ಫರಿದಾಬಾದ್ನ ಸೆಕ್ಟರ್-8ನೇ ಪೊಲೀಸ್ ಠಾಣೆ
ಫರಿದಾಬಾದ್: ಹರಿಯಾಣದ ಫರಿದಾಬಾದ್ನ ಸೆಕ್ಟರ್-8ನೇ ಪೊಲೀಸ್ ಠಾಣೆಯ(Police station) ಶಸ್ತ್ರಾಸ್ತ್ರ ಕೊಠಡಿಯಿಂದ ಪರವಾನಿಗೆ ಪಡೆದಿದ್ದ ಬಂದೂಕು ಸೇರಿ 32 ಪಿಸ್ತೂಲ್ ಕಳವು ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಠಾಣೆಯ ಎಎಸ್ಐ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಶನಿವಾರ (ಜೂ. 27) ವರದಿಯಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಠಾಣೆಯ ಶಸ್ತ್ರಾಸ್ತ್ರ ಕೊಠಡಿಯಿಂದ ಪೊಲೀಸರ ವಶದಲ್ಲಿ ಇರಿಸಲಾಗಿದ್ದ ಮೂವತ್ತೆರಡು ಪರವಾನಗಿ ಪಡೆದ ಶಸ್ತ್ರಾಸ್ತ್ರಗಳನ್ನು ಕಳವು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಕೊಠಡಿಯ ಉಸ್ತುವಾರಿ ಎಎಸ್ಐ ಬಿಜೇಂದ್ರ ಸಿಂಗ್ ವಿರುದ್ಧ ದೂರು ದಾಖಲಾಗಿದ್ದು, ಅವರನ್ನು ಪೊಲೀಸ್ ಆಯುಕ್ತ ಸತೇಂದರ್ ಕುಮಾರ್ ಗುಪ್ತಾ ಅಮಾನತು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಈ ಶಸ್ತ್ರಾಸ್ತ್ರಗಳನ್ನು ಸುರಕ್ಷಿತವಾಗಿಡಲು ಸ್ವಯಂಪ್ರೇರಣೆಯಿಂದ ಪೊಲೀಸ್ ಠಾಣೆಯಲ್ಲಿ ಠೇವಣಿ ಇಟ್ಟಿದ್ದರು. ಅಗತ್ಯವಿದ್ದಾಗ ಅವುಗಳನ್ನು ಮರಳಿ ಪಡೆಯುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಕಾಣೆಯಾದ ಶಸ್ತ್ರಾಸ್ತ್ರಗಳಲ್ಲಿ ಹಲವಾರು ವಿದೇಶಿ ನಿರ್ಮಿತ ಬಂದೂಕುಗಳು ಸೇರಿವೆ, ಅವುಗಳ ಮೌಲ್ಯ 2 ಲಕ್ಷದಿಂದ 10 ಲಕ್ಷ ರೂ.ಗಳವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.
ಇನ್ನೂ ಕಳುವುವಾಗಿರುವಲ್ಲಿ ದುಬಾರಿ ವಿದೇಶಿ ಪಿಸ್ತೂಲುಗಳು ಸೇರಿವೆ. ಈ ಶಸ್ತ್ರಾಸ್ತ್ರಗಳನ್ನು ರಾಜಸ್ಥಾನ ಮತ್ತು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಮಾರಾಟ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಪೊಲೀಸರು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ನಿಯಮಿತ ತಪಾಸಣೆ ವೇಳೆ ಶಸ್ತ್ರಾಸ್ತ್ರಗಳು ಕಳ್ಳತನವಾಗಿರುವುದು ಪತ್ತೆಯಾಗಿದೆ.
ಆರಂಭದ ತನಿಖೆಯಲ್ಲಿ ಕೇವಲ 13 ಶಸ್ತ್ರಾಸ್ತ್ರಗಳು ಕಾಣೆಯಾಗಿವೆ ಎಂದು ತಿಳಿದುಬಂದಿತ್ತು. ಆದರೆ ಸಮಗ್ರ ತನಿಖೆ ಬಳಿಕ ಅವುಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದ್ದು, ಬಳಿಕ ಹಿರಿಯ ಅಧಿಕಾರಿಗಳು ಅವುಗಳ ಬಗ್ಗೆ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).