ಭಾರತೀಯ ವಾಯುಪಡೆಯ 29ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಹಿರಿಯ ಸೇನಾಧಿಕಾರಿ ಅಶುತೋಷ್ ದೀಕ್ಷಿತ್. 
ದೇಶ

3,500 ಗಂಟೆಗಳ ಹಾರಾಟ, ಕಾರ್ಗಿಲ್ ಯುದ್ಧದ ಹೀರೋ: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಅಶುತೋಷ್ ದೀಕ್ಷಿತ್! Ashutosh Dixit

ನವದೆಹಲಿ: ಹಿರಿಯ ಸೇನಾಧಿಕಾರಿ ಏರ್​ ಮಾರ್ಷಲ್​ ಅಶುತೋಷ್ ದೀಕ್ಷಿತ್​ ಅವರು ಭಾರತೀಯ ವಾಯುಪಡೆಯ ನೂತನ ಮುಖ್ಯಸ್ಥರಾಗಿ ಇಂದು (ಶನಿವಾರ, ಅ.30) ಅಧಿಕಾರನ್ನು ಸ್ವೀಕರಿಸಿದ್ದಾರೆ. ಈ ಮೊದಲು ಏರ್​ ಫೀಲ್ಡ್​ ಮಾರ್ಷಲ್​ ಆಗಿದ್ದ ಎ.ಪಿ. ಸಿಂಗ್​ ಸೇವಾ ನಿವೃತ್ತಿ ಪಡೆದ ಹಿನ್ನಲೆ ಅಶುತೋಷ್ ದೀಕ್ಷಿತ್​ ನೂತನ ಸೇನಾ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.

ಸುಮಾರು 3,500 ಕ್ಕೂ ಅಧಿಕ ಗಂಟೆಗಳ ವಿಮಾನಯಾನ, 20 ಕ್ಕೂ ಹೆಚ್ಚಿನ ಮಿಲಿಟರಿ ಹೆಲಿಕಾಪ್ಟರ್​​ಗಳನ್ನು ಚಲಾಯಿಸಿದ ಅನುಭವ ಹೊಂದಿರುವ ಅಶುತೋಷ್ ದೀಕ್ಷಿತ್​, ಆಪರೇಷನ್​ ಸಿಂಧೂರ್​ ಸಮಯದಲ್ಲಿ ಕೂಡ, ಮಹತ್ವದ ಪಾತ್ರ ವಹಿಸಿದ್ದರು. ಈ ಎಲ್ಲ ಕಾರಣದಿಂದ ಏರ್​ ಮಾರ್ಷಲ್​ ಅಶುತೋಷ್ ದೀಕ್ಷಿತ್​ ಅವರನ್ನು, ಏರ್​ ಫೀಲ್ಡ್​ ಮಾರ್ಷಲ್​ ಹುದ್ದೆಗೆ ಪದುನ್ನೋತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಅಂತೆಯೇ, ವಾಯುಸೇನೆಯಲ್ಲಿ ಸುಮಾರು 43 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿದ ಏರ್​ ಫೀಲ್ಡ್​ ಮಾರ್ಷಲ್​ ಎ.ಪಿ. ಸಿಂಗ್​ ಅವರಿಗೆ ಸಕಲ ಸೇನಾ ಮರ್ಯಾದೆಗಳ ಮೂಲಕ ಬೀಳ್ಕೊಡುಗೆ ನೀಡಲಾಗಿದೆ.

ಯಾರು ಈ ಅಶುತೋಷ್ ದೀಕ್ಷಿತ್​?

ಮೂಲತಃ ಉತ್ತರ ಪ್ರದೇಶ ರಾಜ್ಯದವರಾದ ಅಶುತೋಷ್ ದೀಕ್ಷಿತ್​, ನ್ಯಾಷನಲ್​ ಡಿಫೆನ್ಸ್​ ಅಕಾಡೆಮಿ, ಡಿಫೆನ್ಸ್ ಸ್ಟಾಫ್ ಸರ್ವಿಸ್ ಕಾಲೇಜ್ (ಬಾಂಗ್ಲಾದೇಶ) ಮತ್ತು ನ್ಯಾಷನಲ್ ಡಿಫೆನ್ಸ್ ಕಾಲೇಜ್​ನಲ್ಲಿ ತಮ್ಮ ಮಿಲಿಟರಿ ವಿದ್ಯಾಭ್ಯಾಸ ಪೂರ್ಣಗೊಳಿಸಿ 1986 ರಲ್ಲಿ ಭಾರತೀಯ ವಾಯುಸೇನೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡರು.

ನಂತರ, ಸೇನೆಯಲ್ಲಿ ನಾನಾ ಪ್ರಮುಖ ಹುದ್ದೆಗಳಲ್ಲಿ ದೀಕ್ಷಿತ್​ ಕಾರ್ಯನಿರ್ವಹಿಸಿದ್ದಾರೆ. ಇವರು ಇಲ್ಲಿವರೆಗೆ ಮಿರಾಜ್-2000, ಮಿಗ್, ಕಿರಣ್, ಜಾಗ್ವಾರ್, IL-78, ಹಾಕ್ ಮತ್ತು ತೇಜಸ್‌ ಸೇರಿದಂತೆ ಸುಮಾರು 20 ಕ್ಕೂ ಅಧಿಕ ಸೇನಾ ವಿಮಾನ/ಹೆಲಿಕಾಪ್ಟರ್​ಗಳನ್ನು 3,500 ಗಂಟೆಗಳಿಗೂ ಹೆಚ್ಚಿನ ಅವಧಿಗೆ ಚಾಲನೆ ಮಾಡಿರುವ ಖ್ಯಾತಿ ಇವರದ್ದಾಗಿದೆ.

ಏರ್​ ಫೀಲ್ಡ್​ ಮಾರ್ಷಲ್​ ಅಶುತೋಷ್ ದೀಕ್ಷಿತ್​ ಅವರು ಕಾರ್ಗಿಲ್​ ಯುದ್ಧ, ಆಪರೇಷನ್​ ವಿಜಯ್​, ಆಪರೇಷನ್​ ಸಫೇದ್​ ಸಾಗರ್​ ಹಾಗೂ ಆಪರೇಷನ್​ ಸಿಂಧೂರ್​ ಸಮಯದಲ್ಲಿ ತೋರಿರುವ ಅಧ್ವಿತೀಯ ಸಾಧನೆಗೆ ವಾಯುಸೇನಾ ಮೆಡಲ್​, ವಿಶಿಷ್ಟ ಸೇನಾ ಮೆಡಲ್​, ಅತಿ ವಿಶಿಷ್ಟ ಸೇನಾ ಮೆಡಲ್​, ಪರಮ್​ ವಿಶಿಷ್ಟ ಸೇನಾ ಮೆಡಲ್​ಗಳಿಂದ ಗೌರವಿಸಲಾಗಿದೆ.

ಇವರು ವಾಯುಪಡೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಪ್ರಧಾನ ಕಚೇರಿಯಲ್ಲಿ ಚೀಫ್ಸ್ ಆಫ್ ಸ್ಟಾಫ್ ಕಮಿಟಿ (ಸಿಐಎಸ್‌ಸಿ) ಅಧ್ಯಕ್ಷರಿಗೆ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಮುಖ್ಯಸ್ಥರ ಸ್ಥಾನದಲ್ಲಿದ್ದರು. ಈಗ 29 ನೇ ವಾಯುಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ, (ಏಜೆನ್ಸೀಸ್​).