4-year limit for student visas
ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಮುಂದಾಗುವ ವಿವಿಧ ದೇಶಗಳ ಲಕ್ಷಾಂತರ ವಿದ್ಯಾರ್ಥಿಗಳ ಪೈಕಿ ಭಾರತೀಯರದೇ ಅತಿ ದೊಡ್ಡ ಸಂಖ್ಯೆ. ಪ್ರತಿ ವರ್ಷ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ, ಪಿಎಚ್ಡಿ ಹಾಗೂ ಸಂಶೋಧನಾ ಕೋರ್ಸ್ಗಳಿಗಾಗಿ ಅಮೆರಿಕದ ವಿಶ್ವವಿದ್ಯಾಲಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಅಮೆರಿಕ ಸರ್ಕಾರ ವಿದ್ಯಾರ್ಥಿ ವೀಸಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದ್ದು, ಈ ಸುದ್ದಿ ಜಾಗತಿಕ ಶಿಕ್ಷಣ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ ಜಾರಿಯಲ್ಲಿರುವ ವ್ಯವಸ್ಥೆಯ ಬದಲಿಗೆ ವಿದ್ಯಾರ್ಥಿ ವೀಸಾಗಳಿಗೆ ಗರಿಷ್ಠ 4 ವರ್ಷದ ಅವಧಿ ನಿಗದಿಪಡಿಸುವ ಪ್ರಸ್ತಾವನೆ ಗಮನ ಸೆಳೆದಿದೆ. ಭಾರತೀಯ ವಿದ್ಯಾರ್ಥಿಗಳ ಮೇಲೆ ಅದರಿಂದಾಗುವ ಪರಿಣಾಮಗಳೇನು ಎನ್ನುವುದರ ವಿಶ್ಲೇಷಣೆ ಇಲ್ಲಿದೆ.
ಈಗಿನ ವ್ಯವಸ್ಥೆ ಹೇಗಿದೆ?: ಪ್ರಸ್ತುತ ಅಮೆರಿಕದಲ್ಲಿ ಹೆಚ್ಚಿನ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಎಫ್-1 ವಿದ್ಯಾರ್ಥಿ ವೀಸಾ ಮೂಲಕ ಶಿಕ್ಷಣ ಪಡೆಯುತ್ತಾರೆ. ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಡ್ಯುರೇಶನ್ ಆಫ್ ಸ್ಟೇಟಸ್ ಎಂಬ ನಿಯಮದಡಿ ಆ ರಾಷ್ಟ್ರದಲ್ಲಿ ಉಳಿಯಲು ಅವಕಾಶ ಹೊಂದಿರುತ್ತಾರೆ. ಅಂದರೆ, ಮಾನ್ಯತೆ ಪಡೆದ ಶಿಕ್ಷಣ ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡಿರುವವರೆಗೆ ಹಾಗೂ ವೀಸಾ ನಿಯಮಗಳನ್ನು ಪಾಲಿಸುತ್ತಿರುವವರೆಗೆ ಆ ವಿದ್ಯಾರ್ಥಿ ಅಮೆರಿಕದಲ್ಲಿ ಉಳಿಯಬಹುದು. ಕೋರ್ಸ್ ಪೂರ್ಣಗೊಳ್ಳಲು 4 ವರ್ಷಕ್ಕಿಂತ ಹೆಚ್ಚು ಸಮಯ ಹಿಡಿದರೂ ಸಮಸ್ಯೆಯಾಗುವುದಿಲ್ಲ. ಪಿಎಚ್ಡಿ, ವೈದ್ಯಕೀಯ, ಸಂಶೋಧನಾ ಹಾಗೂ ಇತರ ದೀರ್ಘಾವಧಿಯ ಕಾರ್ಯಕ್ರಮಗಳಿಗೂ ಇದು ಅನ್ವಯಿಸುತ್ತದೆ. ಈ ಕಾರಣದಿಂದ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಅವಧಿಯ ಬಗ್ಗೆ ಹೆಚ್ಚಿನ ಆತಂಕವಿಲ್ಲದೆ ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಾಧ್ಯವಾಗುತ್ತಿದೆ.
ಹೊಸ ಪ್ರಸ್ತಾವನೆಯಲ್ಲೇನಿದೆ?
ಹೊಸ ವೀಸಾ ನಿಯಮದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಗರಿಷ್ಠ 4 ವರ್ಷದ ವಾಸ್ತವ್ಯದ ಮಿತಿ ವಿಧಿಸುವ ಸಾಧ್ಯತೆ ಇದೆ. ನಾಲ್ಕು ವರ್ಷಗಳ ನಂತರ ವಿದ್ಯಾರ್ಥಿಗಳು ಅಮೆರಿಕದಲ್ಲಿ ಮುಂದುವರಿಯಲು ಹೆಚ್ಚುವರಿ ಅನುಮತಿ ಅಥವಾ ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದು ಈಗಿನ ಡ್ಯುರೇಶನ್ ಆಫ್ ಸ್ಟೇಟಸ್ ವ್ಯವಸ್ಥೆಯಿಂದ ಸಂಪೂರ್ಣ ಭಿನ್ನ. ವಿದ್ಯಾರ್ಥಿಯ ಕೋರ್ಸ್ ಮುಂದುವರಿದಿದ್ದರೂ 4 ವರ್ಷಗಳ ಗಡುವು ಮುಗಿದರೆ ವೀಸಾ ವಿಸ್ತರಣೆ ಮಾಡಿಸಲು ಅಲೆದಾಡಬೇಕಾಗುತ್ತದೆ. ಕೆಲವು ದೇಶಗಳ ವಿದ್ಯಾರ್ಥಿಗಳು ಅಥವಾ "ವಿಶೇಷ ಪರಿಸ್ಥಿತಿ'ಯಲ್ಲಿ ಇರುವವರು ಇನ್ನಷ್ಟು ಕಟ್ಟುನಿಟ್ಟಿನ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ.
ವೀಸಾ ವಿಸ್ತರಣೆಯ ಸವಾಲುಗಳು
ಹೊಸ ವೀಸಾ ನಿಯಮದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಗರಿಷ್ಠ 4 ವರ್ಷದ ವಾಸ್ತವ್ಯದ ಮಿತಿ ವಿಧಿಸುವ ಸಾಧ್ಯತೆ ಇದೆ. ನಾಲ್ಕು ವರ್ಷಗಳ ನಂತರ ವಿದ್ಯಾರ್ಥಿಗಳು ಅಮೆರಿಕದಲ್ಲಿ ಮುಂದುವರಿಯಲು ಹೆಚ್ಚುವರಿ ಅನುಮತಿ ಅಥವಾ ವಿಸ್ತರಣೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದು ಈಗಿನ ಡ್ಯುರೇಶನ್ ಆಫ್ ಸ್ಟೇಟಸ್ ವ್ಯವಸ್ಥೆಯಿಂದ ಸಂಪೂರ್ಣ ಭಿನ್ನ. ವಿದ್ಯಾರ್ಥಿಯ ಕೋರ್ಸ್ ಮುಂದುವರಿದಿದ್ದರೂ 4 ವರ್ಷಗಳ ಗಡುವು ಮುಗಿದರೆ ವೀಸಾ ವಿಸ್ತರಣೆ ಮಾಡಿಸಲು ಅಲೆದಾಡಬೇಕಾಗುತ್ತದೆ. ಕೆಲವು ದೇಶಗಳ ವಿದ್ಯಾರ್ಥಿಗಳು ಅಥವಾ "ವಿಶೇಷ ಪರಿಸ್ಥಿತಿ'ಯಲ್ಲಿ ಇರುವವರು ಇನ್ನಷ್ಟು ಕಟ್ಟುನಿಟ್ಟಿನ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ.
ವಿಶ್ವವಿದ್ಯಾಲಯಗಳ ಆತಂಕ
ಅಮೆರಿಕದ ಅನೇಕ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ತಜ್ಞರು ಈ ರೀತಿಯ ಬದಲಾವಣೆಗಳ ಬಗ್ಗೆ ಹಿಂದೆಯೂ ಆತಂಕ ವ್ಯಕ್ತಪಡಿಸಿದ್ದರು. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಅಮೆರಿಕದ ಶಿಕ್ಷಣ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುತ್ತಾರೆ. ಅವರಿಂದ ವಿಶ್ವವಿದ್ಯಾಲಯಗಳ ಆದಾಯ ಹೆಚ್ಚಾಗುತ್ತದೆ. ಸಂಶೋಧನಾ ಚಟುವಟಿಕೆಗಳಿಗೂ ಅವರು ನೆರವಾಗುತ್ತಾರೆ. ವೈವಿಧ್ಯಮಯ ಶೈಕ್ಷಣಿಕ ವಾತಾವರಣ ನಿರ್ಮಾಣವಾಗುತ್ತದೆ. ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರಗಳಿಗೆ ಮಾನವ ಸಂಪನ್ಮೂಲವೂ ಸಿಕ್ಕಂತಾಗುತ್ತದೆ ಎಂಬುದು ಶಿಕ್ಷಣ ತಜ್ಞರ ಅಭಿಮತ. ಈ ಹೆಚ್ಚುವರಿ ವೀಸಾ ಪ್ರಕ್ರಿಯೆಗಳಿಂದಾಗಿ ವಿದ್ಯಾರ್ಥಿಗಳು ಬೇರೆ ದೇಶಗಳತ್ತ ಆಕರ್ಷಿತರಾಗುವ ಅಪಾಯವಿದೆ ಎಂಬ ಅಭಿಪ್ರಾಯ ಅಮೆರಿಕದ ಶೈಕ್ಷಣಿಕ ವಲಯದಲ್ಲಿ ವ್ಯಕ್ತವಾಗಿದೆ.
ಅಮೆರಿಕದಲ್ಲಿ ಓದು ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳಿಗೆ ಆಪ್ಷನಲ್ ಪ್ರಾಕ್ಟಿಕಲ್ ಟ್ರೇನಿಂಗ್ (ಒಪಿಟಿ) ವ್ಯವಸ್ಥೆಯಡಿ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಸ್ಟೆಮ್ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಧಿಯ ಕೆಲಸದ ಅವಕಾಶವೂ ಲಭ್ಯವಿದೆ. 4 ವರ್ಷದ ಮಿತಿಯು ನೇರವಾಗಿ ಒಪಿಟಿ ವ್ಯವಸ್ಥೆಯನ್ನು ಬದಲಾಯಿಸುವುದಿಲ್ಲ. ಆದರೆ ವಿದ್ಯಾರ್ಥಿಯ ಅಧ್ಯಯನ ಅವಧಿಯಲ್ಲಿಯೇ ಹೆಚ್ಚುವರಿ ವೀಸಾ ಅನುಮತಿಗಳ ಅಗತ್ಯ ಉಂಟಾದರೆ ಭವಿಷ್ಯದ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಪಿಎಚ್ಡಿ ವಿದ್ಯಾರ್ಥಿಗಳು ಮತ್ತು ದೀರ್ಘಾವಧಿಯ ಸಂಶೋಧನಾ ಯೋಜನೆಗಳಲ್ಲಿ ತೊಡಗಿರುವವರಿಗೆ ಆಡಳಿತಾತ್ಮಕ ಸಂಕೀರ್ಣತೆ ಸಮಸ್ಯೆ ತಂದೊಡ್ಡುತ್ತದೆ.
ಅಮೆರಿಕದ ವಲಸೆ ನೀತಿಗಳಲ್ಲಿ ರಾಷ್ಟ್ರೀಯ ಭದ್ರತೆ, ವೀಸಾ ಮೇಲ್ವಿಚಾರಣೆ ಮತ್ತು ವಲಸೆ ನಿಯಂತ್ರಣ ಪ್ರಮುಖ ಅಂಶಗಳಾಗಿವೆ. ಕೆಲವು ನೀತಿನಿರೂಪಕರ ಪ್ರಕಾರ, ನಿಗದಿತ ಅವಧಿಯ ವೀಸಾ ವ್ಯವಸ್ಥೆಯಿಂದ ಸರ್ಕಾರಕ್ಕೆ ವಿದೇಶಿ ನಾಗರಿಕರ ವಾಸ್ತವ್ಯದ ಮೇಲೆ ಹೆಚ್ಚಿನ ನಿಗಾ ಇಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸುವುದು, ವೀಸಾ ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು ಸುಲಭವಾಗುತ್ತದೆ. ಆದರೆ ಇನ್ನು ಕೆಲವರ ಪ್ರಕಾರ, ಈಗಿನ ವ್ಯವಸ್ಥೆಯಲ್ಲಿಯೇ ವಿಶ್ವವಿದ್ಯಾಲಯಗಳು ಮತ್ತು ವಲಸೆ ಅಧಿಕಾರಿಗಳ ಮೂಲಕ ಸಾಕಷ್ಟು ಮೇಲ್ವಿಚಾರಣೆ ನಡೆಯುತ್ತಿದೆ.
ಮುಂದಿನ ದಿನಗಳಲ್ಲಿ ಏನಾಗಬಹುದು?
ಜಾಗತಿಕ ಶೈಕ್ಷಣಿಕ ಮಾರುಕಟ್ಟೆಯಲ್ಲಿ ಅಮೆರಿಕ, ಕೆನಡಾ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ನಡುವೆ ಸ್ಪರ್ಧೆ ಹೆಚ್ಚುತ್ತಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸಲು ವಿಶ್ವವಿದ್ಯಾಲಯಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ ಯಾವುದೇ ಹೊಸ ನಿಯಮ ಜಾರಿಗೊಳಿಸುವಾಗ ಶಿಕ್ಷಣ ಕ್ಷೇತ್ರದ ಅಭಿಪ್ರಾಯವನ್ನೂ ಪರಿಗಣಿಸುವ ಸಾಧ್ಯತೆ ಇದೆ. ಅಂತಿಮ ನಿಯಮಗಳು ಮೂಲ ಪ್ರಸ್ತಾವನೆಗಿಂತ ಭಿನ್ನವಾಗುವ ಸಾಧ್ಯತೆಯೂ ಇದೆ. ಈ ಬದಲಾವಣೆ ಜಾರಿಯಾದರೆ ಸಾಮಾನ್ಯ ಪದವಿ ಅಥವಾ ಸ್ನಾತಕೋತ್ತರ ವಿದ್ಯಾರ್ಥಿಗಳಿಗಿಂತ ದೀರ್ಘಾವಧಿಯ ಪಿಎಚ್ಡಿ ಮತ್ತು ಸಂಶೋಧನಾ ಕಾರ್ಯಕ್ರಮಗಳಲ್ಲಿ ತೊಡಗಿರುವವರ ಮೇಲೆ ಹೆಚ್ಚಿನ ಪರಿಣಾಮ ಆಗುವ ಸಾಧ್ಯತೆ ಇದೆ. ಆದರೆ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಸರ್ಕಾರ, ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ತಜ್ಞರ ನಡುವೆ ಇನ್ನಷ್ಟು ಚರ್ಚೆಗಳು ನಡೆಯುವ ನಿರೀಕ್ಷೆಯಿದೆ. ಹೀಗಾಗಿ ಸದ್ಯಕ್ಕೆ ವಿದ್ಯಾರ್ಥಿಗಳು ಬೆಳವಣಿಗೆಗಳನ್ನು ಗಮನಿಸುತ್ತ ತಮ್ಮ ಶಿಕ್ಷಣ ಯೋಜನೆಗಳನ್ನು ಮುಂದುವರಿಸುವುದು ಸೂಕ್ತ.
ಭಾರತೀಯ ವಿದ್ಯಾರ್ಥಿಗಳು ಈಗ ಏನು ಮಾಡಬೇಕು?
ಹೊಸ ನಿಯಮದ ಬಗ್ಗೆ ಸುದ್ದಿ ಹರಿದಾಡುತ್ತಿರುವುದರಿಂದ ಅನೇಕ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ವಿದ್ಯಾರ್ಥಿಗಳು ಇಷ್ಟು ಬೇಗ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ವೀಸಾ ನೀತಿಗಳಲ್ಲಿ ಯಾವುದೇ ಮಹತ್ವದ ಬದಲಾವಣೆ ಜಾರಿಯಾಗಲು ಸಾಮಾನ್ಯವಾಗಿ ಅಧಿಕೃತ ಪ್ರಕಟಣೆ, ಸಾರ್ವಜನಿಕ ಅಭಿಪ್ರಾಯ ಸಂಗ್ರಹ, ನಿಯಮ ರೂಪಣೆ, ಅನುಷ್ಠಾನ ಪ್ರಕ್ರಿಯೆ ಎಂಬ ಹಲವು ಹಂತಗಳನ್ನು ದಾಟಬೇಕಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಪಡೆಯುವುದು ಮತ್ತು ತಮ್ಮ ವಿಶ್ವವಿದ್ಯಾಲಯಗಳ ಅಂತಾರಾಷ್ಟ್ರೀಯ ವಿದ್ಯಾರ್ಥಿ ಕಚೇರಿಗಳೊಂದಿಗೆ ಸಂಪರ್ಕದಲ್ಲಿರುವುದು ಉತ್ತಮ.