ಲಂಡನ್: ಪ್ರೀತಿಯಲ್ಲಿ ಇರುವಾಗ ಪ್ರಿಯಕರ ಅಥವಾ ಪ್ರಿಯತಮೆಗೆ(Girlfriend) ದುಬಾರಿ ಉಡುಗೊರೆಗಳನ್ನು (Gifts) ನೀಡುವುದು ಸಾಮಾನ್ಯ. ಆದರೆ, ಯುವತಿಯೊಬ್ಬಳು ತನಗೆ ಬೇಕಾಗಿದ್ದ 3 ಲಕ್ಷ ರೂಪಾಯಿ ಬೆಲೆಯ ಕಂಪ್ಯೂಟರ್ ಸಿಗುವವರೆಗೂ ಕಾಯ್ದು, ಅದು ಸಿಕ್ಕ ಮರುದಿನವೇ ಬಾಯ್‌ಫ್ರೆಂಡ್‌ಗೆ ಕೈಕೊಟ್ಟಿರುವ ವಿಲಕ್ಷಣ ಘಟನೆಯೊಂದು ಯುಕೆ (UK) ನಲ್ಲಿ ನಡೆದಿದೆ. ಇದರಿಂದ ದೆವ್ವ ಬಿಟ್ಟಂತಾಗಿರುವ ಯುವಕ, ಈಗ ಕಾನೂನು ಸಹಾಯಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಮೊರೆ ಇಟ್ಟಿದ್ದಾನೆ.
ನಡೆದಿದ್ದೇನು?
ಯುವಕ ಮತ್ತು ಆತನ ಗರ್ಲ್‌ಫ್ರೆಂಡ್ ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆಕೆಗೆ ಗೇಮಿಂಗ್ ಕಂಪ್ಯೂಟರ್ ಎಂದರೆ ತುಂಬಾ ಇಷ್ಟವಾಗಿತ್ತು. ಇದೇ ಕಾರಣಕ್ಕೆ ಯುವಕ ಆಕೆಯ ಹುಟ್ಟುಹಬ್ಬದ ದಿನ ಸುಮಾರು 3.1 ಲಕ್ಷ ರೂಪಾಯಿ (£2500) ಬೆಲೆಯ ದುಬಾರಿ ಗೇಮಿಂಗ್ ಪಿಸಿಯನ್ನು (Gaming PC) ಗಿಫ್ಟ್ ಆಗಿ ನೀಡಿದ್ದನು. ಆದರೆ, ಗಿಫ್ಟ್ ಸಿಕ್ಕ ಮರುದಿನವೇ ಆಕೆ ಬ್ರೇಕಪ್ ಹೇಳಿ ಆತನಿಗೆ ಶಾಕ್ ನೀಡಿದ್ದಾಳೆ.
ಸ್ನೇಹಿತರಿಂದ ಬಯಲಾಯ್ತು ಅಸಲಿ ರಹಸ್ಯ!
"ನನಗೆ ಬ್ರೇಕಪ್ ವಿಷಯ ಕೇಳಿ ತುಂಬಾ ಬೇಸರವಾಯಿತು. ಯಾರೂ ನನ್ನನ್ನು ಈ ರೀತಿ ಬಳಸಿಕೊಂಡಿರಲಿಲ್ಲ" ಎಂದು ಆ ಯುವಕ ರೆಡ್ಡಿಟ್ (Reddit) ಜಾಲತಾಣದಲ್ಲಿ ತನ್ನ ಅಳಲು ತೋಡಿಕೊಂಡಿದ್ದಾನೆ. ನಂತರ ಆಕೆಯ ಸ್ನೇಹಿತರ ಮೂಲಕ ಯುವಕನಿಗೆ ಅಸಲಿ ವಿಷಯ ಗೊತ್ತಾಗಿದೆ. ಆಕೆ ಕಳೆದ ಕೆಲವು ತಿಂಗಳುಗಳಿಂದಲೇ ಬ್ರೇಕಪ್ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಳಂತೆ. ಆದರೆ ಈ ದುಬಾರಿ ಕಂಪ್ಯೂಟರ್ ಸಿಗಲಿ ಎಂದೇ ಕಾಯುತ್ತಿದ್ದಳು ಎಂಬ ರಹಸ್ಯ ವಾಟ್ಸಾಪ್ ಚಾಟ್ ಸ್ಕ್ರೀನ್‌ಶಾಟ್‌ಗಳ ಮೂಲಕ ಯುವಕನಿಗೆ ಸಿಕ್ಕಿದೆ.
ಕಾನೂನು ಏನನ್ನುತ್ತದೆ?
ಯುಕೆಯ ಕಾನೂನಿನ ಪ್ರಕಾರ, ಒಮ್ಮೆ ಪ್ರೀತಿಯಿಂದ ಕೊಟ್ಟ ಗಿಫ್ಟ್ ಅನ್ನು ಮರಳಿ ಪಡೆಯಲು ಬರುವುದಿಲ್ಲ. ಅದು ಆ ಯುವತಿಯ ಸ್ವತ್ತಾಗಿರುತ್ತದೆ. ಆದರೆ, "ಆಕೆ ನನ್ನ ಗರ್ಲ್‌ಫ್ರೆಂಡ್ ಆಗಿಲ್ಲದೇ ಹೋಗಿದ್ದರೆ ನಾನು ಅಷ್ಟು ಹಣ ಖರ್ಚು ಮಾಡುತ್ತಿರಲಿಲ್ಲ. ಆಕೆ ಮೊದಲೇ ಪ್ಲಾನ್ ಮಾಡಿ ನನಗೆ ಮೋಸ ಮಾಡಿದ್ದಾಳೆ. ಹೀಗಾಗಿ ಆ ಕಂಪ್ಯೂಟರ್ ಅನ್ನು ವಾಪಸ್ ಪಡೆಯಲು ಬೇರೆನಾದರೂ ದಾರಿಯಿದೆಯೇ?" ಎಂದು ಯುವಕ ನೆಟ್ಟಿಗರ ಬಳಿ ಕಾನೂನು ಸಲಹೆ ಕೇಳಿದ್ದಾನೆ.
ನೆಟ್ಟಿಗರ ಪ್ರತಿಕ್ರಿಯೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಯುವಕನಿಗೆ ಧೈರ್ಯ ತುಂಬಿದ್ದಾರೆ. "ಆಕೆ ಮಾಡಿದ್ದು ದೊಡ್ಡ ತಪ್ಪು, ಆದರೆ ಕಾನೂನುಬದ್ಧವಾಗಿ ಆ ಕಂಪ್ಯೂಟರ್ ಅವಳಿಗೆ ಸೇರುತ್ತದೆ. ಕೋರ್ಟ್‌ಗೆ ಹೋದರೆ ಕಂಪ್ಯೂಟರ್ ಬೆಲೆಗಿಂತ ವಕೀಲರ ಖರ್ಚೇ ಜಾಸ್ತಿಯಾಗುತ್ತದೆ. ಇಂತಹ ಕೆಟ್ಟ ಗುಣದ ಹುಡುಗಿ ನಿಮ್ಮ ಜೀವನದಿಂದ ದೂರವಾಗಿದ್ದಕ್ಕೆ 3 ಲಕ್ಷ ರೂಪಾಯಿಯನ್ನು ಕ್ಯಾನ್ಸಲೇಶನ್ ಫೀಸ್ ಎಂದು ಅಂದುಕೊಂಡು ಸುಮ್ಮನಾಗಿಬಿಡಿ" ಎಂದು ಹಲವರು ಸಲಹೆ ನೀಡಿದ್ದಾರೆ. ಇನ್ನು ಕೆಲವರು, "ಕೋರ್ಟ್ ಮೆಟ್ಟಿಲೇರಿ ಆಕೆಯ ಮುಖವಾಡವನ್ನು ಎಲ್ಲರ ಮುಂದೆ ಕಳಚಿ" ಎಂದಿದ್ದಾರೆ,(ಏಜೆನ್ಸೀಸ್).