ಸಾಂದರ್ಭಿಕ ಚಿತ್ರ  
ದೇಶ

ಈ ರಾಜ್ಯದ 3000 ಶಾಲೆಗಳಿಗಿಲ್ಲ ಗೋಡೆ, ಮೇಲ್ಛಾವಣಿ! ಡಿಜಿಟಲ್​ ಯುಗದಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕಿಲ್ಲ ಭದ್ರತೆ | Schools

ಪ್ರಮುಖ ಮುಖ್ಯಾಂಶಗಳು

  • ಪಾಠ ಕೇಳಲು ಸರಿಯಾದ ಗೋಡೆ, ಮೇಲ್ಛಾವಣಿಗಳೇ ಇಲ್ಲದ ಕಟ್ಟಡಗಳು
  • ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸ ಹಿಂದುಳಿಯುತ್ತಿದೆ ಎಂಬ ಅಧಿಕೃತ ದತ್ತಾಂಶ ಬೆಳಕಿಗೆ
  • ಈ ಕಹಿ ವಾಸ್ತವ ಬಿಚ್ಚಿಟ್ಟ UDISE+ 2025–26ರ ಅಧಿಕೃತ ದತ್ತಾಂಶ
ಪಾಟ್ನಾ: ಒಂದು ಕಡೆ ಆಧುನಿಕ ಶಿಕ್ಷಣ, ಡಿಜಿಟಲ್ ತರಗತಿಗಳು ಮಕ್ಕಳ ಭವಿಷ್ಯಕ್ಕೆ ದೊಡ್ಡ ಕೊಡುಗೆಯಾಗಿ ನಿಂತಿದ್ದರೆ, ಅತ್ತ ಕುಳಿತು ಪಾಠ ಕೇಳಲು ಸರಿಯಾದ ಗೋಡೆ, ಮೇಲ್ಛಾವಣಿಗಳೇ ಇಲ್ಲದ ಕಟ್ಟಡಗಳಿಂದ ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸ ಹಿಂದುಳಿಯುತ್ತಿದೆ ಎಂಬ ಅಧಿಕೃತ ದತ್ತಾಂಶವು ಸದ್ಯ ಭಾರಿ ಕಳವಳಕ್ಕೆ ಕಾರಣವಾಗಿದೆ.  
ನೆತ್ತಿಯ ಮೇಲೆ ಸೂರಿಲ್ಲದೆ, ನಾಲ್ಕು ಗೋಡೆಗಳೇ ಇಲ್ಲದ ಶಾಲೆಯ ಅಂಗಳದಲ್ಲಿ ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸರಿಯಾದ ಅಡಿಪಾಯ, ಭದ್ರತೆ ಇಲ್ಲದಿರುವುದು ದೇಶದಲ್ಲಿ ತೀವ್ರ ಆತಂಕ ಹುಟ್ಟುಹಾಕಿದೆ. ಮುಂಗಾರು ಅಧಿವೇಶನದಲ್ಲಿ, UDISE+ 2025–26ರ ಅಧಿಕೃತ ದತ್ತಾಂಶವು ಈ ಕಹಿ ವಾಸ್ತವವನ್ನು ಸರ್ಕಾರ ಮುಂದೆ ಬಿಚ್ಚಿಟ್ಟಿದೆ. ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದು, ಪರೀಕ್ಷೆಗೆ ಸಿದ್ಧವಾಗುವುದಕ್ಕಿಂತ ಒಂದು ಕಡೆ ಕುಳಿತು ಪಾಠ ಕೇಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ವಿವರಿಸಲಾಗಿದೆ. 

2,996 ಶಾಲೆಗಳಿಗೆ ಸೂಕ್ತ ಕಟ್ಟಡವೇ ಇಲ್ಲ

ಸರ್ಕಾರಿ ವರದಿಯ ಪ್ರಕಾರ, ಬಿಹಾರದ 35 ಜಿಲ್ಲೆಗಳಲ್ಲಿನ ಶಿಕ್ಷಣ ವ್ಯವಸ್ಥೆಯ ಸ್ಥಿತಿ ಹೀಗಿದ್ದು, ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಒಟ್ಟು 2,276 ಶಾಲೆಗಳು ಕಟ್ಟಡವಿಲ್ಲದೆಯೇ ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ, ಉನ್ನತ ಪ್ರೌಢಶಾಲೆಗಳು (+2) 720ಕ್ಕೂ ಅಧಿಕ ಶಾಲೆಗಳಿಗೆ ಇನ್ನೂ ಕಟ್ಟಡದ ಭಾಗ್ಯವೇ ದೊರೆತಿಲ್ಲ. ಅಲ್ಲಿಗೆ, ರಾಜ್ಯವ್ಯಾಪಿ ಒಟ್ಟು 2,996 ಸರ್ಕಾರಿ ಶಾಲೆಗಳು ಸ್ವಂತ ಕಟ್ಟಡವಿಲ್ಲದೆ, ಬಯಲು ಪ್ರದೇಶಗಳಲ್ಲಿ ಅಥವಾ ತಾತ್ಕಾಲಿಕ ವ್ಯವಸ್ಥೆಗಳ ಸಹಾಯದಿಂದ ಮಕ್ಕಳಿಗೆ ಪಾಠ ಹೇಳಿಕೊಡುತ್ತಿವೆ ಎನ್ನಲಾಗಿದೆ. 
ಜೆಡಿಯು ಶಾಸಕ ಮಂಜೀತ್ ಸಿಂಗ್ ಅವರು ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, "ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸುಮಾರು 3 ಕೋಟಿ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಆದರೆ, ಸರಿಯಾದ ಮೂಲಸೌಕರ್ಯವೇ ಇಲ್ಲದಿರುವಾಗ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವುದು ಹೇಗೆ ಸಾಧ್ಯ?" ಎಂದು ಸರ್ಕಾರವನ್ನು ಪ್ರಶ್ನಿಸಿದರು. 

ಶಾಲೆಗೆ ಕಟ್ಟಡವಿಲ್ಲದಿರಲು ಕಾರಣವೇನು?

ಶಾಸಕರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ, ಸಮಸ್ಯೆ ಇರುವುದು ಸತ್ಯ. ಶಾಲೆಗಳಿಗೆ ಕಟ್ಟಡ ನಿರ್ಮಿಸಲು ಸರಿಯಾದ ಜಾಗ ಅಥವಾ ಭೂಮಿ ಲಭ್ಯವಿಲ್ಲದಿರುವುದು ಇದಕ್ಕೆ ಮುಖ್ಯ ಕಾರಣ. ಇದೇ ನಮಗೂ ಕಾಡುತ್ತಿರುವ ದೊಡ್ಡ ಸವಾಲು. ಈಗಾಗಲೇ, ನೆಲ ಹಾಗೂ ಕಟ್ಟಡ ಎರಡೂ ಇಲ್ಲದ ಶಾಲೆಗಳ ನಿಖರ ಪಟ್ಟಿಯನ್ನು ಕೇವಲ ಒಂದು ವಾರದೊಳಗೆ ಸಿದ್ಧಪಡಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ ಎಂದು ಹೇಳಿದರು.

834.18 ಕೋಟಿ ರೂ. ಮಂಜೂರು, ಶೀಘ್ರ ಪರಿಹಾರ?

ಪರಿಸ್ಥಿತಿಯನ್ನು ಸುಧಾರಿಸಲು ಸರ್ಕಾರ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದ್ದು, ರಾಜ್ಯದಲ್ಲಿರುವ 9,297 ಉನ್ನತ ಪ್ರೌಢಶಾಲೆಗಳಲ್ಲಿ (+2) ಕಟ್ಟಡವಿಲ್ಲದ 720 ಶಾಲೆಗಳ ಪೈಕಿ 677 ಶಾಲೆಗಳ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಈ ಯೋಜನೆಗಾಗಿ 834.18 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಅದರಲ್ಲಿ 284 ಕೋಟಿ ರೂ. ಅನ್ನು ನಿರ್ಮಾಣ ಕಾರ್ಯಕ್ಕಾಗಿ ಬಿಡುಗಡೆಗೊಳಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಜಾಗವಿಲ್ಲದ ಶಾಲೆಗಳಿಗೆ ಕಂದಾಯ ಮತ್ತು ಭೂ ಸುಧಾರಣೆ ಇಲಾಖೆಯ ನೆರವಿನಿಂದ ಜಾಗ ಗುರುತಿಸಿ, ಶೀಘ್ರದಲ್ಲೇ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ. ಸದ್ಯಕ್ಕೆ ಯಾವ ಸರ್ಕಾರಿ ಶಾಲೆಯೂ ಕಟ್ಟಡವಿಲ್ಲದೆ ಉಳಿಯಬಾರದು ಎಂಬುದು ಮುಖ್ಯ ಗುರಿಯಾಗಿದ್ದರೂ, ಅನುದಾನ ಬಿಡುಗಡೆಯಾಗಿ ಕಟ್ಟಡಗಳು ತಲೆ ಎತ್ತುವವರೆಗೆ ಬಿಹಾರದ ಸಾವಿರಾರು ಮಕ್ಕಳಿಗೆ ಗೋಡೆಗಳಿಲ್ಲದ ತರಗತಿಗಳೇ ಗತಿಯಾಗಿದೆ,(ಏಜೆನ್ಸೀಸ್).