- ಬೈಕ್ಗೆ ಮುಖಾಮುಖಿ ಡಿಕ್ಕಿ ಹೊಡೆದ ಕಾಲೇಜು ಬಸ್ ರಭಸಕ್ಕೆ ನಾಲ್ವರು ವಿದ್ಯಾರ್ಥಿನಿಯರು ದುರ್ಮರಣ
- ಈ ಪೈಕಿ ಉಸಿರು ಚೆಲ್ಲಿದ ನಾಲ್ವರೂ ಸಹ ಒಂದೇ ಕುಟುಂಬದ ಸಹೋದರಿಯರು
- ಅಪಘಾತ ನಡೆದ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದ ಬಸ್ ಚಾಲಕನನ್ನು ಕಡೆಗೂ ಅರೆಸ್ಟ್
ಚೆನ್ನೈ: ಬೈಕ್ಗೆ ಮುಖಾಮುಖಿ ಡಿಕ್ಕಿ ಹೊಡೆದ ಕಾಲೇಜು ಬಸ್ ರಭಸಕ್ಕೆ ನಾಲ್ವರು ವಿದ್ಯಾರ್ಥಿನಿಯರು ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಈ ಪೈಕಿ ನಾಲ್ವರೂ ಸಹ ಒಂದೇ ಕುಟುಂಬದ ಸಹೋದರಿಯರು ಎನ್ನಲಾಗಿದೆ. ಮೈನಡುಗಿಸುವ ಅಪಘಾತದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ನಮಕ್ಕಲ್ ಜಿಲ್ಲೆಯಲ್ಲಿ ಗುರುವಾರ (ಸೆ.3) ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿಪರೀತ ವೇಗದಲ್ಲಿ ಬರುತ್ತಿದ್ದ ಕಾಲೇಜು ಬಸ್, ಬೈಕ್ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಅಪಘಾತ ನಡೆದ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದ 23 ವರ್ಷದ ಬಸ್ ಚಾಲಕನನ್ನು ಕಡೆಗೂ ಪೊಲೀಸರು ಬಂಧಿಸಿದ್ದಾರೆ.
ತಲೆಮರಿಸಿಕೊಂಡಿದ್ದ ಆರೋಪಿ ಚಾಲಕ ಅಂದರ್
ಅಪಘಾತಕ್ಕೆ ಕಾರಣವಾಗಿದ್ದ ಚಾಲಕನನ್ನು ಪ್ರವೀಣ್ ಎಂದು ಗುರುತಿಸಲಾಗಿದೆ. ಪೊಲೀಸರು ದುಡುಕಿನ ಚಾಲನೆ ಮತ್ತು ಸಾವಿಗೆ ಕಾರಣವಾದ ಪ್ರಕರಣ ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಮಿಳುನಾಡಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮೃತರನ್ನು ರಾಸಿಪುರಂನ ತಿರುವಳ್ಳುವರ್ ಸರ್ಕಾರಿ ಕಲಾ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಸುಬಿತಾ ಕಲೈಸೆಲ್ವಿ (19), ಪ್ರಥಮ ಪಿಯು ವಿದ್ಯಾರ್ಥಿ ನಿವೇತಾ (17) ಮತ್ತು 7ನೇ ತರಗತಿ ಓದುತ್ತಿದ್ದ ತನುಶ್ರೀ (12) ಮತ್ತು ಅವರ ದೂರದ ಸಂಬಂಧಿ 6ನೇ ತರಗತಿ ವಿದ್ಯಾರ್ಥಿನಿ ಅಬಿನಯಾ (11) ಮೃತ ದುರ್ದೈವಿಗಳು ಎಂದು ವಿವರಿಸಲಾಗಿದೆ.
ಮೂವರು ದಿನಗೂಲಿ ಕಾರ್ಮಿಕರ ಪುತ್ರಿಯರು
ಮೃತ ನಿವೇತಾ, ತನುಶ್ರೀ ಮತ್ತು ಅಬಿನಯಾ ಎಲಾಚಿಪಾಳಯಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಮೂವರು ಸಹೋದರಿಯರು ಶಂಕರಂಪಾಳಯಂನ ದಿನಗೂಲಿ ಕಾರ್ಮಿಕರಾದ ಶೇಖರ್ ಮತ್ತು ಅಮುಧಾ ಅವರ ಪುತ್ರಿಯರು ಎನ್ನಲಾಗಿದೆ. ಪೊಲೀಸರ ಪ್ರಕಾರ, ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದ ಸುಬಿತಾ, ಸಹೋದರಿಯರನ್ನು ಶಾಲೆಯಿಂದ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬರುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).