ADR Report | ಎಡಿಆರ್ ವರದಿಯಲ್ಲಿ ಬಹಿರಂಗವಾಯ್ತು ಆಘಾತಕಾರಿ ಸತ್ಯ!  
ದೇಶ

ಶೇ. 50 ಕ್ಕಿಂತ ಕಡಿಮೆ ವೋಟ್ ಪಡೆದರೂ ಬಂಗಾಳ ವಿಧಾನಸಭೆ ಸೇರಿದ್ರಾ 118 ಶಾಸಕರು..? ಎಡಿಆರ್ ವರದಿಯಲ್ಲಿ ಬಹಿರಂಗವಾಯ್ತು ಆಘಾತಕಾರಿ ಸತ್ಯ! | ADR Report

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಲ್ಲಿ, ಸುಮಾರು ಶೇಕಡಾ 40 ರಷ್ಟು ಶಾಸಕರು ತಮ್ಮ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಶೇಕಡಾ 50 ಕ್ಕಿಂತ ಕಡಿಮೆ ಮತಗಳನ್ನು ಪಡೆದು ಜಯಗಳಿಸಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR Report) ಮತ್ತು ವೆಸ್ಟ್ ಬೆಂಗಾಲ್ ಎಲೆಕ್ಷನ್ ವಾಚ್ ಜಂಟಿಯಾಗಿ ನಡೆಸಿರುವ ಚುನಾವಣಾ ವಿಶ್ಲೇಷಣಾ ವರದಿಯಿಂದ ತಿಳಿದುಬಂದಿದೆ.
ರಾಜ್ಯದ ಒಟ್ಟು 294 ವಿಧಾನಸಭಾ ಕ್ಷೇತ್ರಗಳ ಪೈಕಿ ಫಾಲ್ತಾ ಕ್ಷೇತ್ರವನ್ನು ಹೊರತುಪಡಿಸಿ, ಉಳಿದ 293 ಕ್ಷೇತ್ರಗಳ ಫಲಿತಾಂಶವನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದ್ದು, ವರದಿಯ ಪ್ರಕಾರ, ಮೇ 4 ರಂದು ಪ್ರಕಟವಾದ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ ಶೇಕಡಾ 93.7 ರಷ್ಟು ದಾಖಲೆ ಪ್ರಮಾಣದ ಮತದಾನವಾಗಿದೆ. ಇದು 2021ರ ಚುನಾವಣೆಯ ಮತದಾನದ ಪ್ರಮಾಣಕ್ಕೆ (ಶೇ. 82.3) ಹೋಲಿಸಿದರೆ ಭಾರಿ ಏರಿಕೆಯಾಗಿದೆ.

ಶೇಕಡಾ 50ಕ್ಕಿಂತ ಕಡಿಮೆ ಮತ ಪಡೆದವರು ಎಷ್ಟು ಜನ..?

ವಿಶ್ಲೇಷಣೆಗೆ ಒಳಪಡಿಸಲಾದ 293 ವಿಜೇತ ಅಭ್ಯರ್ಥಿಗಳಲ್ಲಿ, 175 ಶಾಸಕರು (ಶೇ. 60) ತಮ್ಮ ಕ್ಷೇತ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚು (ಶೇ. 50ಕ್ಕೂ ಅಧಿಕ) ಮತಗಳನ್ನು ಪಡೆದು ಗೆದ್ದಿದ್ದಾರೆ. ಆದರೆ, ಉಳಿದ 118 ಅಭ್ಯರ್ಥಿಗಳು ಶೇಕಡಾ 50 ಕ್ಕಿಂತ ಕಡಿಮೆ ಮತಗಳನ್ನಷ್ಟೇ ಪಡೆದಿದ್ದರೂ, ಎದುರಾಳಿಗಳಿಗಿಂತ ಮುನ್ನಡೆ ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಬಾರಿ ವಿಜೇತ ಅಭ್ಯರ್ಥಿಗಳು ಪಡೆದ ಸರಾಸರಿ ಮತಗಳ ಪ್ರಮಾಣ ಶೇಕಡಾ 50.43 ರಷ್ಟಿದೆ.

ಅಪರಾಧ ಹಿನ್ನೆಲೆಯುಳ್ಳ ಶಾಸಕರ ರಿಪೋರ್ಟ್ ಕಾರ್ಡ್

ಚುನಾವಣೆಯಲ್ಲಿ ಗೆದ್ದಿರುವ ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಮೇಲೆಯೂ ಎಡಿಆರ್ ಕಣ್ಣಿಟ್ಟಿದ್ದು, ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದ 191 ವಿಜೇತರಲ್ಲಿ, 121 ಶಾಸಕರು ಶೇ. 50 ಅಥವಾ ಅದಕ್ಕಿಂತ ಹೆಚ್ಚಿನ ಮತ ಗಳಿಕೆಯೊಂದಿಗೆ ಗೆದ್ದಿದ್ದಾರೆ. ಇವರಲ್ಲಿ 107 ಅಭ್ಯರ್ಥಿಗಳು ಯಾವುದೇ ಅಪರಾಧ ಹಿನ್ನೆಲೆ ಇಲ್ಲದವರನ್ನು ಸೋಲಿಸಿದ್ದಾರೆ. 
ರಾಜಕಾರಣದಲ್ಲಿ ಶ್ರೀಮಂತರ ಪ್ರಭಾವ ಈ ಬಾರಿಯೂ ಮುಂದುವರಿದಿದ್ದು, ಚುನಾವಣೆಯಲ್ಲಿ ಗೆದ್ದು ಬೀಗಿರುವ 179 ಕೋಟ್ಯಾಧಿಪತಿ ಶಾಸಕರಲ್ಲಿ, 62 ಜನರು ತಮಗಿಂತ ಬಡವರಾದ (ಕೋಟ್ಯಾಧಿಪತಿ ಅಲ್ಲದ) ಎದುರಾಳಿಗಳನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ಇನ್ನು ತೀವ್ರ ಪೈಪೋಟಿ ನಡೆದ ಕ್ಷೇತ್ರಗಳ ಪೈಕಿ, ಐದು ಕ್ಷೇತ್ರಗಳಲ್ಲಿ ವಿಜೇತ ಅಭ್ಯರ್ಥಿಗಳ ಗೆಲುವಿನ ಅಂತರ 1,000 ಮತಗಳಿಗಿಂತಲೂ ಕಡಿಮೆ ಇದೆ ಎನ್ನಲಾಗಿದ್ದು, ಕೇವಲ ಮೂರು ಅಭ್ಯರ್ಥಿಗಳು ಮಾತ್ರ ಶೇ. 40 ಕ್ಕಿಂತ ಹೆಚ್ಚಿನ ಮತಗಳ ಬೃಹತ್ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ನೋಟಾ (NOTA) ಪಾಲಾದ 5 ಲಕ್ಷ ಮತಗಳು!

ಯಾವುದೇ ಅಭ್ಯರ್ಥಿ ಇಷ್ಟವಿಲ್ಲದಿದ್ದಾಗ ಚಲಾಯಿಸುವ ನೋಟಾ (NOTA) ಆಯ್ಕೆಯನ್ನು ಈ ಬಾರಿ ಬಂಗಾಳದ ಜನತೆ ಭಾರಿ ಪ್ರಮಾಣದಲ್ಲಿ ಬಳಸಿಕೊಂಡಿದ್ದಾರೆ. ಒಟ್ಟು ಚಲಾವಣೆಯಾದ 6.37 ಕೋಟಿ ಮತಗಳಲ್ಲಿ, ಬರೋಬ್ಬರಿ 4,94,932 (ಶೇ. 0.78) ಮತಗಳು ನೋಟಾ ಪಾಲಾಗಿವೆ ಎಂದು ವರದಿ ತಿಳಿಸಿದೆ(ಏಜೆನ್ಸೀಸ್​).