Child Assault (ಸಾಂದರ್ಭಿಕ ಚಿತ್ರ)
ಮುಂಬೈ: ಆಟೋ ಚಾಲಕನೊಬ್ಬ ತಂದೆಯ ಮೇಲಿನ ಸಿಟ್ಟಿಗೆ, ಅವನ ನಾಲ್ಕು ವರ್ಷದ ಮಗನ ತಲೆಗೆ ಕಬ್ಬಿಣದ ರಾಡ್‌ನಿಂದ ಮನಬಂದಂತೆ ಹಲ್ಲೆ ನಡೆಸಿರುವ (Child Assault ಅಮಾನವೀಯ ಘಟನೆ ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಮಂಗಳವಾರ (ಮಾ.31) ನಡೆದಿದೆ.
ಘಟನೆಯ ಹಿನ್ನಲೆ
ಪೊಲೀಸರ ಮಾಹಿತಿ ಪ್ರಕಾರ, ಸಂದೀಪ್ ಪವಾರ್ ಎಂದು ಗುರುತಿಸಿಕೊಳ್ಳುವ ಆಟೋಚಾಲಕ ಮತ್ತು ಮಗುವಿನ ತಂದೆ ಅತುಲ್ ನಡುವೆ ಸಣ್ಣ ವಿಷಯಕ್ಕೆ ಗಲಾಟೆ ಸಂಭವಿಸಿತ್ತು. ಆದಾಗ್ಯೂ, ಈ ಜಗಳದ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ಪವಾರ್ ಹೊಂಚು ಹಾಕುತ್ತಿದ್ದ ಎನ್ನಲಾಗಿದೆ.
ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಅತುಲ್ ಅವರ ನಾಲ್ಕು ವರ್ಷದ ಮಗ ಹೊರಗಡೆ ನಿಲ್ಲಿಸಿದ ಆಟೋರಿಕ್ಷಾದಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಇದನ್ನು ಗಮನಿಸಿದ ಸಂದೀಪ್ ಬಾಲಕನನ್ನು ಆಟೋದಿಂದ ಹೊರಗೆಳೆದು ಎತ್ತಿ ನೆಲಕ್ಕೆ ಬಡಿದಿದ್ದಾನೆ. ನಂತರ ಅವನನ್ನು ಕಟ್ಟಡದ ಒಳಗೆ ಕರೆದೊಯ್ದು ಕಬ್ಬಿಣದ ರಾಡ್‌ನಿಂದ ತಲೆಗೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಬಾಲಕನನ್ನು ರಕ್ಷಿಸಲು ಬಂದ ಅಜ್ಜಿಯ ಮೇಲೆ ಹಲ್ಲೆ ಮಾಡಿ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ತೀವ್ರವಾಗಿ ಗಾಯಗೊಂಡಿರುವ ಬಾಲಕನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಬಾಲಕನ ಸ್ಥಿತಿ ಗಂಭೀರವಾದ ಕಾರಣ ಮೀರಾರೋಡ್‌ನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ನಡೆದ ಬೆನ್ನಲ್ಲೇ, ಪೊಲೀಸರು ಆರೋಪಿ ಸಂದೀಪ್ ಪವಾರ್ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 109(1) ಅಡಿಯಲ್ಲಿ ಕೊಲೆ ಯತ್ನ ಹಾಗೂ ಜುವೆನೈಲ್ ಜಸ್ಟಿಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ (ಏಜೆನ್ಸೀಸ್).