Gas cylinders float in river Patala Ganga
- ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹ.
- ಭಾರಿ ಮಳೆಗೆ ಕುಸಿದ HPCL ಘಟಕದ ಗೋಡೆ, ಸಿಲಿಂಡರ್ ನದಿ ಪಾಲು.
- ನದಿಯಲ್ಲಿ ಸಿಗುವ ಗ್ಯಾಸ್ ಸಂಗ್ರಹಿಸದಂತೆ ನಾಗರಿಕರಿಗೆ ಮನವಿ ಮಾಡಿಕೊಂಡ ಡಿಸಿ.
ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ ಎರಡು ದಿನದಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ, ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ರಾಯಗಢ ಜಿಲ್ಲೆಯ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಘಟಕಕ್ಕೆ ನೀರು ನುಗ್ಗಿದ ಪರಿಣಾಮ, ಕೇಂದ್ರದಲ್ಲಿದ್ದ 3 ಸಾವಿರಕ್ಕೂ(3000 Gas Cylinders Float In River ) ಹೆಚ್ಚು ಸಿಲಿಂಡರ್ಗಳು ಪಾತಾಳಗಂಗಾ ನದಿಗೆ ಕೊಚ್ಚಿಹೋಗುತ್ತಿರುವ ವಿಡಿಯೋಗಳು ಸದ್ಯ ಎಕ್ಸ್ನಲ್ಲಿ ಹರಿದಾಡುತ್ತಿದೆ.
ಇರಾನ್ ಮತ್ತು ಅಮೆರಿಕ, ಇಸ್ರೇಲ್ ಯುದ್ಧದಿಂದಾಗಿ ಅಡುಗೆ ಅನಿಲ ಹಾಗೂ ಕಮರ್ಷಿಯಲ್ ಗ್ಯಾಸ್ ಪೂರೈಕೆ ವಿಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸದ್ಯ ಪರಿಸ್ಥಿತಿ ತಹಬದಿಗೆ ಬಂದ ಹೊತ್ತಲ್ಲೇ ಮಳೆ ಹಾಗೂ ಪ್ರವಾಹದಿಂದಾಗಿ ಸಿಲಿಂಡರ್ಗಳು ನದಿ ನೀರಿನಲ್ಲಿ ರಾಶಿ ರಾಶಿ ತೇಲಿ ಹೋಗುತ್ತಿರುವ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿ, ಕಾಮೆಂಟ್ ಮಾಡುತ್ತಿದ್ದಾರೆ.
ನದಿ ಸೇರಿದ ಸಿಲಿಂಡರ್ಗಳು
ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಒಂದೆಡೆ ರಸ್ತೆಗಳು, ಮನೆ ರೈಲಿನ ಹಳಿಗಳು ಜಲಾವೃತಗೊಂಡಿರುವ ಪರಿಣಾಮ ಜನರು ಸಾಕಷ್ಟು ಸಂಕಷ್ಟಕ್ಕೆ ಈಡಾಗಿದ್ದರು.ಸದ್ಯ ವರುಣನ ಅಬ್ಬರಕ್ಕೆ ಪಾತಾಳ ಗಂಗಾ ನದಿ ಉಕ್ಕಿ ಹರಿದಿದ್ದು, ಪನ್ವೇಲ್ ತಾಲೂಕಿನ ಚವಾನೆಯಲ್ಲಿರುವ HCPL ಬ್ಲಾಟಿಂಗ್ ಪ್ಲಾಂಟ್ಗೆ ನೀರು ನುಗ್ಗಿ ಕಚೇರಿಯ ಗೋಡೆ ಕುಸಿದು ಬಿದ್ದಿದೆ. ಇದರ ಪರಿಣಾಮ ಅಲ್ಲಿ ಸಂಗ್ರಹವಾಗಿದ್ದ ಸಿಲಿಂಡರ್ಗಳು ನದಿ ಪಾಲಾಗಿವೆ ಎನ್ನಲಾಗಿದೆ.
ನದಿ ಪಾಲಾದ ಸಿಲಿಂಡರ್ಗಳು ಬಳಕೆಗೆ ಸುರಕ್ಷಿತವೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಗ್ಯಾರಂಟಿಯೂ ಇಲ್ಲ. ಕುತೂಹಲದಿಂದ ಅಥವಾ ವೈಯಕ್ತಿಕ ಬಳಕೆಗಾಗಿ ಅವುಗಳನ್ನು ರತ್ತಿಕೊಂಡು ಮನೆಗೆ ಕೊಂಡಿಯ್ಯುವುದು ಅಪಾಯಕಾರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಪತ್ತೆ ಕಾರ್ಯ ಮುಂದುವರಿಕೆ
ಕೊಚ್ಚಿ ಹೋದ ಸಿಲಿಂಡರ್ಗಳು ಎಲ್ಲಿವೆ ಎನ್ನುವುದನ್ನು ಪತ್ತೆ ಹಚ್ಚಲು ಹಾಗೂ ಜನರು ಈಗಾಗಲೇ ಕೊಂಡೊಯ್ದಿರುವ ಸಿಲಿಂಡರ್ ಮರುಪಡೆದುಕೊಳ್ಳಲು ತಾಂತ್ರಿಕ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಇದ ಇದುವರೆಗೂ 1000 ಸಿಲಿಂಡರ್ಗಳನ್ನು ಸಂಗ್ರಹಿಸಲಾಗಿದೆ. ಪತ್ತೆ ಕಾರ್ಯ ಮುಂದುವರೆದಿದೆ ಎನ್ನಲಾಗಿದೆ.
ಪಾತಾಳ ಗಂಗಾ ನದಿ ಬಳಿ ಅಥವಾ ನದಿ ಹತ್ತಿರ ಕಂಡು ಬರುವ ಸಿಲಿಂಡರ್ಗಳನ್ನು ಮುಟ್ಟುವುದಾಗಲಿ, ಅದನ್ನು ಎತ್ತಿಕೊಂಡು ಸಂಗ್ರಹಿಸಿಟ್ಟುಕೊಳ್ಳುವುದಾಗಲಿ ಮಾಡಬಾರದು ಎಂದು ರಾಯಗಢದ ಜಿಲ್ಲಾಧಿಕಾರಿ ಕಿಶನ್ ಜಾವ್ಲೆ ಸೂಚಿಸಿದ್ದಾರೆ, (ಏಜೆನ್ಸೀಸ್).