3 ವರ್ಷದ ಮಗುವಿಗೆ ಡೇ ಕೇರ್‌ನಲ್ಲಿ ಹಲ್ಲೆ ಆರೋಪ
- ಡೇ ಕೇರ್‌ನಲ್ಲಿ 3 ವರ್ಷದ ಮಗುವಿನ ಮೇಲೆ ಕೇರ್‌ಟೇಕರ್ ಕ್ರೌರ್ಯ
- ಕುರ್ಚಿಗೆ ಮಗುವನ್ನು ಕಟ್ಟಿ ಹಾಕಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
- ಮಗುವಿನ ಮುಖ ಹಾಗೂ ಕೈಗಳ ಮೇಲೆ ಗಾಯದ ಗುರುತು
Child abuse: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 3 ವರ್ಷದ ಮಗುವಿಗೆ ಡೇ ಕೇರ್‌ನಲ್ಲಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಪ್ರಕರಣ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.ಮಗುವಿಗೆ ಹಲ್ಲೆ ನಡೆಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎನ್ನಲಾಗಿದೆ.
ಇನ್ನು, ಈ ಘಟನೆ ಈಶಾನ್ಯ ದೆಹಲಿಯ ಮೌಜ್‌ಪುರ ಪ್ರದೇಶದಲ್ಲಿ ನಡೆದಿದ್ದು, ವೈರಲ್ ಆಗಿರುವ ಸಿಸಿಟಿವಿ ದೃಶ್ಯದಲ್ಲಿ, ಪುಟ್ಟ ಮಗುವನ್ನು ಸಣ್ಣ ಪ್ಲಾಸ್ಟಿಕ್ ಕುರ್ಚಿಯಲ್ಲಿ ಕೂರಿಸಿ, ಅದನ್ನು ಕಾಲಿನಿಂದ ತಳ್ಳುತ್ತಿರುವುದು, ಬಳಿಕ ಮಗುವಿಗೆ ಹೊಡೆಯುತ್ತಿರುವುದು ಕಂಡುಬಂದಿದೆ.
ಕುರ್ಚಿಗೆ ಕಟ್ಟಿ ಹಲ್ಲೆ ಆರೋಪ
ಮಗುವಿಗೆ ಕಿವಿ ನೋವು ಕಾಣಿಸಿಕೊಂಡ ಬಳಿಕ ಪೋಷಕರಿಗೆ ಶಂಕೆ ಶುರುವಾಗಿದೆ. ಮುಖ ಹಾಗೂ ಕೈಗಳ ಮೇಲೆ ಗಾಯದ ಗುರುತುಗಳನ್ನೂ ಕಂಡು, ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಎರಡೂ ಕಿವಿಗಳಲ್ಲಿ ಊತವಿದ್ದು, ಹಲ್ಲೆಯಿಂದ ಗಾಯಗಳು ಆಗಿರುವ ಸಾಧ್ಯತೆ ಇದೆ ಎಂದಿದ್ದಾರೆ. ಈ ಬಗ್ಗೆ ಡೇ ಕೇರ್ನವರನ್ನು ಪ್ರಶ್ನಿಸಿದಾಗ, ಹಲ್ಲೆ ನಡೆದಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ ಎನ್ನಲಾಗಿದೆ.
ಸಿಸಿಟಿವಿ ವಿಡಿಯೋ ಪಡೆಯಲು ಲಂಚ?
ಮಗುವಿನ ತಂದೆ ಸಿಸಿಟಿವಿ ದೃಶ್ಯಗಳನ್ನು ಕೇಳಿದಾಗ, ಶಾಲೆಯವರು 1,500 ರೂ. ಪಾವತಿಸಿದ ಬಳಿಕವಷ್ಟೇ ಕ್ಯಾಮೆರಾ ಲಾಗಿನ್ ಹಾಗೂ ದೃಶ್ಯಗಳ ಪ್ರವೇಶ ನೀಡಿದರು ಎಂದು ಆರೋಪಿಸಿದ್ದಾರೆ. ಆಗಸ್ಟ್ 16, 17 ಮತ್ತು 18ರ ಸಿಸಿಟಿವಿ ದೃಶ್ಯಗಳನ್ನು ಮಗುವಿನ ತಾಯಿ ಪರಿಶೀಲಿಸಿದ್ದು, ಅದರಲ್ಲಿ ಮಗುವನ್ನು ಏಪ್ರನ್‌ನಿಂದ ಕುರ್ಚಿಗೆ ಕಟ್ಟಿಹಾಕಿ, ಶಿಕ್ಷಕಿ ಮತ್ತು ಕೇರ್‌ಟೇಕರ್ ಮಗುವಿಗೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ ಎಂದು ಕುಟುಂಬ ಆರೋಪಿಸಿದೆ.
ಪೋಕ್ಸೊ ಅಡಿ ಪ್ರಕರಣ
ಈ ಘಟನೆ ಸಂಬಂಧ ದೆಹಲಿ ಪೊಲೀಸರು ಪೋಕ್ಸೊ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ. ಶಾಲೆಯ ನಿರ್ದೇಶಕಿ ಸುನೀತಾ ಬನ್ಸಾಲ್, ಪ್ರಾಂಶುಪಾಲೆ ನೀಲಂ ಹಾಗೂ ಶಿಕ್ಷಕರಾದ ಸಿಮ್ರಾನ್ ಮತ್ತು ಪೂಜಾ ಅವರ ವಿರುದ್ಧ ಆರೋಪ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರ್‌ಟೇಕರ್ ಒಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವಿನ ತಂದೆ, ಮೂರು ಗಂಟೆಗಳ ಕಾಲ ಮಗುವನ್ನು ಕುರ್ಚಿಗೆ ಕಟ್ಟಿ ನಿರಂತರವಾಗಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಘಟನೆ ಡೇ ಕೇರ್ಗಳಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ, ಸಧ್ಯ ಪ್ರಕರಣದ ತನಿಖೆ ಮುಂದುವರಿದಿದೆ,(ಏಜೆನ್ಸೀಸ್).