಣವನ್ನು ತಡೆದಿರುವ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ 40 ಜನರು ಸತ್ತಿದ್ದಾರೆ ಎಂದು ಹೇಳುತ್ತಿರುವುದು ಕೇಳಿಸಿದೆ. ಪೊಲೀಸರು ಸದರಿ ಕಾರ್ಯಕ್ರಮಕ್ಕೆ 5000 ಸಾವಿರ ಜನಕ್ಕೆ ಮಾತ್ರ ಅವಕಾಶ ನೀಡಿದ್ದರು.
ಕರೂರ್ ದುರಂತದ ನಂತರ ಪುದುಚೇರಿಯಲ್ಲಿ ನಡೆದ ಈ ಸಭೆಯನ್ನು ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್‌ನಲ್ಲಿ ಆಯೋಜಿಸಲಾಗಿತ್ತು. ಅಧಿಕಾರಿಗಳು ರೋಡ್ ಶೋಗೆ ಅನುಮತಿ ನಿರಾಕರಿಸಿದ್ದು, ಜನಸಂದಣಿಯನ್ನು ಮಿತಿಗೊಳಿಸಿ, QR-ಕೋಡ್ ಪಾಸ್ ಇರುವವರಿಗೆ ಮಾತ್ರ ಅನುಮತಿ ನೀಡಿದ್ದರು. ಭದ್ರತಾ ಭಯವನ್ನು ಹೆಚ್ಚಿಸುತ್ತಾ, ಕಾರ್ಯಕ್ರಮದ ಸ್ಥಳಕ್ಕೆ ಬಂದೂಕು ಹಿಡಿದುಕೊಂಡು ಬಂದ ವ್ಯಕ್ತಿಯನ್ನು ಬಂಧಿಸಲಾಯಿತು.
ಬಂದೂಕು ಹಿಡಿದುಕೊಂಡು ಬಂದಿದ್ದ ಭೂಪ..
ಪುದುಚೇರಿಯಲ್ಲಿ ಆಯೋಜಿಸಿದ್ದ ತಮಿಳಗ ವೆಟ್ರಿ ಕಳಗಂ ಪಕ್ಷದ (ಟಿವಿಕೆ) ಸಾರ್ವಜನಿಕ ಸಭೆಯ ಸ್ಥಳಕ್ಕೆ ಬಂದೂಕು ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆಂದು ವರದಿಯಾಗಿದ್ದು, ಆ ವ್ಯಕ್ತಿಯನ್ನು ಟಿವಿಕೆ ಪಕ್ಷದ ಶಿವಗಂಗೈ ಜಿಲ್ಲಾ ಕಾರ್ಯದರ್ಶಿ ಪ್ರಭು ಎನ್ನುವವರ ಗನ್ ಮ್ಯಾನ್ ಡೇವಿಡ್ ಎಂದು ತಿಳಿದುಬಂದಿದೆ(ಏಜೆನ್ಸೀಸ್).