ಮದುವೆಯಾಗಿ 24 ಗಂಟೆಗಳಲ್ಲಿ ವಿಚ್ಛೇದನ ನೀಡಿದ ದಂಪತಿ
- 3 ವರ್ಷ ಪರಸ್ಪರ ಪ್ರೀತಿಸಿ, ದಾಂಪತ್ಯಕ್ಕೆ ಕಾಲಿಟ್ಟ ಜೋಡಿ
- ಮದುವೆಯಾದ 24 ಗಂಟೆಗಳಲ್ಲಿ ಡಿವೋರ್ಸ್
- ಒಂದು ಸಣ್ಣ ವಿಚಾರಕ್ಕೆ ಬೇಸತ್ತು ಮದುವೆ ಮುರಿದುಕೊಂಡ ದಂಪತಿ
ಪುಣೆ: ಮೂರು ಗಂಟಿನ ಮದುವೆ ನೂರಾರು ವರ್ಷಗಳ ನಂಟು ಬೆಸೆಯುತ್ತದೆ ಎಂಬ ಹಿರಿಯರ ಮಾತು ಸುಳ್ಳಲ್ಲ ಬಿಡಿ. ದಾಂಪತ್ಯ ಜೀವನಕ್ಕೆ ಕಾಲಿಡುವ ಪ್ರತಿ ಹೆಣ್ಣು-ಗಂಡಿಗೂ ಅವರದ್ದೇ ಆದ ಆಸೆ, ಆಕಾಂಕ್ಷೆಗಳು ಮನದಲ್ಲಿರುತ್ತದೆ. ಕೆಲವರು ಪ್ರೀತಿಸಿ, ವಿವಾಹ ಆಗಬೇಕು ಎಂದು ಬಯಸಿದರೆ, ಇನ್ನೂ ಕೆಲವರು ತಂದೆ-ತಾಯಿಯ ಇಚ್ಛೆಯಂತೆ ಮದುವೆಯಾಗುತ್ತಾರೆ. ಆದರೆ, ಖುಷಿ, ಸಂಭ್ರಮದ ಛಾಯೆಯಲ್ಲಿ ನಡೆದ ವಿವಾಹ ಒಂದು ಸಣ್ಣ ವಿಚಾರಕ್ಕೆ ಅಥವಾ ತಪ್ಪುಗಳಿಂದ ಮುರಿದು ಬೀಳುವುದು ನಿಜಕ್ಕೂ ಎಂಥವರಿಗೂ ಸಹಿಸಲಾಗದು. ಸದ್ಯ ಇಲ್ಲೊಂದು ಘಟನೆ ಕೂಡ ಅದನ್ನೇ ಹೇಳಿದೆ.
ಅಚ್ಚರಿ ಎಂದರೆ, ಮೂರು ವರ್ಷಗಳಿಂದ ಪ್ರೀತಿಸಿ ಮದುವೆಯಾದ ಜೋಡಿ, ಒಂದು ಸಣ್ಣ ವಿಚಾರಕ್ಕೆ ಶುರುವಾದ ಭಿನ್ನಾಭಿಪ್ರಾಯಗಳಿಂದ ಬೇಸತ್ತು, ಸಪ್ತಪದಿ ತುಳಿದ 24 ಗಂಟೆಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು ಸ್ಥಳೀಯವಾಗಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿವೋರ್ಸ್ ಲಾಯರ್ ಮಾತನಾಡಿ, "ಇಬ್ಬರೂ ಮದುವೆಗೆ ಮುನ್ನ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ವೃತ್ತಿಯಲ್ಲಿ ವೈದ್ಯೆಯಾದರೆ, ಯುವಕ ಇಂಜಿನಿಯರ್ ಆಗಿದ್ದಾನೆ. ಇವರಿಬ್ಬರು ಅಂದುಕೊಂಡಂತೆ ವಿವಾಹ ಚೆನ್ನಾಗಿಯೇ ನಡೆದಿದೆ. ಆದರೆ, ಮದುವೆಯ ಬಳಿಕ ಯಾವ ನಗರದಲ್ಲಿ ಜೀವನ ನಡೆಸಬೇಕು? ಎಂಬ ಪ್ರಶ್ನೆ ಉದ್ಬವಿಸಿದೆ. ಇದರಲ್ಲಿ ಇಬ್ಬರ ಅನಿಸಿಕೆ ಭಿನ್ನವಾಗಿದ್ದ ಕಾರಣ, ಒಬ್ಬರ ಮಾತನ್ನು ಮತ್ತೊಬ್ಬರು ಒಪ್ಪಿಲ್ಲ. ಹೀಗಾಗಿ, ಯುವ ಜೋಡಿ ತಾವು ಬೇರ್ಪಡುವುದೇ ಸರಿ ಎಂದು ನಿರ್ಧರಿಸಿದ್ದಾರೆ" ಎಂದರು.
ಈ ಕೇಸ್ನಲ್ಲಿ ಯಾವುದೇ ಹಿಂಸಾಚಾರ ಅಥವಾ ಕ್ರಿಮಿನಲ್ ಚಟುವಟಿಕೆಯ ಆರೋಪಗಳಿಲ್ಲ. ದಂಪತಿಗಳು ಪರಸ್ಪರ ಚರ್ಚಿಸಿ, ಕಾನೂನು ಪ್ರಕ್ರಿಯೆ ಮೂಲಕ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಷಯವಂತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಭಾರತದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ತೀರ ಕಳವಳ ವ್ಯಕ್ತವಾಗಿದೆ,(ಏಜೆನ್ಸೀಸ್).