- ಫೆಬ್ರವರಿ 1 ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ
- ತಂಬಾಕು ಮತ್ತು ಪಾನ್ ಮಸಾಲಾ ಮೇಲಿನ ಹೊಸ ಸುಂಕಗಳು ಜಿಎಸ್‌ಟಿ ದರಕ್ಕಿಂತ ಹೆಚ್ಚಿರುತ್ತವೆ
- ಪಾನ್ ಮಸಾಲಾ, ಸಿಗರೇಟ್, ತಂಬಾಕು ಮತ್ತು ಉತ್ಪನ್ನಗಳ ಮೇಲೆ ಶೇ. 40 ರಷ್ಟು ಜಿಎಸ್‌ಟಿ
ನವದೆಹಲಿ: ಫೆಬ್ರವರಿ 1 ರಿಂದ ತಂಬಾಕು (Tobacco) ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲೆ ಹೊಸ ಸೆಸ್ ವಿಧಿಸಲಾಗುವುದು ಎಂದು ಸರ್ಕಾರ ಬುಧವಾರ (ಡಿ.31) ಅಧಿಸೂಚನೆ ಹೊರಡಿಸಿದೆ.
ತಂಬಾಕು ಮತ್ತು ಪಾನ್ ಮಸಾಲಾ ಮೇಲಿನ ಹೊಸ ಸುಂಕಗಳು ಜಿಎಸ್‌ಟಿ ದರಕ್ಕಿಂತ ಹೆಚ್ಚಿರುತ್ತವೆ ಮತ್ತು ಪ್ರಸ್ತುತ ಅಂತಹ ಪಾಪದ ಸರಕುಗಳ ಮೇಲೆ ವಿಧಿಸಲಾಗುತ್ತಿರುವ ಪರಿಹಾರ ಸೆಸ್ನ್ನು ಬದಲಾವಣೆಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ಫೆಬ್ರವರಿ 1 ರಿಂದ, ಪಾನ್ ಮಸಾಲಾ, ಸಿಗರೇಟ್, ತಂಬಾಕು ಮತ್ತು ಉತ್ಪನ್ನಗಳ ಮೇಲೆ ಶೇ. 40 ರಷ್ಟು ಜಿಎಸ್‌ಟಿ ದರವನ್ನು ಹೆಚ್ಚಿಸಲಾಗುವುದು ಮತ್ತು ಬೀಡಿಗಳ ಮೇಲೆ ಶೇ. 18 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯನ್ನು ಏರಿಸಲಾಗುವುದೆಂದು ಎಂದು ಸರ್ಕಾರಿ ಅಧಿಸೂಚನೆ ತಿಳಿಸಿದೆ.
ಇದರ ಜೊತೆಗೆ ಪಾನ್ ಮಸಾಲಾ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸುವ ಜತೆಗೆ ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸಲಾಗುವುದು ಎಂದು ಹೇಳಲಾಗಿದೆ.
ಹಣಕಾಸು ಸಚಿವಾಲಯವು ಬಾಯಲ್ಲಿ ಅಗಿಯುವ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳ ನಿಯಮ(ಸಾಮರ್ಥ್ಯ ನಿರ್ಣಯ ಮತ್ತು ಸುಂಕ ಸಂಗ್ರಹ), 2026 ರ ಅಡಿಯಲ್ಲಿ ಈ ಅಧಿಸೂಚನೆಯನ್ನು ಹೊರಡಿಸಿದೆ.
ಪಾನ್ ಮಸಾಲಾ ತಯಾರಿಕೆ ಮತ್ತು ತಂಬಾಕಿನ ಮೇಲಿನ ಅಬಕಾರಿ ಸುಂಕದ ಮೇಲೆ ಹೊಸ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲು ಅನುಮತಿಸುವ ಎರಡು ಮಸೂದೆಗಳನ್ನು ಸಂಸತ್ತು ಡಿಸೆಂಬರ್‌ನಲ್ಲಿ ಅನುಮೋದಿಸಿತ್ತು.
ಈ ಸುಂಕಗಳ ಅನುಷ್ಠಾನ ದಿನಾಂಕವಾಗಿ ಫೆಬ್ರವರಿ 1 ನ್ನು ಸರ್ಕಾರ ಬುಧವಾರ ಪ್ರಕಟಿಸಿದೆ. ಪ್ರಸ್ತುತ ಅತ್ಯಂತ ಕಡಿಮೆ ದರದಲ್ಲಿ ಮಾರುಕಟ್ಟೆಯಲ್ಲಿರುವ ತಂಬಾಕು ಉತ್ಪನ್ನಗಳ ನೂತನ ದರವು ಫೆಬ್ರವರಿ 1 ರಿಂದ ಮುಗಿಲು ಮುಟ್ಟುವ ಸಾಧ್ಯತೆ ಇದೆ,(ಏಜನ್ಸೀಸ್).